ಸೈಮನ್‌ ಡೂಲ್‌, ಹರ್ಷ ಭೋಗ್ಲೆಯನ್ನು ಬ್ಯಾನ್ ಮಾಡಲು ಸಿಎಬಿ ಪತ್ರ!

ಕೋಲ್ಕತಾ:

    ಈಡನ್‌ ಗಾರ್ಡನ್ಸ್‌ ಪಿಚ್‌ ಬಗ್ಗೆ ಟೀಕೆ ಮಾಡಿದ್ದಕ್ಕೆ ಸೈಮನ್‌ ಡೂಲ್‌ ಹಾಗೂ ಹರ್ಷ ಭೋಗ್ಲೆಗೆ ಈಡನ್‌ ಗಾರ್ಡನ್ಸ್‌ ಪ್ರವೇಶ ನಿರಾಕರಿಸುವ ಬಗ್ಗೆ ಬಂಗಾಳ ಕ್ರಿಕೆಟ್‌ ಸಂಸ್ಥೆ ಬಿಸಿಸಿಐಗೆ ಪತ್ರ ಬರೆದಿದೆ ಎನ್ನುವ ಸುದ್ದಿ ಇದೀಗ ಕ್ರಿಕೆಟ್‌ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇತ್ತೀಚೆಗೆ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನದ ಪಿಚ್‌ ಕ್ಯುರೇಟರ್‌ ತವರು ತಂಡಕ್ಕೆ ಬೇಕಿರುವ ರೀತಿ ಪಿಚ್‌ ಸಿದ್ಧಪಡಿಸಿಕೊಡುತ್ತಿಲ್ಲ ಎಂದು ಕೆಕೆಆರ್‌ ನಾಯಕ ಅಜಿಂಕ್ಯ ರಹಾನೆ ದೂರಿದ್ದರು.

    ರಹಾನೆ ಹೇಳಿಕೆಯನ್ನು ಮುಂದಿಟ್ಟುಕೊಂಡು ಕ್ರಿಕೆಟ್‌ ವೆಬ್‌ಸೈಟ್‌ವೊಂದರ ಕ್ರಿಕೆಟ್‌ ವಿಶ್ಲೇಷಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನ್ಯೂಜಿಲ್ಯಾಂಡ್‌ನ ವೀಕ್ಷಕ ವಿವರಣೆಗಾರ ಸೈಮನ್‌ ಡೂಲ್‌ ಮತ್ತು ಭಾರತದ ಖ್ಯಾತ ಕಾಮೆಂಟೇಟರ್‌ ಹರ್ಷಾ ಭೋಗ್ಲೆ ಅವರು ತವರು ತಂಡಕ್ಕೆ ಅನುಕೂಲವಾಗುಂತಹ ಪಿಚ್‌ ನೀಡಲು ಬಂಗಾಳ ಕ್ರಿಕೆಟ್‌ ಸಂಸ್ಥೆ (ಸಿಎಬಿ) ನಿರಾಕರಿಸುತ್ತಿದ್ದರೆ, ಕೆಕೆಆರ್‌ ತಂಡ ತನ್ನ ತವರು ಮೈದಾನವನ್ನು ಬದಲಿಸಬೇಕು ಎಂದಿದ್ದರು.ಇವರ ಈ ಹೇಳಿಕೆಯಿಂದ ಸಿಟ್ಟಾಗಿರುವ ಸಿಎಬಿ, ಡೂಲ್‌ ಹಾಗೂ ಭೋಗ್ಲೆ ವೀಕ್ಷಕ ವಿವರಣೆ ನೀಡಲು ಈಡನ್‌ ಗಾರ್ಡನ್ಸ್‌ ಮೈದಾನಕ್ಕೆ ಬರಬಾರದು. ಅವರ ವಿರುದ್ಧ ನಿಷೇಧ ಹೇರಲು ನಾವು ಬಯಸುತ್ತೇವೆ ಎಂದು ಬಿಸಿಸಿಐಗೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.

    ಸೋಮವಾರ ಇಲ್ಲಿನ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದಿದ್ದ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ಗುಜರಾತ್‌ 39 ರನ್‌ಗಳ ಗೆಲುವು ಸಾಧಿಸಿತ್ತು. ಕೆಕೆಆರ್‌ ತವರಿನಲ್ಲಿ ಮೂರನೇ ಸೋಲು ಕಂಡಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಗುಜರಾತ್‌, ನಾಯಕ ಶುಭ್‌ಮನ್‌ ಗಿಲ್‌ ಹಾಗೂ ಸಾಯಿ ಸುದರ್ಶನ್‌ರ ಅಮೋಘ ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ 20 ಓವರಲ್ಲಿ 3 ವಿಕೆಟ್‌ಗೆ 198 ರನ್‌ ಕಲೆಹಾಕಿತು. 

   ಗುರಿ ಬೆನ್ನತ್ತಿದ ಕೆಕೆಆರ್‌20 ಓವರಲ್ಲಿ 8 ವಿಕೆಟ್‌ಗೆ 159 ರನ್‌ ಗಳಿಸಲಷ್ಟೇ ಶಕ್ತವಾಯಿತು. ಕೆಕೆಆರ್‌ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ಅಜಿಂಕ್ಯ ರಹಾನೆ 36 ಎಸೆತದಲ್ಲಿ 50 ರನ್‌ ಗಳಿಸಿ ಔಟಾದರು. ಕೊನೆಯಲ್ಲಿ ಅಂಗ್‌ಕೃಷ್‌ ರಘುವಂಶಿ 27 ರನ್‌ ಸಿಡಿಸಿ, ಸೋಲಿನ ಅಂತರವನ್ನು ತಗ್ಗಿಸಿದರು.