ಶಿಮ್ಲಾ:
ಮದುವೆಗೆ ಸಿದ್ಧವಾಗಿದ್ದ ಮದುಮಗಳನ್ನು ಬರ್ಬರವಾಗಿ ಕೊಲೆ ಮಾಡಿ, ಆಕೆಯ ದೇಹವನ್ನು ಸುಟ್ಟ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ನಡೆದಿದೆ. ಮೃತಳನ್ನು ಅಂಶಿಕಾ ಠಾಕೂರ್ ಎಂದು ಗುರುತಿಸಲಾಗಿದ್ದು, ಈಕೆ ಬೈರಿಯನ್ ನಿವಾಸಿಯಾಗಿದ್ದು, ದಿವಂಗತ ವಿಪಿನ್ ಠಾಕೂರ್ ಅವರ ಪುತ್ರಿ. ಸೆಪ್ಟೆಂಬರ್ 24 ರ ಬುಧವಾರದಂದು ಭಿಂಡ್ಲಾ ಗ್ರಾಮದ ಯುವಕನೊಂದಿಗೆ ವಿವಾಹ ನಡೆಯಬೇಕಿತ್ತು. ಅಂಶಿಕಾಳ ದೇಹ ಸುಟ್ಟು ಕರಕಲಾಗಿದ್ದಲ್ಲದೆ, ಆಕೆಯ ಮುಖ ಮತ್ತು ಕುತ್ತಿಗೆಯ ಮೇಲೆ ಆಳವಾದ ಗಾಯಗಳು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈರಿಯನ್-ರಾಮ್‌ನಗರ ರಸ್ತೆಯಲ್ಲಿ ಅನ್ಷಿಕಾ ಅವರ ಶವವನ್ನು ಗಮನಿಸಿದ ಅರಣ್ಯ ಸಿಬ್ಬಂದಿಯೊಬ್ಬರು ತಕ್ಷಣವೇ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. 24 ವರ್ಷದ ಮಹಿಳೆಯ ದೇಹವು ಭಾಗಶಃ ಸುಟ್ಟುಹೋಗಿರುವುದು ಪತ್ತೆಯಾಗಿದೆ ಎಂದು ಜೋಲ್ ಪೊಲೀಸ್ ಠಾಣೆಯ ಉಸ್ತುವಾರಿ ಅಶೋಕ್ ಕುಮಾರ್ ದೃಢಪಡಿಸಿದ್ದಾರೆ. ಸದ್ಯ ಯುವತಿಯ ದೇಹವನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬಂದ ನಂತರ ತನಿಖೆಯನ್ನು ಚುರುಕುಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಆಕೆಯ ಮನೆಯಿಂದ ಕೇಲವ 500 ಮೀಟರ್ ದೂರದಲ್ಲಿ ಶವ ಪತ್ತೆಯಾಗಿದ್ದು, ಊರಿನವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಘಟನೆಯು ಸಾರ್ವಜನಿಕರಲ್ಲಿ ಭಯ ಉಂಟು ಮಾಡಿದ್ದು, ಯುವತಿಯನ್ನು ತಡರಾತ್ರಿ ಮನೆಯಿಂದ ಹೊರಗೆಳೆದು ಕೊಂದವರು ಯಾರು ಎಂಬ ಪ್ರಶ್ನೆ ಮೂಡಿದೆ.
ಪ್ರತ್ಯೇಕ ಘಟನೆಯಲ್ಲಿ, ದುಷ್ಕರ್ಮಿಗಳು ತನ್ನ ಪ್ರಿಯಕರನನ್ನು ಹತ್ಯೆ ಮಾಡಿದ್ದಕ್ಕೆ ಮನನೊಂದು ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಚಿಲ್ಕಾನಾದಲ್ಲಿ ನಡೆದಿದೆ. ಚಿಲ್ಕಾನಾ ಪ್ರದೇಶದ ನಿವಾಸಿ ಅಂಕಿತಾ (18) ಆತ್ಮಹತ್ಯೆಗೆ ಶರಣಾದ ಯುವತಿ ಎಂದು ತಿಳಿದು ಬಂದಿದೆ. ಶುಕ್ರವಾರ ಆಕೆಯ ಪ್ರಿಯಕರನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇದರಿಂದ ನೊಂದಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವತಿಯ ಪ್ರಿಯಕರ ಮಹಿಲ್ (22) ಕೊಲೆಯಲ್ಲಿ ಅಂಕಿತಾ ಅವರ ಸಂಬಂಧಿಕರು ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆತನ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಈ ಸಂಬಂಧ ಅಂಕಿತಾಳ ಇಬ್ಬರು ಅಪ್ರಾಪ್ತ ಸಹೋದರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
