ಬೆಂಗಳೂರು
ದೀಪಾವಳಿ ಸಂದರ್ಭದಲ್ಲಿ ಕಂಬದಿAದ ವಿದ್ಯುತ್ ಸಂಪರ್ಕ ಪಡೆದ ಆರೋಪದ ಹಿನ್ನೆಲೆಯಲ್ಲಿ ಬೆಸ್ಕಾಂ ವಿಚಕ್ಷಣಾ ದಳ ತಮಗೆ ವಿಧಿಸಿದ್ದ 68,526 ರೂ. ದಂಡವನ್ನು ಪಾವತಿ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು. ಬೆಸ್ಕಾಂ ವಿಧಿಸಿರುವ ದಂಡದ ಮೊತ್ತ ಲೋಪದಿಂದ ಕೂಡಿದ್ದು ಈ ಬಗ್ಗೆ ತಮಗೆ ಸ್ಪಷ್ಟನೆ ಕೊಡಬೇಕು ಎಂದು ಅವರು ಇಂಧನ ಇಲಾಖೆಯನ್ನು ಒತ್ತಾಯ ಮಾಡಿದ್ದಾರೆ.
ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆ.ಪಿ.ನಗರದ ತಮ್ಮ ಮನೆಗೆ ಕಂಬದಿAದ ವಿದ್ಯುತ್ ಪಡೆದಿರುವುದಕ್ಕೆ ಬೆಸ್ಕಾಂ ವಿಚಕ್ಷಣಾ ದಳ ವಿಧಿಸಿರುವ ದಂಡವೇ ಅಕ್ರಮ ಎಂದು ಅವರು ಕುಮಾರಸ್ವಾಮಿ ಅರೋಪ ಮಾಡಿದ್ದಾರೆ.
ನನ್ನ ಮನೆಗೆ ನಾನು 33 ಕೆ.ವಿ.ಗೆ ಅನುಮತಿ ಪಡೆದಿದ್ದೇನೆ. ವಿದ್ಯುತ್ ಕಳವು ಆರೋಪದಲ್ಲಿ 2.5 ಕೆವಿ ವಿದ್ಯುತ್ ಪಡೆಯಲಾಗಿದೆ ಎಂದು ಬೆಸ್ಕಾಂ ಹೇಳಿದೆ. ಅಸಲಿಗೆ 1 ಕೆವಿ ವಿದ್ಯುತ್ ಮಾತ್ರ ನಮ್ಮ ಮನೆಯ ಲೈಟಿಂಗ್ ಗೆ ಬಳಕೆ ಮಾಡಲಾಗಿತ್ತು. ಆದರೂ ಬೆಸ್ಕಾಂ ಅಧಿಕಾರಿಗಳು 2.5 ಕೆವಿ ಅಂತ ಸುಳ್ಳು ಲೆಕ್ಕ ತೋರಿಸಿದ್ದಾರೆ. ಯಾರದ್ದೋ ಒತ್ತಡಕ್ಕೆ ಮಣಿದು ಹೀಗೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನಾನು ಬಳಕೆ ಮಾಡಿರುವುದು 71 ಯುನಿಟ್. ಅದಕ್ಕೆ 3 ಪಟ್ಟು ದಂಡ ಎಂದರೆ ಅಂದರೂ 2,526 ರೂ. ದಂಡ ಆಗುತ್ತದೆ. ಆದರೆ ಬೆಸ್ಕಾಂನವರು 68 ಸಾವಿರ ದಂಡ ಪಾವತಿ ಮಾಡಲು ಹೇಳಿದೆ. ನನ್ನ ಮನೆಗೆ ಅನುಮತಿ ಪಡೆದಿರೋ 33 ಕೆವಿಗೂ 66 ಸಾವಿರ ಬಿಲ್ ಹಾಕಿ ಒಟ್ಟಾರೆ 68,526 ದಂಡ ವಿಧಿಸಿದೆ. ನಿಯಮದ ಪ್ರಕಾರ ಬಿಲ್ ಹಾಕದೇ ಹೆಚ್ಚುವರಿ ಬಿಲ್ ಹಾಕಿದೆ. ಮಾಜಿ ಮುಖ್ಯಮಂತ್ರಿ ಒಬ್ಬರಿಗೇ ಹೀಗಾದರೆ ಸಾಮಾನ್ಯ ಜನರ ಕಥೆ ಏನು? ಎಂದು ಅವರು ಪ್ರಶ್ನಿಸಿದರು.
