ಹಿಜಾಬ್ ಜತೆಗೆ ಈಗ ಟೋಪಿ ವಿವಾದ!; ಹೊನ್ನಾಳಿಯ ಸಾಸ್ವೇಹಳ್ಳಿ ಶಾಲೆಗೆ ಟೋಪಿ ಧರಿಸಿ ಬಂದ ಬಾಲಕರು..

ದಾವಣಗೆರೆ:ಹಿಜಾಬ್ ಜತೆಗೆ ಈಗ ಟೋಪಿ ವಿವಾದ!; ಹೊನ್ನಾಳಿಯ ಸಾಸ್ವೇಹಳ್ಳಿ ಶಾಲೆಗೆ ಟೋಪಿ ಧರಿಸಿ ಬಂದ ಬಾಲಕರು..

 ಸಮವಸ್ತ್ರ ಸಂಘರ್ಷ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದು ಚರ್ಚೆಗೆ ಗ್ರಾಸವಾಗಿರುವಾಗಲೆ, ಟೋಪಿ ವಿವಾದ ಹುಟ್ಟಿಕೊಂಡಿದೆ.

ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್​ನ ಪ್ರೌಢಶಾಲಾ ವಿಭಾಗದಲ್ಲಿ ಮಂಗಳವಾರ ಬಾಲಕರು ಟೋಪಿ ಧರಿಸಿ ಬಂದಿದ್ದು ಹೊಸ ಚರ್ಚೆಗೆ ನಾಂದಿ ಹಾಡಿದೆ.

 ಬೆಳಗ್ಗೆ ಶಾಲೆಗೆ ಬಂದ ಮಕ್ಕಳಲ್ಲಿ 52 ಬಾಲಕಿಯರು ಹಿಜಾಬ್ ಹಾಗೂ 11 ಬಾಲಕರು ಟೋಪಿ ಧರಿಸಿದ್ದರು. ಪ್ರಾರ್ಥನೆ ಬಳಿಕ ಹಿಜಾಬ್ ಮತ್ತು ಟೋಪಿ ತೆಗೆದು ತರಗತಿಯೊಳಗೆ ಹೋಗುವಂತೆ ಶಿಕ್ಷಕರು ತಿಳಿಸಿದಾಗ ವಿದ್ಯಾರ್ಥಿಗಳು ನಿರಾಕರಿಸಿದರು. ಅಷ್ಟು ಹೊತ್ತಿಗಾಗಲೇ ಹಿಜಾಬ್ ಹಾಗೂ ಟೋಪಿ ಧರಿಸಿ ಶಾಲಾ ಕೊಠಡಿ ಪ್ರವೇಶಿಸಿದ್ದ ಮಕ್ಕಳನ್ನು ಹೊರಗೆ ಕಳುಹಿಸಲಾಯಿತು.

ಎಸ್.ಎಸ್.ಎಲ್.ಸಿ.ಯವರಿಗೆ ಪೂರ್ವ ಸಿದ್ಧತಾ ಪರೀಕ್ಷೆ ಆರಂಭಿಸಲಾಯಿತು. ಪ್ರವೇಶ ದೊರೆಯದ ಮಕ್ಕಳು ಶಾಲೆಯ ಆವರಣದಲ್ಲಿ ಕುಳಿತರು. ಉಪ ತಹಸೀಲ್ದಾರ್ ಎಸ್. ಪರಮೇಶ್, ಪಿಎಸ್​ಐ ಬಸವನಗೌಡ ಬಿರಾದಾರ್ ಮತ್ತು ಶಿಕ್ಷಕರು ಮನವೊಲಿಸಲು ನಡೆಸಸಿದ ಪ್ರಯತ್ನಗಳು ಫಲ ನೀಡಲಿಲ್ಲ.

ಸ್ಥಳಕ್ಕೆ ಬಂದ ತಹಸೀಲ್ದಾರ್ ಬಸವನಗೌಡ ಕೋಟೂರು, ತಾ.ಪಂ. ಇಒ ರಾಮಾ ಭೋವಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ. ರಾಜೀವ್ ವಿದ್ಯಾರ್ಥಿಗಳ ಜತೆಗೆ ಮಾತುಕತೆ ನಡೆಸಿ, ನ್ಯಾಯಾಲಯದ ಆದೇಶ ಪಾಲಿಸುವಂತೆ ತಿಳಿವಳಿಕೆ ನೀಡಿದರು.

