ಹಾಸನ:
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹಾಸನಾಂಬ ದೇವಿ ದೇಗುಲಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಹಾಸನದ ಅಧಿದೇವತೆ ಹಾಸನಾಂಬೆ ದೇವಿ ದರ್ಶನ ಪಡೆದರು. ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಶಿಷ್ಟಾಚಾರದ ವಾಹನದಲ್ಲಿ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸ್ವಾಗತಿಸಿದರು. ಸಿದ್ದರಾಮಯ್ಯ ಅವರ ಜತೆ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಆಗಮಿಸಿದ್ದರು. ಜಿಲ್ಲಾಡಳಿತ ಸಿಎಂ ಅವರನ್ನು ಮಂಗಳವಾದ್ಯಗಳೊಂದಿಗೆ ದೇವಿ ದರ್ಶನಕ್ಕೆ ಕರೆದೊಯ್ಯಿತು.
ಕಳೆದ ಎರಡು ವರ್ಷಗಳಿಂದ ಸಿಎಂ ಸಿದ್ದರಾಮಯ್ಯ ದೇವಿ ದರ್ಶನ ಪಡೆಯುತ್ತಿದ್ದು, ಈ ಮೂಲಕ ಮೂರನೇ ಬಾರೀ ದೇವಿ ದರ್ಶನ ಪಡೆದುಕೊಂಡಿದ್ದಾರೆ. ದೇವಿ ದರ್ಶನ ಪಡೆದು ದರ್ಬಾರ್ ಗಣಪತಿ ಹಾಗೂ ಸಿದ್ದೇಶ್ವರಸ್ವಾಮಿ ದೇವರ ದರ್ಶನ ಪಡೆದರು.
ಇದೇ ವೇಳೆ ಶಾಸಕ ಹಾಗೂ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಡಿಸಿ ಕೆ.ಎಸ್.ಲತಾಕುಮಾರಿ, ದಕ್ಷಿಣ ವಯಲ ಐಜಿಪಿ, ಬೋರಲಿಂಗಯ್ಯ ಎಸ್ಪಿ ಮಹಮದ್ ಸುಜೀತಾ ಉಪಸ್ಥಿತರಿದ್ದರು. ಸಿಎಂ ಆಗಮನದ ಹಿನ್ನೆಲೆ ದೇವಾಲಯದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು.








