ತಿರುಪತಿ :
ಕೇಂದ್ರದ ಭಾರಿ ಕೈಗಾರಿಕೆಗಳು ಮತ್ತು ಉಕ್ಕು ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಶನಿವಾರ ಬೆಳಗ್ಗೆ ಆಂಧ್ರ ಪ್ರದೇಶದ ತಿರುಮಲ ದೇವಸ್ಥಾನದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ಕೇಂದ್ರ ಸರ್ಕಾರದ ಸಚಿವರಾಗಿ ತಮ್ಮ ಕೆಲಸ ಯಶಸ್ವಿಯಾಗಲು ತಿಮ್ಮಪ್ಪನ ಆಶೀರ್ವಾದ ಕೋರಿದರು.
ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದಲ್ಲಿ ಸಚಿವನಾಗಿರುವ ತಮ್ಮ ಕೆಲಸದಲ್ಲಿ ಯಶಸ್ವಿಯಾಗಲು ತಮಗೆ ಶಕ್ತಿ ನೀಡುವಂತೆ ವೆಂಕಟೇಶ್ವರ ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.
‘ಮೊದಲಿನಿಂದಲೂ ನಾವು ವೆಂಕಟೇಶ್ವರನ ಭಕ್ತರು. ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಸಚಿವನಾಗಿ ನನ್ನ ಕೆಲಸದಲ್ಲಿ ಯಶಸ್ವಿಯಾಗಲು ವೆಂಕಟೇಶ್ವರನ ಆಶೀರ್ವಾದ ಪಡೆಯಲು ಬಂದಿದ್ದೇನೆ ಮತ್ತು ಅದಕ್ಕಾಗಿ ಇಲ್ಲಿಗೆ ಬಂದು ಶಕ್ತಿ ಕೊಡು ಎಂದು ವೆಂಕಟೇಶ್ವರನಲ್ಲಿ ಪ್ರಾರ್ಥಿಸಿದೆ. ನಾವು ಪ್ರಧಾನಿಯವರ ನಿರೀಕ್ಷೆಗಳನ್ನು ಪೂರೈಸಲು ಮತ್ತು ಅಭಿವೃದ್ಧಿ ಪರ ಕೆಲಸಗಳನ್ನು ಮಾಡಬೇಕಿದೆ’ ಎಂದು ಅವರು ಹೇಳಿದರು.
ಕೇಂದ್ರದಲ್ಲಿ ಸಚಿವನಾಗಿ ಅಧಿಕಾರ ಸ್ವೀಕರಿದ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಸಚಿವ ಕುಮಾರಸ್ವಾಮಿ ಅವರಿಗೆ ಶುಕ್ರವಾರ ಅದ್ಧೂರಿ ಸ್ವಾಗತ ಕೋರಲಾಯಿತು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರಿಗೆ ಜನತಾ ದಳ (ಜಾತ್ಯತೀತ) ಮತ್ತು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಆತ್ಮೀಯ ಸ್ವಾಗತ ಕೋರಿದರು.
ಕುಮಾರಸ್ವಾಮಿ ಅವರು ಮಂಗಳವಾರ, ಜೂನ್ 11 ರಂದು ಭಾರಿ ಕೈಗಾರಿಕೆಗಳ ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಅವರಿಗೆ ಉಕ್ಕು ಸಚಿವಾಲಯದ ಖಾತೆಯನ್ನು ಸಹ ಹಂಚಿಕೆ ಮಾಡಲಾಗಿದೆ.
ಕುಮಾರಸ್ವಾಮಿ ಅವರು ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಸಂಪುಟ ಸಚಿವರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಲೋಕಸಭೆ ಚುನಾವಣೆಯಲ್ಲಿ ಗೆದ್ದ ಇಬ್ಬರು ಜೆಡಿಎಸ್ ಅಭ್ಯರ್ಥಿಗಳಲ್ಲಿ ಒಬ್ಬರಾದ ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಗೆದ್ದಿದ್ದಾರೆ.
ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ರಾಜ್ಯದ 28 ಸ್ಥಾನಗಳ ಪೈಕಿ 25 ಸ್ಥಾನಗಳಲ್ಲಿ ಬಿಜೆಪಿ ಮತ್ತು ಮೂರು ಸ್ಥಾನಗಳಲ್ಲಿ ಜೆಡಿಎಸ್ ಸ್ಪರ್ಧಿಸಿತ್ತು. ಈ ಪೈಕಿ ಬಿಜೆಪಿ 17 ಸ್ಥಾನಗಳಲ್ಲಿ ಮತ್ತು ಜೆಡಿಎಸ್ ಎರಡು ಸ್ಥಾನಗಳನ್ನು ಗೆಲುವು ಸಾಧಿಸಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒಂಬತ್ತು ಸ್ಥಾನಗಳನ್ನು ಪಡೆದುಕೊಂಡಿತು.