ಆಗಲೂ ವಿದ್ಯಾರ್ಥಿಗಳು ಪಟ್ಟು ಸಡಿಲಿಸಲಿಲ್ಲ. ‘ನಿಮಗೆ ಶಿಕ್ಷಣ ಮುಖ್ಯವೋ, ಹಿಜಾಬ್ ಮುಖ್ಯವೋ’ ಎಂದು ತಹಸೀಲ್ದಾರ್ ಪ್ರಶ್ನಿಸಿದಾಗ, ‘ನಿಮ್ಮ ಎರಡು ಕಣ್ಣುಗಳಲ್ಲಿ ನಿಮಗೆ ಯಾವುದು ಮುಖ್ಯ’ ಎಂದು ವಿದ್ಯಾರ್ಥಿಗಳೇ ಮರುಪ್ರಶ್ನೆ ಹಾಕಿದರು.

ಸದ್ಯ ಈ ವಿಚಾರ ನ್ಯಾಯಾಲಯದಲ್ಲಿದೆ, ಅಂತಿಮ ಆದೇಶ ಬರುವವರೆಗೆ ಕಾಯೋಣ, ಅಲ್ಲಿಯವರೆಗೆ ಸಮವಸ್ತ್ರ ಧರಿಸಿ ಎಂದು ಸೂಚನೆ ನೀಡಿ ತಹಸೀಲ್ದಾರ್ ಅಲ್ಲಿಂದ ತೆರಳಿದರು.

ಮಧ್ಯಾಹ್ನ ಊಟವಾದ ನಂತರ ಹಿಜಾಬ್ ಮತ್ತು ಟೋಪಿ ಧರಿಸಿದ ಮಕ್ಕಳೂ ತರಗತಿಯೊಳಗೆ ಹೋಗಿ ಕುಳಿತುಕೊಂಡರು. ಹೀಗೆ ಇಡೀ ದಿನ ಸಮವಸ್ತ್ರ ಸಂಘರ್ಷ ಸದ್ದು ಮಾಡಿತು.

ಮನೆಗೆ ಮರಳಿದ ವಿದ್ಯಾರ್ಥಿಗಳು: 

ದಾವಣಗೆರೆಯಲ್ಲಿ 86, ಕೊಡಗು 23, ಚಿಕ್ಕಮಗಳೂರು 30, ಶಿವಮೊಗ್ಗದಲ್ಲಿ 150ಕ್ಕೂ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿ ಮನೆಗೆ ವಾಪಸ್ ಆದರು.

ನ್ಯಾಯಾಲಯದ ಸೂಚನೆ ನಂತರವು ಹಿಜಾಬ್ ಧರಿಸಿ ಬರುವುದು ತಪ್ಪಾಗುತ್ತದೆ. ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ಬರಲು ಬಿಡಲ್ಲ. ಕಾನೂನು ಉಲ್ಲಂಘಿಸುವವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ.

– ಡಾ.ಸಿ.ಎನ್.ಅಶ್ವತ್ಥನಾರಾಯಣ ಉನ್ನತ ಶಿಕ್ಷಣ ಸಚಿವ

ಮಧ್ಯ ಪ್ರದೇಶದಲ್ಲೂ ಹಿಜಾಬ್ ಕಾವು: 

ಭೋಪಾಲ್​ನ ಮಧ್ಯ ಪ್ರದೇಶದ ಸರ್ಕಾರಿ ಕಾಲೇಜೊಂದು ಹಿಜಾಬ್ ನಿಷೇಧಿಸಿ ಸೋಮವಾರ ಆದೇಶ ಹೊರಡಿಸಿದೆ. ಡಾಟಿಯಾ ಜಿಲ್ಲೆಯ ಸರ್ಕಾರಿ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವು ದನ್ನು ವಿರೋಧಿಸಿ ವಿಎಚ್​ಪಿ ಮಹಿಳಾ ವಿಭಾಗವಾದ ದುರ್ಗಾ ವಾಹಿನಿ ಪ್ರತಿಭಟನೆ ನಡೆಸಿತ್ತು.

ಹಿಜಾಬ್ ಬೇಕಾ? ಕಿತಾಬ್ ಬೇಕಾ?

