ದಾವಣಗೆರೆ:
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲುವಲ್ಲಿ ಸ್ಥಳೀಯ ಕೆಲ ಮುಖಂಡರಷ್ಟೇ ಅಲ್ಲ, ಕೆಲ ಬಿಜೆಪಿ ರಾಜ್ಯ ನಾಯಕರ ಪಾತ್ರವೂ ಇದೆ ಎಂದು ಹರಿಹರ ಬಿಜೆಪಿ ಶಾಸಕ ಹರೀಶ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಬೆಳವಣಿಗ ಅಚ್ಚರಿಗೆ ಕಾರಣವಾಗಿದೆ.
ಭಾನುವಾರ ಬಿಜೆಪಿ ಜಿಲ್ಲಾ ಘಟಕದಿಂದ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, 80-90 ದಶಕದಲ್ಲಿ ಕೋಮು ಗಲಭೆಯಲ್ಲಿ ಗುಂಡೇಟಿಗೆ ಬಲಿಯಾದವರು, ದುಷ್ಕರ್ಮಿಗಳಿಂದ ಹತ್ಯೆಯಾದವರು, ಗಂಡೇಟು ತಿಂದವರು ಹೀಗೆ ಸಾಕಷ್ಟು ಜನರ ತ್ಯಾಗ, ಹೋರಾಟದಿಂದ ಪಕ್ಷ ಬೆಳೆದು ಬಂದಿದೆ.
80ರ ದಶಕದಲ್ಲಿ 4 ಜನರು, 90 ದಶಕದಲ್ಲಿ 8 ಜನ ಹುತಾತ್ಮರಾದರು. ಅನಂತರ ಬಿಜೆಪಿ ಗಟ್ಟಿಯಾಗಿ ಬೇರೂರುತ್ತಾ ಬಂದಿತು. ದಾವಣಗೆರೆ ಕ್ಷೇತ್ರದ ಭಾಗವಾಗಿದ್ದ ಭೀಮಸಮುದ್ರದ ಜಿ.ಮಲ್ಲಿಕಾರ್ಜುನಪ್ಪ ಲೋಕಸಭೆಗೆ ಸ್ಪರ್ಧಿಸುವುದರೊಂದಿಗೆ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಿತು. ಇಂದು ಬಿಜೆಪಿಯಲ್ಲಿ ಹಲವರು ಶಾಸಕರು, ಸಚಿವರು, ನಿಗಮ ಮಂಡಳಿಗಳ ಅಧ್ಯಕ್ಷರಾಗಿದ್ದರೆ ಅದಕ್ಕೆ ಮಾಜಿ ಸಂಸದ ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಅವರ ಆಶೀರ್ವಾದ ಕಾರಣ ಎಂದು ಹೇಳಿದರು.
ಯಡಿಯೂರಪ್ಪ ಅವರು ಸಿದ್ದೇಶ್ವರ ಹಾಗೂ ನನಗೆ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಅದಕ್ಕೂ ಮೂರು ದಿನ ಮುಂಚೆಯೇ ಸಿದ್ದೇಶ್ವರಗೆ ಟಿಕೆಟ್ ನೀಡಬಾರದೆಂದು ಒಂದು ಗುಂಪು ಬೆಂಗಳೂರಿಗೆ ಹೋಗಿ ಬೀಡುಬಿಟ್ಟಿತ್ತು. ನಾನು, ಸಿದ್ದೇಶ್ವರ, ಮಾಜಿ ಸಚಿವ ಮುರುಗೇಶ ನಿರಾಣಿ ಸಮ್ಮುಖ ಯಡಿಯೂರಪ್ಪ ಜೊತೆಗೆ ಚರ್ಚಿಸಿದೆವು. ಪಕ್ಷದಿಂದ ಉಚ್ಛಾಟಿತರಾದವರಿಗೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಗ್ಗೆ ಪ್ರಶ್ನಿಸಿದಾಗ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಪರ ಮಾತನಾಡಿದ್ದು ಸೋಜಿಗ ಎನಿಸಿತ್ತು.
ವಿಜಯೇಂದ್ರ ದೌರ್ಜನ್ಯದ ರೀತಿ ವರ್ತಿಸಿದರೂ, ಯಡಿಯೂರಪ್ಪ ಮೌನ ವಹಿಸಿದ್ದರು. ಬೆಳಿಗ್ಗೆ ಪಕ್ಷಕ್ಕೆ ಸೇರ್ಪಡೆಯಾದವರು ಸಂಜೆ ದೆಹಲಿಗೆ ಹೋಗಿ ಜಿ.ಎಂ.ಸಿದ್ದೇಶ್ವರ ಹೊರಗಿನವರು ಅವರಿಗೆ ಟಿಕೆಟ್ ಕೊಡಬಾರದು ಎಂದು ಪ್ರೆಸ್ ಮೀಟ್ ಮಾಡುತ್ತಾರೆ. ಇದರ ಅರ್ಥ ಇವರ ಹಿಂದೆ ವಿಜಯೇಂದ್ರ, ಯಡಿಯೂರಪ್ಪ ಇದ್ದಾರೆ ಎಂದು ಅರ್ಥ ಅಲ್ವಾ? ಎಂದು ಹರೀಶ್ ಪ್ರಶ್ನಿಸಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸಿದ್ದೇಶ್ವರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರೂ ಬಿ.ಎಸ್.ಯಡಿಯೂರಪ್ಪ ಏಕೆ ಮೌನವಾಗಿದ್ದರು?. ಜಿ.ಎಂ.ಸಿದ್ದೇಶ್ವರ್ ವಿರುದ್ಧ ರೇಣುಕಾಚಾರ್ಯ ದೆಹಲಿ ಮತ್ತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸಿದ್ದೇಶ್ವರ ಹೊರಗಿನವರಂತೆ ಬಿಂಬಿಸಿ, ಅವರಿಗೆ ಟಿಕೆಟ್ ನೀಡಬಾರದು ಎಂದು ಗೊಂದಲ ಸೃಷ್ಟಿಸಿದ್ದರು. ಇದಾದ ಬಳಿಕ ರೇಣುಕಾಚಾರ್ಯ ಶಾಮನೂರು ಶಿವಶಂಕರಪ್ಪ ಅವರ ಮನೆಗೆ ಭೇಟಿ ನೀಡಿದ್ದರು.
