ಬೆಂಗಳೂರು:
ನಾನು ಎನ್ನುವುದು ಅಹಂಕಾರ, ನಾವು ಎನ್ನುವುದು ಸಂಸ್ಕಾರ.. ಇಷ್ಟು ಸರಳ ಸಾಮರಸ್ಯ ತತ್ತ್ವವೂ ಡಿಸಿಎಂ ಆಗಿರುವ ವ್ಯಕ್ತಿಗೆ ತಿಳಿದಿಲ್ಲ ಎಂದರೆ, ಇದಕ್ಕಿಂತ ತಿಳಿಗೇಡಿತನ ಇನ್ನೊಂದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್’ಡಿ.ಕುಮಾರಸ್ವಾಮಿಯವರು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕುಮಾರಸ್ವಾಮಿಯವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿದು 7 ಜನ ಸಾವನ್ನಪ್ಪಿದ್ದ ಶಿರೂರು ಗ್ರಾಮಕ್ಕೆ ನಾನು ಶನಿವಾರ ಭೇಟಿ ನೀಡಿದಾಗ ಈ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಲೇವಡಿ ಮಾಡಿದ್ದರು. ಮಿಲಿಟರಿಯನ್ನು ಕರೆತಂದು ಫೀಲ್ಡಿಗೆ ಇಳಿಸಬೇಕಾಗಿತ್ತು. ಅವರೊಬ್ಬರೇ ಬಂದು ಏನು ಮಾಡುತ್ತಾರೆ ಎಂದು ಲಘುವಾಗಿ ಮಾತನಾಡಿದ್ದರು.
ಮಾನ್ಯ ಡಿಸಿಎಂ ಅವರು ನನ್ನ ಬಗ್ಗೆ ಲಘುವಾಗಿ ಮಾತನಾಡುವ ಭರದಲ್ಲಿ ನಮ್ಮ ಹೆಮ್ಮೆಯ ಸೇನೆಯನ್ನೂ ಹೀಗಳೆದಿದ್ದರು. ಇದು ದುರ್ದೈವದ ಸಂಗತಿ. ಜಿಲ್ಲಾಡಳಿತ ರಕ್ಷಣಾ ಕಾರ್ಯ ಮಾಡುತ್ತಿಲ್ಲವೆಂದು ನಾನು ಹೇಳಿಲ್ಲ. ಸರಕಾರವನ್ನೂ ಟೀಕಿಸಿಲ್ಲ. ಆದರೂ, ನೊಂದ ಕುಟುಂಬಗಳ ಕಣ್ಣೀರಿಗೆ ಓಗೊಟ್ಟು ನಮ್ಮ ಹೆಮ್ಮೆಯ ಸೇನೆಯ 40ಕ್ಕೂ ಹೆಚ್ಚು ವೀರಯೋಧರು ರಕ್ಷಣಾ ಕಾರ್ಯಕ್ಕೆ ಧಾವಿಸಿ, ರಕ್ಷಣಾ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಿದ್ದಾರೆ. ಇದಕ್ಕೆ ಡಿಸಿಎಂ ಅವರ ಆಕ್ಷೇಪಣೆ ಇದೆಯಾ? ಈ ಬಗ್ಗೆ ಅವರೇ ಉತ್ತರಿಸಬೇಕು. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ನಾನು ಎನ್ನುವುದು ಅಹಂಕಾರ, ನಾವು ಎನ್ನುವುದು ಸಂಸ್ಕಾರ.. ಇಷ್ಟು ಸರಳ ಸಾಮರಸ್ಯ ತತ್ತ್ವವೂ ಡಿಸಿಎಂ ಆಗಿರುವ ವ್ಯಕ್ತಿಗೆ ತಿಳಿದಿಲ್ಲ ಎಂದರೆ, ಇದಕ್ಕಿಂತ ತಿಳಿಗೇಡಿತನ ಇನ್ನೊಂದಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಹಿಂದೆ ಹೇಳಿಕೆ ನೀಡಿದ್ದ ಡಿಕೆ.ಶಿವಕುಮಾರ್ ಅವರು, ಕುಮಾರಸ್ವಾಮಿ ಎಲ್ರೀ ಫೀಲ್ಡಿಗಿಳಿದಿದ್ದಾರೆ? ಅವರು ಸೈನಿಕರನ್ನು ಕರೆತಂದು ಫೀಲ್ಡಿಗಿಳಿಯಬೇಕಿತ್ತು. ಸುಮ್ನೆ ಹೋಗಿ ಒಂದು ವಿಸಿಟ್ ಮಾಡುವುದಲ್ಲ. ನಾವು ಒಂದೇ ಘಂಟೆಯಲ್ಲಿ ನಮ್ಮ ಮಿನಿಸ್ಟರ್‌ನ ಕ್ಯಾಬಿನೆಟ್‌ನಿಂದ ಅಲ್ಲಿಗೆ ಕಳಿಸಿದ್ದೇವೆ. ಕೃಷ್ಣ ಬೈರೇಗೌಡ, ಮಂಕಾಳ ವೈದ್ಯ ಏನೆಲ್ಲಾ ಮಾಡಬೇಕೋ ಅದನ್ನು ಮಾಡ್ತಿದ್ದಾರೆ. ಕುಮಾರಸ್ವಾಮಿ ಮಿಲಿಟರಿ ತಂದು ಕಾರ್ಯಾಚರಣೆ ಮಾಡಿಸಿದ್ದಾರಾ? ಎಚ್‌ಡಿಕೆ ಬರಲಿ , ಬೇಡ ಅಂದವರು ಯಾರು? ಈ ವಿಚಾರದಲ್ಲಿ ನಾನು ರಾಜಕೀಯ ಮಾಡಲ್ಲ. ಅವರು ಹೋಗುವುದಕ್ಕೆ ನಾವ್ಯಾಕೆ ಅಡ್ಡಿ ಮಾಡಲಿ ಎಂದು ಹೇಳಿದ್ದರು.