ಕಾಂಗ್ರೆಸ್​ನವರಿಗೆ ಹಿಜಾಬ್ ಬೇಕಾ? ಅಥವಾ ಕಿತಾಬ್ ಬೇಕಾ? ಎಂದು ಸ್ಪಷ್ಟಪಡಿಸಲಿ ಎಂದು ಬಿಜೆಪಿ ಸವಾಲು ಹಾಕಿದೆ. ವಿಧಾನಸೌಧದಲ್ಲಿ ಮಂಗಳವಾರ ಬಿಜೆಪಿ ಪ್ರಧಾನಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ, ಸಚಿವ ಈಶ್ವರಪ್ಪ ಅವರ ಹೇಳಿಕೆ ತಿರುಚಲಾಗಿದೆ. ಕೆಂಪುಕೋಟೆಯಲ್ಲಿ ರಾಷ್ಟ್ರ ಧ್ವಜ ಬದಲಿಗೆ ಭಗವತ್ ಧ್ವಜ ಬರಬಹುದು ಅಂತ ಹೇಳಿರಬಹುದು.

ಅವರಿಗೆ ಅಷ್ಟು ಹೇಳಲು ಸ್ವಾತಂತ್ರ್ಯ ಇಲ್ಲವೇ? ಅದಕ್ಕೆ ಯಾಕೆ ಕೇಸ್ ಹಾಕಬೇಕು. ಸುಳ್ಳು ಹೇಳುವ ಡಿ.ಕೆ. ಶಿವಕುಮಾರ್ ಮೇಲೆ ಮೊದಲು ಕೇಸ್ ದಾಖಲಿಸಬೇಕು ಎಂದರು. ಹಿಜಾಬ್ ಶೈಕ್ಷಣಿಕ ಹಿತದೃಷ್ಟಿ ಹಾಳುಮಾಡುತ್ತಿದೆ. ಇದಕ್ಕೆ ಕಾರಣ ಎಸ್​ಡಿಪಿಐ, ಪಿಎಫ್​ಐ, ಹಿಜಾಬ್ ಹಿಡಿದುಕೊಂಡು, ಕಿತಾಬ್ ಬಿಟ್ಟಿದ್ದಾರೆ. 6 ವಿದ್ಯಾರ್ಥಿನಿಯರಿಂದ ಲಕ್ಷಾಂತರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದರು.

ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ಆದೇಶದ ವಿಚಾರದಲ್ಲಿ ಸರ್ಕಾರ ಗೊಂದಲ ಸೃಷ್ಟಿಸಿದೆ. ಶಾಲೆ-ಕಾಲೇಜುಗಳಲ್ಲಿ ಉಂಟಾಗಿರುವ ವಾತಾವರಣದಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ನೋವಿನಲ್ಲಿದ್ದಾರೆ.

– ಯು.ಟಿ.ಖಾದರ್ ಕಾಂಗ್ರೆಸ್ ಶಾಸಕ

ಬಿಜೆಪಿ ವಿರುದ್ಧ ಒವೈಸಿ ಆರೋಪ

ನವದೆಹಲಿ:

ಮುಸ್ಲಿಂ ಮಹಿಳೆಯರ ತಲೆ ವಸ್ತ್ರ ‘ಹಿಜಾಬ್’ ಮುಂದಿಟ್ಟುಕೊಂಡು ಬಿಜೆಪಿ ಕರ್ನಾಟಕದಿಂದ ದೇಶದಲ್ಲಿ ಪ್ರಯೋಗ ನಡೆಸುತ್ತಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾವುದ್ದಿನ್ ಒವೈಸಿ ಮಂಗಳವಾರ ಆರೋಪಿಸಿದ್ದಾರೆ. ಹಿಜಾಬ್ ಬಗ್ಗೆ ಈಗ ನಡೆಯುತ್ತಿರುವ ವಿವಾದಕ್ಕೆ ಬಿಜೆಪಿಯೇ ನೇರ ಹೊಣೆ ಎಂದು ಸಂಸದರೂ ಆಗಿರುವ ಒವೈಸಿ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಗುಪ್ತ ಸ್ಥಳದಲ್ಲಿ ತರಬೇತಿ

ಉಡುಪಿ:

ರಾಜ್ಯದ ವಿವಿಧೆಡೆ ಹಿಜಾಬ್ ಪ್ರಕರಣವನ್ನು ಮತೀಯವಾದಿ ಸಂಘಟನೆಗಳು ಜನರಲ್ಲಿ ಕೋಮುಭಾವನೆ ಸೃಷ್ಟಿಸಲು ಹಾಗೂ ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡವಲು ಬಳಸುತ್ತಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಗೃಹಸಚಿವ ಆರಗ ಜ್ಞಾನೇಂದ್ರ ಅವರಿಗೆ ಶಾಸಕ ರಘುಪತಿ ಭಟ್ ಮನವಿ ಮಾಡಿದ್ದಾರೆ.

ಉಡುಪಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ 12 ವಿದ್ಯಾರ್ಥಿನಿಯರಿಗೆ ಮತೀಯವಾದಿ ಇಸ್ಲಾಮಿಕ್ ಸಂಘಟನೆಗಳು ಗುಪ್ತ ಸ್ಥಳದಲ್ಲಿ ಮೂರು ದಿನ ಮತಾಂಧತೆಯ ತರಬೇತಿ ನೀಡಿದ್ದಾರೆ ಎಂಬುದು ಕೆಲವು ವಿದ್ಯಾರ್ಥಿಗಳಿಂದ ತಿಳಿದುಬಂದಿದೆ.

ಪ್ರಕರಣದ ಬಗ್ಗೆ ಸ್ಥಳೀಯ ಪತ್ರಿಕೆ ಹಾಗೂ ಸುದ್ದಿ ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾಗುವ ಮುನ್ನ ಪಾಕಿಸ್ತಾನದ ಅಲ್​ಜಝೀರಾ, ಭಾರತದ ಎನ್​ಡಿಟಿವಿಯಲ್ಲಿ ಸುದ್ದಿ ಬಿತ್ತರವಾಗಿದೆ. ಈ ಅಂಶಗಳನ್ನು ಗಮನಿಸಿದಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಕುಂದಿಸುವ ಪ್ರಯತ್ನ ಕಾಣುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಗಳಲ್ಲಿ ಏನೇನಾಯ್ತು?

  • ಗದಗ ನಗರದ ಉರ್ದು ಶಾಲೆ ನಂ.2ರಲ್ಲಿ ಮಕ್ಕಳು ಹಿಜಾಬ್ ಧರಿಸಿ ತರಗತಿಗೆ ಹಾಜರಾದರು. ಡಿಡಿಪಿಐ ಮನವಿಗೂ ಸೊಪ್ಪು ಹಾಕದ ವಿದ್ಯಾರ್ಥಿನಿಯರು. ಹಿಜಾಬ್ ಧರಿಸಿಕೊಂಡೇ ಕ್ಲಾಸ್​ಗೆ ಹಾಜರ್.
  • ಉಡುಪಿ ಜಿಲ್ಲೆ ಕಾಪು ತಾಲೂಕಿನ ಮಲ್ಲಾರು ಪಕೀರಣಕಟ್ಟೆ ಸರ್ಕಾರಿ ಸಂಯುಕ್ತ ಉರ್ದು ಪ್ರೌಢಶಾಲೆಯಲ್ಲಿ ಹಿಜಾಬ್ ತೆಗೆದು ಶಾಲೆ ಪ್ರವೇಶಕ್ಕೆ ವಿದ್ಯಾರ್ಥಿಗಳ ನಕಾರ, ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆದ ಮಕ್ಕಳು.
  • ಮಂಡ್ಯದ ಗೌಸಿಯಾ ಶಾಲೆಯಿಂದ ಸಹೋದರನ ಮಗಳನ್ನು ವಾಪಸ್ ಕರೆದೊಯ್ದ ಚಿಕ್ಕಪ್ಪ.
  • ಹಾಸನ ಜಿಲ್ಲೆ ಬೇಲೂರಿನ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ 49 ವಿದ್ಯಾರ್ಥಿನಿ ಯರು, ಕೋರ್ಟ್ ಆದೇಶ ಬರುವವರೆಗೂ ನಾವು ಶಾಲೆಗೆ ಬರುವುದಿಲ್ಲ ಎಂದು ವಾಪಸ್ ಮನೆಗೆ.
  • ಚಿಕ್ಕಮಗಳೂರು ನಗರದ ಮೌಲಾನಾ ಆಜಾದ್ ಸರ್ಕಾರಿ ಶಾಲೆಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡದ ಹಿನ್ನೆಲೆಯಲ್ಲಿ ಪಾಲಕರು ಹಾಗೂ ಅಧಿಕಾರಿಗಳ ಮಧ್ಯೆ ವಾಗ್ವಾದ ಉಂಟಾಗಿ ಅಂತಿಮವಾಗಿ ಶಾಲೆಗೆ ರಜೆ ಘೊಷಣೆ.
  • ಶಿವಮೊಗ್ಗದ ಕೆಪಿಎಸ್ ಪ್ರೌಢಶಾಲೆಯಲ್ಲಿ ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿಯರು. ತರಗತಿಗೆ ಹಾಜರಾಗದೇ ಮನೆಗೆ ಇಬ್ಬರು ವಾಪಸ್.
  • ಯಾದಗಿರಿ ಜಿಲ್ಲೆ ಗುರುಮಠಕಲ್​ನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಹಿಜಾಬ್ ತೆಗೆಯಲ್ಲ ಎಂದು ಪಟ್ಟು ಹಿಡಿದ ವಿದ್ಯಾರ್ಥಿಗಳು.
  • ಕೊಪ್ಪಳ ನಗರದ ಉರ್ದು ಪ್ರೌಢಶಾಲೆಯಲ್ಲಿ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿಗಳ ದೃಶ್ಯ ಚಿತ್ರಿಸದಂತೆ ಪಾಲಕರಿಂದ ಆಕ್ಷೇಪ ವ್ಯಕ್ತ.
  • ವಿಜಯಪುರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಸಹಿತ ತರಗತಿಗಳಿಗೆ ಹಾಜರ್. ಶಿಕ್ಷಕಿಯೂ ಹಿಜಾಬ್ ಹಾಕಿಯೇ ಪಾಠ.

