ಅಹಮದಾಬಾದ್:
ಪ್ರಸ್ತುತ ನಡೆಯುತ್ತಿರುವ 2025ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ತೀವ್ರ ರೋಚಕತೆ ಕೆರಳಿಸಿದ್ದ ಸೂಪರ್ ಓವರ್ ಥ್ರಿಲ್ಲರ್‌ನಲ್ಲಿ ತ್ರಿಪುರ ಎದುರು ಕರ್ನಾಟಕ ತಂಡ ಸೋಲು ಅನುಭವಿಸಿದೆ. ಒಟ್ಟಾರೆ ಈ ಟೂರ್ನಿಯಲ್ಲಿ ಕರ್ನಾಟಕ ತಂಡ, ಒಟ್ಟು ಐದು ಪಂದ್ಯಗಳ ಸೋಲು ಅನುಭವಿಸಿದೆ. ಕೇವಲ ಎರಡು ಜಯಗಳೊಂದಿಗೆ ಎಲೈಟ್ ಡಿ ಪಾಯಿಂಟ್ಸ್ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ.
ಸೋಮವಾರ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಕರ್ನಾಟಕ ತಂಡ ನೀಡಿದ್ದ 198 ರನ್‌ಗಳ ಗುರಿಯನ್ನು ಹಿಂಬಾಲಿಸಿದ ತ್ರಿಪುರ ತಂಡ, ನಾಯಕ ಮಣಿಶಂಕರ್ ಮುರುಸಿಂಗ್ (69) ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 197 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಉಭಯ ತಂಡಗಳ ಮೊತ್ತ ಸಮನಾಗಿದ್ದರಿಂದ ಪಂದ್ಯ ಟೈ ಆಯಿತು. ಬಳಿಕ ಪಂದ್ಯದ ಫಲಿತಾಂಶಕ್ಕಾಗಿ ಸೂಪರ್ ಓವರ್‌ಗೆ ಮೊರೆ ಹೋಗಲಾಯಿತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ತ್ರಿಪುರ ತಂಡ, ಶ್ರೀದಾಮ್ ಪಾಲ್ (16*) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 22 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿ ಹಿಂಬಾಲಿಸಿದ ಕರ್ನಾಟಕ ತಂಡ, ಒಂದು ವಿಕೆಟ್ ನಷ್ಟಕ್ಕೆ 18 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ತ್ರಿಪುರ ತಂಡ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ ಪ್ರಗತಿ ಕಂಡಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡದ ಪರ ಅಗ್ರ ನಾಲ್ಕು ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನವನ್ನು ತೋರಿದರು. ಆರಂಭದಲ್ಲಿಯೇ ಸ್ಪೋಟಕ ಬ್ಯಾಟಿಂಗ್ ಪ್ರದರ್ಶವನ್ನು ತೋರಿದ ಬಿಆರ್ ಶರತ್, 20 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಆರು ಬೌಂಡರಿಗಳೊಂದಿಗೆ 44 ರನ್‌ಗಳನ್ನು ಸಿಡಿಸಿದ್ದರು. ಮಯಾಂಕ್ ಅಗರ್ವಾಲ್ 26 ಎಸೆತಗಳಲ್ಲಿ 29, ದೇವದತ್ ಪಡಿಕ್ಕಲ್ 23 ಎಸೆತಗಳಲ್ಲಿ 32 ರನ್‌ಗಳನ್ನು ಕಲೆ ಹಾಕಿದ್ದರು. ಮೆಕ್ನೀಲ್ ನೊರುನ್ಹಾ ಅವರು 21 ಎಸೆತಗಳಲ್ಲಿ 34 ರನ್‌ಗಳನ್ನು ಗಳಿಸಿದರು. ಕೊನೆಯಲ್ಲಿ ಸ್ಮರಣ್ ರವಿಚಂದ್ರನ್ 24 ರನ್‌ಗಳನ್ನು ಗಳಿಸಿದ್ದರು. ಅಂತಿಮವಾಗಿ ಕರ್ನಾಟಕ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 197 ರನ್‌ಗಳನ್ನು ಕಲೆ ಹಾಕಿತು.
197 ರನ್‌ಗಳ ಗುರಿಯನ್ನು ಹಿಂಬಾಲಿಸಿದ ತ್ರಿಪುರ ತಂಡದ ಪರ ನಾಯಕ ಮಣಿಶಂಕರ್ ಮುರುಸಿಂಗ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಆಡಿದ 35 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ ಎರಡು ಬೌಂಡರಿಗಳೊಂದಿಗೆ 69 ರನ್ ಗಳಿಸಿದರು. ಇದಕ್ಕೂ ಮುನ್ನ ಹನುಮ ವಿಹಾರಿ 19 ಎಸೆತಗಳಲ್ಲಿ 36 ರನ್ ಹಾಗೂ ಶ್ರಿದಾಮ್ ಪಾಲ್ 15 ಎಸೆತಗಳಲ್ಲಿ 28 ರನ್‌ಗಳನ್ನು ಬಾರಿಸಿದ್ದರು. ಕರ್ನಾಟಕ ತಂಡದ ಪರ ಶುಭಾಂಗ್ ಹೆಗ್ಡೆ ಹಾಗೂ ಪ್ರವೀಣ್ ದುಬೆ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ.








