ಬೆಂಗಳೂರು:
ಕನ್ನಡ ಚಿತ್ರರಂಗದ ಖ್ಯಾತ ನಟ ಹರೀಶ್ ರಾಯ್ ಅವರು ನಿಧನ ಹೊಂದಿದ್ದಾರೆ. ಅವರು ಮುಂಬಯಿಯಲ್ಲಿದ್ದು ಭೂಗತ ಲೋಕದ ನಂಟು ಹೊಂದಿದ್ದರು ಎಂದು ಅವರೇ ಒಂದೆಡೆ ಹೇಳಿದ್ದುಂಟು. ಕನ್ನಡದಲ್ಲೂ ಭೂಗತ ಲೋಕದ ಡಾನ್ ಪಾತ್ರವೇ ಮೊದಲಿಗೆ ಅವರಿಗೆ ಒಲಿದು ಬಂದಿತ್ತು. ಇಂದು ಕಿದ್ವಾಯಿ ಆಸ್ಪತ್ರೆಯಲ್ಲಿ ನಿಧನರಾದಾಗ ಅವರಿಗೆ 55 ವರ್ಷ ವಯಸ್ಸಾಗಿತ್ತು. ಅವರನ್ನು ಥೈರಾಯ್ಡ್ ಕ್ಯಾನ್ಸರ್ ಬಲಿ ಪಡೆದಿದೆ. ಹಲವು ವರ್ಷಗಳಿಂದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹರೀಶ್ ರಾಯ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕನ್ನಡದಲ್ಲಿ ‘ಓಂ’ ಸಿನಿಮಾದಲ್ಲಿ ಮೊದಲಿಗೆ ನಟಿಸಿದ್ದ ಅವರು ‘ಕೆಜಿಎಫ್ 2’ ಚಿತ್ರದಲ್ಲಿ ಚಾಚಾ ಹೆಸರಿನ ಪಾತ್ರ ಮಾಡಿ ಇನ್ನಷ್ಟು ಹೆಸರಾಗಿದ್ದರು.
ಹರೀಶ್ ರಾಯ್ ಅವರು ಕರಾವಳಿಯ ಉಡುಪಿಯವರು. ಅವರ ಮೊದಲ ಹೆಸರು ಹರೀಶ್ ಆಚಾರಿ. ʼನನ್ನ ತಾಯಿ ಕಡೆಯವರು ಚಿನ್ನದ ಅಂಗಡಿ ಹೊಂದಿದ್ದರು. ನಮ್ಮ ತಂದೆಯವರು ದೊಡ್ಡ ಜಮೀನುದಾರರು. ಉಳುವವನೇ ಹೊಲದ ಒಡೆಯ ಎಂಬ ಕಾನೂನಿನಿಂದ ಒಂದಷ್ಟು ತೋಟ ಹೋಯಿತು. ಆದರೂ ಸುಮಾರು ತೋಟ ಹಾಗೆಯೇ ಇತ್ತು. ನನಗೆ ತಾಯಿಯ ಪ್ರೀತಿ ನನಗೆ ಸಿಗಲಿಲ್ಲ. ನಾನು ಬೇರೆಯವರ ಮನೆಯಲ್ಲಿ ಬೆಳೆಯಬೇಕಾದ ಪರಿಸ್ಥಿತಿ ಬಂತು. ಒಂದುವರೆ ವರ್ಷ ಇದ್ದಾಗಲೇ ಬೇರೆಯವರ ಮನೆ ಸೇರಿದೆ. ಒಂದನೇ ತರಗತಿವರೆಗೆ ಬೇರೆಯವರ ಮನೆಯಲ್ಲೇ ಇದ್ದೆ. ನನ್ನ ತಂದೆಗೆ ಕೋಪ ಜಾಸ್ತಿ. ನಾಗರ ಬೆತ್ತದ ಹೊಡೆಯುತ್ತಿದ್ದರು. ತುಂಬಾ ಏಟು ತಿಂದಿದ್ದೇನೆ’ ಎಂದಿದ್ದರು ಹರೀಶ್ ರಾಯ್.
‘ನಾನು 10ನೇ ತರಗತಿವರೆಗೆ ಮಾತ್ರ ಓದಿದೆ. ಒಂದು ದಿನ ಶಾಲೆಯಲ್ಲಿ ತಪ್ಪು ಮಾಡಿದೆ. ಅಪ್ಪನ ಕರೆದುಕೊಂಡು ಬನ್ನಿ ಎಂದರು. ಭಯದಿಂದ ಸ್ಕೂಲ್ ಬಿಟ್ಟು ಬಾಂಬೆಗೆ ಓಡಿ ಹೋದೆ. 2 ವರ್ಷ ಅಲ್ಲೇ ಇದ್ದೆ. ಉಡುಪಿಯವರ ಜೊತೆ ಇದ್ದೆ. ನಾನು ಉಡುಪಿ ಭಟ್ಟರ ಮಗ ಅನ್ನೋದು ಗೊತ್ತಾಯ್ತು. ಅವರು ಮರಳಿ ಕಳುಹಿಸಿದರು. ಮುಂಬಯಿಯಲ್ಲಿ ನನ್ನ ಮೇಲೆ ಕೆಲವು ಕೇಸ್ಗಳು ಇದ್ದವು. ಕೆಲವು ರೌಡಿಗಳನ್ನು ಎದುರು ಹಾಕಿಕೊಂಡಿದ್ದೆ. ಭೂಗತ ಜಗತ್ತಿನ ಪರಿಚಯವೂ ಆಗಿತ್ತು. ಹೀಗಾಗಿ, 1994ರಲ್ಲಿ ಬೆಂಗಳೂರಿಗೆ ಬಂದೆ’ ಎಂದಿದ್ದರು ಅವರು.