ಧಾರ್ವಿುಕ ಹಕ್ಕು ರಕ್ಷಿಸಬೇಕಿದೆ

ಬೆಂಗಳೂರು: 

ವಿದೇಶದಲ್ಲಿ ಧಾರ್ವಿುಕ ಆಚರಣೆ ಮತ್ತು ಸಂಪ್ರದಾಯ ಪಾಲನೆಯನ್ನು ರಕ್ಷಿಸಿರುವ ರೀತಿಯಲ್ಲೇ ಭಾರತದಲ್ಲೂ ಧಾರ್ವಿುಕ ಆಚರಣೆಯ ವೈವಿಧ್ಯತೆ ಮತ್ತು ಹಕ್ಕನ್ನು ಕಾಪಾಡಬೇಕಿದೆ ಎಂದು ಹಿರಿಯ ವಕೀಲ ದೇವದತ್ ಕಾಮತ್ ಹೈಕೋರ್ಟ್​ಗೆ ತಿಳಿಸಿದರು.

ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿಗೆ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಹಾಗೂ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರಿದ್ದ ಪೂರ್ಣಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿದಾರ ವಿದ್ಯಾರ್ಥಿನಿಯರ ಪರ ವಾದ ಮುಂದುವರಿಸಿದ ಹಿರಿಯ ವಕೀಲ ದೇವದತ್ ಕಾಮತ್, ಧಾರ್ವಿುಕ ಆಚರಣೆ ಹಾಗೂ ಸಂಪ್ರದಾಯ ಪಾಲನೆ ಕುರಿತು ವಿವಿಧ ದೇಶಗಳ ನಿಲುವು ಹಾಗೂ ನ್ಯಾಯಾಲಯಗಳು ನೀಡಿರುವ ತೀರ್ಪಗಳನ್ನು ಉದಾಹರಣೆಯ ಸಹಿತ ನ್ಯಾಯಪೀಠದ ಗಮನಕ್ಕೆ ತಂದರು.

ಮೂಗುತಿ ತೊಟ್ಟ ವಿದ್ಯಾರ್ಥಿನಿಗೆ ನಿರ್ಬಂಧ: ಧರ್ಮ ಮತ್ತು ಸಂಸ್ಕೃತಿಯ ತೋರ್ಪಡಿಸುವಿಕೆ ಅಪಾಯಕಾರಿಯಾಗದು, ಅದೊಂದು ವೈವಿಧ್ಯತೆಯ ಮಾಧುರ್ಯವಾಗಿದ್ದು, ಯಾವುದೇ ರಾಷ್ಟ್ರವನ್ನು ಶ್ರೀಮಂತಗೊಳಿಸುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಮೂಗುತಿ ಧರಿಸಿ ಶಾಲೆಗೆ ತೆರಳಿದ್ದ ದಕ್ಷಿಣ ಭಾರತದ ಮೂಲದ ವಿದ್ಯಾರ್ಥಿನಿಯೊಬ್ಬಳನ್ನು ನಿರ್ಬಂಧಿಸಲಾಗಿತ್ತು.