ಈ ಬಗ್ಗೆ ಬೆಸ್ಕಾಂ ನವೆರಿಗೆ ಮರು ಪರಿಶೀಲನಾ ಪತ್ರ ಬರೆದಿದ್ದೇನೆ ಹಾಗೂ ದಂಡವನ್ನೂ ಕಟ್ಟಿದ್ದೇನೆ. ಆದರೆ ಇಷ್ಟು ಬಿಲ್ ಯಾಕೆ ಅಂತ ವಿವರಣೆ ಕೊಡಿ ಎಂದು ಆಕ್ಷೇಪಣೆ ವ್ಯಕ್ತಪಡಿಸಿ ಪತ್ರ ಬರೆದಿದ್ದೇನೆ. ಬೆಸ್ಕಾಂ ವಿಜಿಲೆನ್ಸ್ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದು ನನಗೆ ಗೊತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದರು.
ದೀಪಾವಳಿ ಹಬ್ಬದ ವೇಳೆ ನಮ್ಮನೆ ಹುಡುಗರು ದೀಪಾಲಂಕಾರ ಮಾಡುವಾಗ ಅಚಾತುರ್ಯ ಆಗಿತ್ತು. ಇದಕ್ಕೆ ನಾನೇ ವಿಷಾದ ವ್ಯಕ್ತಪಡಿಸಿ ದಂಡ ಪಾವತಿ ಮಾಡುವುದಾಗಿ ಹೇಳಿದ್ದೆ. ಅದರಂತೆ ದಂಡ ಪಾವತಿ ಮಾಡಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಯಾರೋ ಹುಡುಗರು ಮಾಡಿದ ತಪ್ಪಿಗೆ ವಿಷಾದ ವ್ಯಕ್ತಪಡಿಸಿ, ಅದರ ಜವಾಬ್ದಾರಿ ನಾನೇ ಹೊತ್ತೆ. ಈಗ ವಿದ್ಯುತ್ ಕಳ್ಳ ಅಂತ ಪಟ್ಟ ಬೇರೆ ಕೊಟ್ಟಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆದಿಯಾಗಿ ಎಲ್ಲರೂ ಹೇಳಿಕೆ ಕೊಟ್ಟಿದ್ದರು. ದಂಡದ ಬಿಲ್ ಕೊಟ್ಟರು, ಕಟ್ಟಿದ್ದೇನೆ ಎಂದರು ಕುಮಾರಸ್ವಾಮಿ ಅವರು.
ಬೆಂಗಳೂರಿನ ಸುಜಾತ ಬಸ್ ನಿಲ್ದಾಣದ ಬಳಿ ಆಕಾಶದ ಎತ್ತರಕ್ಕೆ ಕಟ್ಟಿರುವ ಲುಲು ಮಾಲ್ ಪ್ರಾರಂಭಕ್ಕೂ ಮುನ್ನ 6 ತಿಂಗಳು ಬಳಕೆ ಮಾಡಿದ ವಿದ್ಯುತ್ ಬಿಲ್ ಬಗ್ಗೆ ಬೆಸ್ಕಾಂ ವಿಚಕ್ಷಣ ದಳ ಮಾಹಿತಿ ನೀಡುತ್ತಾ? ಅದರ ಬಗ್ಗೆ ಇರುವ ಮಾಹಿತಿಯನ್ನು ಅವರು ಬಹಿರಂಗ ಮಾಡುತ್ತಾರಾ? ಎಂದು ಪ್ರಶ್ನಿಸಿದರು.
ಲುಲು ಮಾಲ್ ಆರಂಭಕ್ಕೆ ಮೊದಲು 6 ತಿಂಗಳು ವಿದ್ಯುತ್ ಬಿಲ್ ಕಟ್ಟಲು ಬಿಟ್ಟಿಲ್ಲ. ಹಾಗಾದರೆ, ಅವರು ಎಲ್ಲಿಂದ ವಿದ್ಯುತ್ ಬಳಿಸಿದರು. ಆಕಾಶದಿಂದ ವಿದ್ಯುತ್ ಉತ್ಪಾದನೆ ಮಾಡಿದ್ರಾ ಇವರು. ಇವರ ಯೋಗ್ಯತೆಗೆ ನನ್ನನ್ನು ಕಳ್ಳ ಕಳ್ಳ ಅಂತಾರೆ ಎಂದು ಲುಲು ಮಾಲ್ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ಗಂಭೀರ ಆರೋಪ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