ಹಾನಗಲ್ಲ :
ಮನೆಯವರಿಲ್ಲದ ಸಮಯ ನೋಡಿ ಹಾನಗಲ್ಲಿನಲ್ಲಿ ಹಗಲು ದರೋಡೆ ನಡೆದಿದ್ದು, 13.20 ಲಕ್ಷ ಮೌಲ್ಯದ 441 ಗ್ರಾಮ್ ಬಂಗಾರದ ಆಭರಣ ಕಳ್ಳತನವಾಗಿದೆ.
ಹಾನಗಲ್ಲ ಪಟ್ಟಣದ ಪ್ರವಾಸಿ ಮಂದಿರದ ಹಿಂದಿನ ರೇಣುಕಾ ನಗರದ ನಿವಾಸಿ ನಿವೃತ್ತ ಪ್ರಾಚಾಂರ್ಯ ಎನ್.ಬಿ.ಬಣಕಾರ ಎಂಬುವವರು ಸೋಮವಾರ ಮನೆಯಲ್ಲಿಲ್ಲದ ಸಮಯದಲ್ಲಿ ಈ ಘಟನೆ ನಡೆದಿದೆ. ಸೋಮವಾರ ಎನ್.ಬಿ.ಬಣಕಾರ ಅವರು ಕೆಲಸದ ನಿಮಿತ್ತ ಹಾನಗಲ್ಲ ಮನೆಯಿಂದ ಊರಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇರಲಿಲ್ಲ. ರಾತ್ರಿ 9.30 ರ ಹೊತ್ತಿಗೆ ಮರಳಿ ಮನೆಗೆ ಬಂದು ಮನೆಯ ಬಾಗಿಲು ತೆರದು ಒಳ ಹೋದಾಗ ದರೋಡೆ ನಡೆದ ಘಟನೆ ಬೆಳಕಿಗೆ ಬಂದಿದೆ.
ಮನೆಯ ಹಿತ್ತಿಲ ಬಾಗಿಲದ ಚಿಲಕ ಮುರಿದು ದರೋಡೆಕೋರರು ಒಳ ಬಂದು ಎರಡು ಅಲ್ಮೇರಾಗಳಲ್ಲಿರುವ 13.20 ಲಕ್ಷ ಮೌಲ್ಯದ 441 ಗ್ರಾಮ್ ಬಂಗಾರದ ಆಭರಣಗಳನ್ನು ಕದ್ದೊಯ್ದಿದ್ದಾರೆ. ಈ ಘಟನೆಗೆ ಭಯಗೊಂಡ ಅವರು ಹಾನಗಲ್ಲ ಪೊಲೀಸ ಠಾಣೆಗೆ ದೂರ ನೀಡಿದ್ದಾರೆ.
ಕೂಡಲೇ ಹಾನಗಲ್ಲ ಪಿಎಸ್‍ಐ ಗುರುರಾಜ ಮೈಲಾರ ದರೋಡ ನಡೆದ ಮನೆಗೆ ಆಗಮಿಸಿ ಸ್ಥಳ ಪರಿಶೀಲಿಸಿ ಮೇಲಾಧಿಕಾರಿಗಳಿಗೆ ವಿವರ ನೀಡಿದ್ದಾರೆ. ಕೂಡಲೇ ಶಿಗ್ಗಾವಿಯ ಡಿವಾಯ್‍ಎಸ್‍ಪಿ ಎಲ್.ವಾಯ್‍ಶಿರಕೋಳ ಸ್ಥಳಕ್ಕೆ ಆಗಮಿಸಿ ತನಿಖೆಯಲ್ಲಿ ಪಾಲ್ಗೊಂಡರು. ನಂತರ ಹಾವೇರಿಯಿಂದ ಬೆರಳಚ್ಚು ತಜ್ಞರು, ಡಾಗ್ಸ ಸ್ಕ್ವಾಡ್ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ರಾತ್ರಿಯಿಂದ ಬೆಳಗಿನ 6 ಘಂಟೆಯವರೆಗೆ ಎಲ್ಲ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಹಾವೇರಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಕೆ.ಪರಶುರಾಮ ಮಂಗಳವಾರ ಬೆಳಿಗ್ಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಹಾನಗಲ್ಲಿನಲ್ಲಿ ಡಿಸೆಂಬರ್ ಹಾಗೂ ಜನೇವರಿ ತಿಂಗಳಿನಲ್ಲಿ 3 ಸರಣಿ ಕಳ್ಳತನಗಳಾಗಿವೆ. ಈ ಬಗ್ಗೆ ತನಿಖೆ ನಡೆದಿದೆ ಎಂದು ತಿಳಿಸಿದರು.
ಹಾನಗಲ್ಲಿನಲ್ಲಿ ಹಲವು ಇಂಥ ಪ್ರಕರಣಗಳು ನಡೆದಿರುವುದು ಗಮನಕ್ಕೆ ಬಂದಿದೆ. ಈ ಕಳ್ಳತನಕ್ಕೆ ಒಂದೇ ಗುಂಪು ಮುಂದಾಗಿರುವ ಸಂಶಯವಿದೆ. ಈ ಪ್ರಕರಣವನ್ನು ಬೇಧಿಸಲು ವಿಶೇಷ ತನಿಖಾ ದಳ ರಚಿಸಿ ದರೋಡೆಕೋರರನ್ನು ಪತ್ತೆ ಮಾಡಲಾಗುವುದು. ಇದಕ್ಕೆ ಹಾನಗಲ್ಲ ಪಿಎಸ್‍ಐ ಗುರುರಾಜ ಮೈಲಾರ ಹಾಗೂ ಶಿಗ್ಗಾಂವ ಸಿಪಿಐ ಆರ್.ಎಫ್.ದೇಸಾಯಿ ನೇತೃತ್ವ ವಹಿಸುವರು. ಎಂಥದೇ ಸ್ಥಿತಿಯಲ್ಲಿ ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದು ಹಾವೇರಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಕೆ.ಪರಶುರಾಮ ಸುದ್ದಿಗಾರರಿಗೆ ತಿಳಿಸಿದರು.
ಸಂಶಯಾಸ್ಪದ ವ್ಯಕ್ತಿಗಳ ಓಡಾಟ :
ಹಾನಗಲ್ಲ ತಾಲೂಕಿನಲ್ಲಿ ಸಂಶಯಾಸ್ಪದವಾಗಿ ಓಡಾಡುವವರು ಕಂಡು ಬಂದರೆ ಕೂಡಲೇ ಹಾನಗಲ್ಲ ಪೊಲೀಸ ಠಾಣೆಗೆ ಮಾಹಿತಿ ನೀಡುವಂತೆ ಮತ್ತು ಊರು ಕೇರಿಗಳಿಗೆ ಮನೆಯಲ್ಲಿ ಯಾರು ಇಲ್ಲದಂತೆ ತೆರಳುತ್ತಿರುವ ಸಂದರ್ಭಗಳಿದ್ದರೆ ಪೊಲೀಸ ಠಾಣೆಗೆ ಮಾಹಿತಿ ನೀಡಬೇಕು ಮತ್ತು ಅಕ್ಕ ಮನೆಯವರಿಗೆ ತಿಳಿಸಿದರೆ ಇಂಥ ಘಟನೆಗಳು ನಡೆಯದಂತೆ ನಿಗಾ ವಹಿಸಲು ಸಾಧ್ಯ ಎಂದು ಪಿಎಸ್‍ಐ ಗುರುರಾಜ ಮೈಲಾರದ (08379-262333 ಹಾಗೂ 9480804561, 9480804535) ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