ಮೂಗುತಿ ಸಮವಸ್ತ್ರ ಅಲ್ಲವೆಂದಿದ್ದ ಶಾಲೆ, ಮೂಗುತಿ ಧರಿಸಲು ಅನುಮತಿ ನೀಡಿದರೆ ದೊಡ್ಡ ಪ್ರತಿಭಟನೆಯಾಗುತ್ತದೆ ಎಂದು ಹೇಳಿತ್ತು. ಆದರೆ, ಮೂಗುತಿ ಧರಿಸುವುದು 5 ಸಾವಿರ ವರ್ಷಗಳ ಹಿಂದು ಸಂಪ್ರದಾಯದ ಭಾಗವೆಂದು ವಿದ್ಯಾರ್ಥಿನಿ ಪ್ರತಿಪಾದಿಸಿದ್ದಳು. ಆಕೆಯ ವಾದ ಪರಿಗಣಿಸಿದ್ದ ಅಲ್ಲಿನ ಹೈಕೋರ್ಟ್, ಶಾಲಾ ನಿರ್ಣಯವನ್ನು ರದ್ದುಪಡಿಸಿ, ಸಂಪ್ರದಾಯ ಆಚರಣೆಗೆ ಅವಕಾಶ ಕಲ್ಪಿಸಿತ್ತು ಎಂದು ಕಾಮತ್ ನ್ಯಾಯಪೀಠಕ್ಕೆ ವಿವರಿಸಿದರು.

ನಂಬಿಕೆಯ ಆಚರಣೆ: 

ಟರ್ಕಿಯಲ್ಲಿ ಸಾರ್ವಜನಿಕವಾಗಿ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿದೆ. ಅಲ್ಲಿ ಧಾರ್ವಿುಕ ಗುರುತುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಂತಿಲ್ಲ. ಆದ್ದರಿಂದಲೇ ಅಲ್ಲಿನ ನ್ಯಾಯಾಲಯವೂ ಹಿಜಾಬ್ ನಿಷೇಧವನ್ನು ಎತ್ತಿಹಿಡಿದಿತ್ತು. ಆದರೆ, ಟರ್ಕಿ ಹಾಗೂ ಭಾರತದ ಜಾತ್ಯಾತೀತತೆ ಮತ್ತು ಸಂವಿಧಾನ ಸಂಪೂರ್ಣ ವಿಭಿನ್ನವಾಗಿದೆ. ಭಾರತದ್ದು ಸಕಾರಾತ್ಮಕ ಜಾತ್ಯತೀತ ವಾದ.

ನಮ್ಮಲ್ಲಿ ಎಲ್ಲ ಧರ್ವಿುಯರ ಮೂಲಭೂತ ಹಕ್ಕುಗಳು ಮತ್ತು ಧಾರ್ವಿುಕ ಸ್ವಾತಂತ್ರ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಎಲ್ಲ ಧರ್ಮಗಳನ್ನೂ ಸಮಾನವಾಗಿ ಪರಿಗಣಿಸಲಾಗುತ್ತದೆ. ಎಲ್ಲ ನಂಬಿಕೆಯ ಆಚರಣೆಗಳನ್ನು ರಕ್ಷಿಸುವುದೇ ಸಂವಿಧಾನದ 25ನೇ ವಿಧಿಯ ಮೂಲತತ್ವವಾಗಿದೆ.

ಮೂಲಭೂತ ಹಕ್ಕುಗಳನ್ನು ತಡೆಯಲು ವಿಶೇಷಾಧಿಕಾರ (ವಿಟೋ) ಬಳಸಲು ಬಿಡಲಾಗದು. ಹಿಜಾಬ್ ಧರಿಸುವುದು ಧಾರ್ವಿುಕ ಗುರುತಿನ ಪ್ರದರ್ಶನವಲ್ಲ. ಬದಲಿಗೆ ನಂಬಿಕೆಯ ಆಚರಣೆ ಎಂದು ದೇವದತ್ ಕಾಮತ್ ಪ್ರತಿಪಾದಿಸಿದರು.