‘ನನ್ನ ಗೆಳೆಯರೊಬ್ಬರು ಉಪೇಂದ್ರ ಅವರನ್ನು ಪರಿಚಯ ಮಾಡಿದರು. ಆ ಬಳಿಕ ಸಿನಿಮಾ ಇಂಡಸ್ಟ್ರಿ ಪರಿಚಯ ಆಯಿತು. ಈ ವೇಳೆ ‘ಓಂ’ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕಿತು’ ಎಂದಿದ್ದರು ಹರೀಶ್ ರಾಯ್.ಓಂ ಸಿನಿಮಾದಲ್ಲಿ ಕೆಲವು ಬೆಂಗಳೂರಿನ ರೌಡಿಗಳನ್ನು ಹಾಕಿಕೊಂಡು ಉಪೇಂದ್ರ ಸಿನಿಮಾ ಮಾಡಿದ್ದರು. ಆಗ ಹರೀಶ್ ಅವರೂ ಒಬ್ಬ ಮಾಜಿ ಡಾನ್ ಪಾತ್ರ ವಹಿಸಿದ್ದರು. ಇದರಿಂದ ಅವರಿಗೆ ಹರೀಶ್ ರಾಯ್ ಎಂಬ ಹೆಸರು ಬಂತು. ಕೆಜಿಎಫ್ ಸಿನಿಮಾದ ಚಾಚಾ ಪಾತ್ರದಿಂದ ಕೆಜಿಎಫ್ ಚಾಚಾ ಎಂದೂ ಪ್ರಸಿದ್ಧರಾದರು.
ಜೋಡಿ ಹಕ್ಕಿ, ಚಕ್ರವರ್ತಿ, ಕಾಶಿ, ಸಂಜು ವೆಡ್ಸ್ ಗೀತ, ನಲ್ಲ, ತಾಯವ್ವ ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ತಮಿಳಿನಲ್ಲೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಅಂಡರ್ ವರ್ಲ್ಡ್, ಮೀಂದುಮ್ ಒರು ಕಾದಲ್ ಕಧೈ, ರಾಜ್ ಬಹದ್ದೂರ್, ಜಾಫರ್ ಅಲಿಯಾಸ್ ಮುರ್ಗಿ ಜಾಫರ್ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಇತ್ತೀಚೆಗೆ ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕೆಜಿಎಫ್ ಚಿತ್ರದ ನಂತರ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡಿದ್ದು, ಮೂರ್ನಾಲ್ಕು ವರ್ಷದಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಕ್ಯಾನ್ಸರ್ ಚಿಕಿತ್ಸೆಗಾಗಿ ಹಣ ಸಹಾಯದ ಅಗತ್ಯವಿದ್ದ ಅವರಿಗೆ ಶಿವಣ್ಣ, ಧ್ರುವ, ದರ್ಶನ್, ಯಶ್ ಸೇರಿದಂತೆ ಅನೇಕ ನಟರು ಹಣ ಸಹಾಯ ಮಾಡಿದ್ದರು. ಅವರು 17 ಕೀಮೋಥೆರಪಿ ಇಂಜೆಕ್ಷನ್ ಪಡೆಯಬೇಕಿತ್ತು. ಒಂದು ಇಂಜೆಕ್ಷನ್ ಬೆಲೆ 3.5 ಲಕ್ಷ ರೂ. ಆಗುತ್ತಿತ್ತು. ಹಣ ಸಂಗ್ರಹ ಆಗುತ್ತಿದ್ದಂತೆ ಹಾಸ್ಪಿಟಲ್‌ಗೆ ಅಡ್ಮಿಟ್ ಆಗಿ ಒಂದು ಇಂಜೆಕ್ಷನ್ ಹಾಕಲಾಗಿತ್ತು. ಆದರೆ ಇಂಜೆಕ್ಷನ್‌ಗೆ ಸಹಕರಿಸದ ದೇಹದಲ್ಲಿ ನಂತರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ನಿಶ್ಯಕ್ತಿಯಿಂದ ಐಸಿಯುನಲ್ಲಿ ಸುಮಾರು ದಿನಗಳಿಂದ ಚಿಕಿತ್ಸೆ ನೀಡಲಾಗಿತ್ತು. ಅವರು ಹೆಂಡತಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.