ಸಿಎಂ ಸ್ಥಾನದಿಂದ ಯಡಿಯೂರಪ್ಪನವರಿಗೆ ಇಳಿಸಿದಾಗ ಇದೇ ಶಾಮನೂರು ಶಿವಶಂಕರಪ್ಪ ವಿರೋಧಿಸಿದ್ದರು. ಆ ಋಣ ತೀರಿಸಲು ಜಿ.ಎಂ.ಸಿದ್ದೇಶ್ವರ್’ಗೆ ಟಿಕೆಟ್ ತಪ್ಪಿಸುವ ಷಡ್ಯಂತ್ರ ರೂಪಿಸಲಾಗಿತ್ತು. ಜಿ.ಎಂ.ಸಿದ್ದೇಶ್ವರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ವ್ಯವಸ್ಥಿತ ಸಂಚು ರೂಪಿಸಲಾಗಿದೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ಇಬ್ಬರೂ ಪಕ್ಷದ ಅಭ್ಯರ್ಥಿಯ ಸೋಲಿನಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದರು.
ಗಾಯತ್ರಿ ಸಿದ್ದೇಶ್ವರ ಸೋಲಿನಲ್ಲಿ ಮಾಡಾಳ್ ಮಲ್ಲಿಕಾರ್ಜುನ್ ಮತ್ತಿತರರ ಕೈವಾಡವಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಮಾಡಾಳ್ ಮಲ್ಲಿಕಾರ್ಜುನ ತಂದೆ ಮಾಡಾಳ್ ವಿರೂಪಾಕ್ಷಪ್ಪ ಕೂಡ ಕಾರಣರಾಗಿದ್ದರು. ವಿರೂಪಾಕ್ಷಪ್ಪ ಅವರ ಭ್ರಷ್ಟಾಚಾರವೂ ಆ ಚುನಾವಣೆಯಲ್ಲಿ ಬಿಜೆಪಿಯ ಪತನಕ್ಕೆ ಕಾರಣವಾಯಿತು. ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಯಾವ ಮುಖ ಇಟ್ಟುಕೊಂಡು ದೆಹಲಿಗೆ ಹೋಗುತ್ತಾರೆ.
ಹೀಗೆ ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ? ಪಕ್ಷಕ್ಕಾಗಿ ದುಡಿದ ನಿಷ್ಟಾವಂತ ಕಾರ್ಯಕರ್ತರ ಕತೆ ಏನು? ಇದು ಕೇವಲ ಗಾಯತ್ರಿ ಸಿದ್ದೇಶ್ವರ ಅವರ ಪ್ರಶ್ನೆ ಅಲ್ಲ. ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ದಾವಣಗೆರೆಯಿಂದ ಅವಕಾಶ ಸಿಗಲಿಲ್ಲ ಎನ್ನುವ ನೋವಿದೆ.
ಈ ಸತ್ಯ ಹೇಳದಿದ್ದರೆ ಸಿದ್ದೇಶ್ವರ ಅವರಿಗೆ ದ್ರೋಹ ಮಾಡಿದಂತಾಗುತ್ತದೆ. ಸತ್ಯ ಹೇಳಿದರೆ ನನಗೆ ರಾಜಕೀಯವಾಗಿ ತೊಂದರೆ ಮಾಡಬಹುದು. ಆದರೆ, ನಾನು ಹೋರಾಟದಿಂದಲೇ ಬೆಳೆದವನು ಇಂತಹದ್ದನ್ನೆಲ್ಲ ಎದುರಿಸಲು ಸಿದ್ದನಿದ್ಧೇನೆ. ಮಾಡಾಳ್ ಮಲ್ಲಿಕಾರ್ಜುನ ತಮಗೆ ಫೋನ್ ಮಾಡಿ, ನಮ್ಮನ್ನು ನೋಡಿಕೊಳ್ಳುತ್ತೇನೆಂದು ಬೆದರಿಕೆ ಹಾಕಿದ್ದಾನೆ. ಹುಚ್ಚು ಬಿಡಿಸುತ್ತಾನಂತೆ. ಲೋಕಸಭಾ ಕ್ಷೇತ್ರ ಸೋತ ನೋವಿನಲ್ಲಿ ನಾವಿದ್ದೇವೆ. ಇಂತಹ ಗೊಡ್ಡು ಬೆದರಿಕೆಗೆ ನಾನು ಹೆದರುವವನಲ್ಲ ಎಂದು ಹೇಳಿದರು.