ಶಾಲೆಗೆ ತೆರಳಲು ಅವಕಾಶ ಕೊಡಿ: 

ಸಮವಸ್ತ್ರ ಸೂಚಿಸಲು ಮತ್ತು ಅವುಗಳನ್ನು ಜಾರಿಗೊಳಿಸುವ ಅಧಿಕಾರ ಸರ್ಕಾರಕ್ಕಿದೆ ಎಂದುಕೊಂಡರೂ, ಆ ಸಮವಸ್ತ್ರ ಸಂಹಿತೆ ಪಾಲಿಸದವರನ್ನು ಶಾಲೆಯಿಂದ ಹೊರಗಿಡುವ ಅಧಿಕಾರ ಎಲ್ಲಿದೆ ಎಂದು ಪ್ರಶ್ನಿಸಿದ ಕಾಮತ್, ಇಲ್ಲಿ ಅನುಪಾತ ತತ್ವ ಮುನ್ನೆಲೆಗೆ ಬರಲಿದೆ ಎಂದರು. ಆಗ ಮುಖ್ಯ ನ್ಯಾಯಮೂರ್ತಿಗಳು, ನಿಮ್ಮ ಪ್ರಕರಣದಲ್ಲಿ ವಿದ್ಯಾರ್ಥಿಗಳನ್ನು ಹೊರಹಾಕಲಾಗಿದೆಯೇ ಎಂದು ಪ್ರಶ್ನಿಸಿದರು.

ಇದಕ್ಕುತ್ತರಿಸಿದ ಕಾಮತ್, ಆಡಳಿತ ಮಂಡಳಿ ವಿದ್ಯಾರ್ಥಿನಿಯರಿಗೆ ತರಗತಿಗೆ ತೆರಳಲು ಅವಕಾಶ ನೀಡುತ್ತಿಲ್ಲ. ಇದು ಅದೇ ಪರಿಣಾಮವನ್ನು ಹೊಂದಿದೆ ಎಂದರು. ವಿದ್ಯಾರ್ಥಿನಿಯರಿಗೆ ಸಮವಸ್ತ್ರದ ಬಣ್ಣದ ಹಿಜಾಬ್ ಧರಿಸಿ ತರಗತಿಗೆ ತೆರಳಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿ, ತಮ್ಮ ವಾದ ಪೂರ್ಣಗೊಳಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠ, ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.

ಸಿಡಿಸಿ ಸಕ್ಷಮ ಪ್ರಾಧಿಕಾರವಲ್ಲ

ಮತ್ತೊಬ್ಬ ಅರ್ಜಿದಾರ ವಿದ್ಯಾರ್ಥಿನಿ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಿ, ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಸೂಚಿಸುವ ಸಮವಸ್ತ್ರವನ್ನು ಪಾಲಿಸಬೇಕು ಎಂದು ಸರ್ಕಾರದ ಆದೇಶಿಸಿದೆ. ಸಿಡಿಸಿಯೇ ಕಾನೂನು ಬಾಹಿರವಾಗಿದೆ ಹಾಗೂ ಅದು ಸಕ್ಷಮ ಪ್ರಾಧಿಕಾರವಲ್ಲ.

ಶಾಲಾ-ಕಾಲೇಜು ಸಂಬಂಧಿಸಿದಂತೆ ಸರ್ಕಾರ ಯಾವುದೇ ಸಮವಸ್ತ್ರ ಸಂಹಿತೆ ರೂಪಿಸಿಲ್ಲ. ಹಿಜಾಬ್ ಧರಿಸಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಸಮವಸ್ತ್ರ ನೀತಿಗೆ ಸಂಬಂಧಿಸಿದಂತೆ ಉನ್ನತಮಟ್ಟದ ಸಮಿತಿ ರಚಿಸಿದೆ.

ಸಮಿತಿ ಶಿಫಾರಸು ನೀಡುವವರೆಗೆ ಈಗಿರುವ ನಿಯಮದಂತೆಯೇ ಸಮವಸ್ತ್ರ ನಿಗದಿಪಡಿಸಲು ಸೂಚಿಸಿದೆ. ಸಮವಸ್ತ್ರ ಸಂಹಿತೆಯನ್ನೇ ರೂಪಿಸದೆ ಸಮವಸ್ತ್ರ ನಿಗದಿಪಡಿಸಲು ಸಿಡಿಸಿಗೆ ಸೂಚಿಸಿರುವುದು ಸರಿಯಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap