ಬೆಂಗಳೂರು:
ಈ ಹಿಂದೆ ದೇಶದ ರಾಷ್ಟ್ರಧ್ವಜ ಮತ್ತು ಸಂವಿಧಾನವನ್ನು ವಿರೋಧಿಸಿದ್ದ ಬಿಜೆಪಿ ಮತ್ತು ಆರೆಸ್ಸೆಸ್ ದೇಶಪ್ರೇಮದ ಬಗ್ಗೆ ಪ್ರಚಾರ ಮಾಡುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಹರಿಪ್ರಸಾದ್, ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಇತ್ತೀಚೆಗೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಸೋಮವಾರದಿಂದ ಮೈಸೂರಿನಲ್ಲಿ ಕಾಂಗ್ರೆಸ್ ಸರಣಿ ಪ್ರತಿಭಟನೆ ನಡೆಸಲಿದೆ ಎಂದು ಮಾಹಿತಿ ನೀಡಿದರು. ಅಮಿತ್ ಶಾ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ ಹರಿಪ್ರಸಾದ್, ಬಿಜೆಪಿಯವರಿಗೆ ಬಡವರು, ಹಿಂದುಳಿದವರು, ದಲಿತರು ಸೇರಿ ಕೆಳಹಂತದ ಜನ ಬೇಕಾಗಿಲ್ಲ.
ತಮ್ಮ ಅಡಿಯಾಳಾಗಿಯೇ ನೋಡುವ ಹುನ್ನಾರವಿದು’ ಎಂದೂ ಆರೋಪಿಸಿದರು. ‘ಸಾವರ್ಕರ್ ಮತ್ತು ಗೋಳ್ವಾಲ್ಕರ್ ಕೂಡ ಅಂಬೇಡ್ಕರ್ ಮತ್ತು ಅವರು ರಚಿಸಿದ ಸಂವಿಧಾನದ ಬಗ್ಗೆ ಇಂತಹದ್ದೇ ಕೀಳುಮಟ್ಟದ ಹೇಳಿಕೆಗಳನ್ನು ನೀಡಿದ್ದರು. ಈ ನಾಯಕರ ಹಿಂಬಾಲಕರಾದ ಶಾ ಇದೀಗ ಅಂಬೇಡ್ಕರ್ ಅವರ ಹೆಸರು ಹೇಳುವುದನ್ನು ಫ್ಯಾಷನ್ ಎಂದು ಕರೆಯುವ ಮೂಲಕ, ಅಂಬೇಡ್ಕರ್ ಕುರಿತು ಸಂಘದ ಆಂತರ್ಯದಲ್ಲಿರುವ ಅಸಹನೆಯನ್ನು ಹೊರಹಾಕಿದ್ದಾರೆ’ ಎಂದು ಕಿಡಿಕಾರಿದರು.
ಅಂಬೇಡ್ಕರ್ ವಿರುದ್ಧ ಹೇಳಿಕೆ ನೀಡುವ ಮೂಲಕ ಜಾತಿ ಗಣತಿ ಮಾಡಬೇಕೆಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಬೇಡಿಕೆಯಿಂದ ಗಮನ ಬೇರೆಡೆ ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಹರಿಪ್ರಸಾದ್ ಟೀಕಿಸಿದರು. ಸಂವಿಧಾನ ಮತ್ತು ಡಾ.ಅಂಬೇಡ್ಕರ್ ಅವರ ಪರಂಪರೆಯ ರಕ್ಷಣೆಗಾಗಿ ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದೆ ಎಂದು ಹೇಳಿದರು.
ಎಂಎಲ್ಸಿ ಸಿಟಿ ರವಿ ಅವರನ್ನು ನಕಲಿ ಎನ್‌ಕೌಂಟರ್‌ಗೆ ಒಳಪಡಿಸಲು ಕಾಂಗ್ರೆಸ್ ಯತ್ನಿಸಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಶಾ ಇಂತಹ ಕೃತ್ಯಗಳಿಗೆ ಹೆಸರಾಗಿದ್ದರು ಮತ್ತು ಈ ಹಿಂದೆ ಗುಜರಾತ್‌ನಿಂದ ಗಡಿಪಾರು ಆಗಿದ್ದರು ಎಂದು ಹೇಳಿದರು. “ಜೋಶಿ ಅವರು ಅಮಿತ್ ಶಾ ಅವರ ಆಪ್ತರು ಮತ್ತು ಹೀಗಾಗಿ ಶಾ ಅವರಿಂದ ಇದನ್ನೆಲ್ಲಾ ಕಲಿತಿದ್ದಾರೆ ಎಂದ ಹೇಳಿದರು. ರಾಹುಲ್ ಗಾಂಧಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಕೇಂದ್ರದ ಮಾಜಿ ಸಚಿವ ಪ್ರತಾಪ್ ಚಂದ್ರ ಸಾರಂಗಿ ಅವರ ಪ್ರಾಮಾಣಿಕತೆಯನ್ನು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
“ಅವನು (ಸಾರಂಗಿ) ತನ್ನ ಉಡುಪಿನಲ್ಲಿ ಸಂತನಂತೆ ಕಾಣುತ್ತಾನೆ, ಆದರೆ 1999 ರಲ್ಲಿ ಆಸ್ಟ್ರೇಲಿಯನ್ ಕ್ರಿಶ್ಚಿಯನ್ ಮಿಷನರಿ ಗ್ರಹಾಂ ಸ್ಟೇನ್ಸ್ ಮತ್ತು ಅವನ ಇಬ್ಬರು ಅಪ್ರಾಪ್ತ ಮಕ್ಕಳ ಕೊಲೆಗಾರನಾಗಿದ್ದನು. ಈ ಹಿಂದೆ ನಾನು ಒಡಿಶಾ ಉಸ್ತುವಾರಿಯಾಗಿ ಮೂರೂವರೆ ವರ್ಷ ಕಾರ್ಯನಿರ್ವಹಿಸಿದ್ದೆ. 1999 ಜ.22 ರಂದು ಜೀಪ್‌ನಲ್ಲಿ ಮಲಗಿದ್ದವರಿಗೆ ಬೆಂಕಿ ಹಚ್ಚಿ ದಹನ ಮಾಡಲಾಯಿತು. ಅದರಲ್ಲಿ ಆಗಿನ ಭಜರಂಗ ದಳದ ಅಧ್ಯಕ್ಷನಾಗಿದ್ದ ಇದೇ ಸಾರಂಗಿ ಕೈವಾಡವಿತ್ತು. ಈತನಿಗೆ ಗಲ್ಲು ಶಿಕ್ಷೆ ಕೂಡ ಆಗಿತ್ತು. ಆದರೆ, ಎಲ್.ಕೆ.ಆಡ್ವಾಣಿ ಅವರು ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲು ನೆರವಾಗಿದ್ದರು ಎಂದು ಹೇಳಿದರು.
ಸಂಘ ಪರಿವಾರದಲ್ಲಿ ಇರುವವರೆಲ್ಲರೂ ವಿಕೃತ ಮನೋಭಾವದವರು. ಈಗ ಅಂಬೇಡ್ಕರ್ ಬೆನ್ನು ಬಿದ್ದಿದ್ದಾರೆ. ಅಮಿತ್ ಶಾ ಅವರು ಲೆಕ್ಕಾಚಾರ ಹಾಕಿಯೇ ಹೇಳಿಕೆ ನೀಡಿದ್ದಾರೆ. ಅದು ಬಾಯಿ ತಪ್ಪಿನಿಂದ ಬಂದದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.