‘ಶ್ರೀನಿವಾಸ್’ರನ್ನು ಮಂತ್ರಿ ಮಾಡಿದ ತಪ್ಪಿಗೆ ದ್ರೋಹ’ – ಎಚ್‍ಡಿಕೆ

ಗುಬ್ಬಿ : 

     2004 ರಲ್ಲಿ ಲಿಂಗಾಯತ ಮುಖಂಡ ಶಿವನಂಜಪ್ಪನವರಿಗೆ ಪಕ್ಷದ ಸೀಟನ್ನು ನಮ್ಮ ತಂದೆಯವರು ನೀಡಿದ್ದರು. ಆಗ ಕಾಂಗ್ರೆಸ್ ಜಿಪಂ ಸದಸ್ಯರಾಗಿದ್ದ ಸ್ನೇಹಿತ ಎಸ್.ಆರ್.ಶ್ರೀನಿವಾಸ್‍ಗೆ ನಾನೇ ಪಕ್ಷೇತರನಾಗಿ ನಿಲ್ಲಲು ಹೇಳಿದ ತಪ್ಪಿಗೆ ಹಾಗೂ ಕುಂಚಿಟಿಗರಿಗೆ ಕೊಡಬೇಕಾದ ಸಚಿವ ಸ್ಥಾನವನ್ನು ಎಲ್ಲರ ನಿಷ್ಠುರ ಕಟ್ಟಿಕೊಂಡು ಪುಣ್ಯಾತ್ಮನನ್ನ ಮಂತ್ರಿ ಮಾಡಿದ್ದಕ್ಕೆ, ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಮುಗಿಸಲು ಯಾರ್ಯಾರ ಮನೆಗಳಲ್ಲಿ ರಾತ್ರಿ ನಡೆದ ಸಭೆಗಳು ಹಾಗೂ ತುರುವೇಕೆರೆ ಕೃಷ್ಣಪ್ಪ ಅವರನ್ನು ಸೋಲಿಸಲು ನಡೆಸಿದ ಕುತಂತ್ರ ಎಲ್ಲವೂ ತಿಳಿದಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ವಿರುದ್ದ ಸಿಡಿದರು.

      ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಜೆಡಿಎಸ್ ಸೇರ್ಪಡೆ ಸಮಾವೇಶ ಕಾರ್ಯಕ್ರಮದಲ್ಲಿ ಮುಖಂಡ ಬಿ.ಎಸ್.ನಾಗರಾಜು ಸೇರಿದಂತೆ ಬಿಜೆಪಿ ತೊರೆದ ಮೂವರು ಜಿಪಂ ಮಾಜಿ ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಪಕ್ಷದಲ್ಲೇ ಇದ್ದು ನಂಬಿಸಿ ಕುತ್ತಿಗೆ ಕುಯ್ಯುವ ಕೆಲಸ ಮಾಡುವುದು ಬೇಡ. ಬೇರೆ ಪಕ್ಷಕ್ಕೆ ಹೋಗುವವರು ಹೋಗಲಿ, ಅವರಿಗೆ ಶುಭ ಹಾರೈಕೆಗಳು ಎಂದು ಭಾವುಕರಾದರು.

ಗುಬ್ಬಿ ಮತದಾರರು ಜೆಡಿಎಸ್ ಪರ ನಿಲ್ಲಿ :

       ಇದೇ ಗುಬ್ಬಿಯಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಲು ಪಕ್ಷದ ಪ್ರಾಮಾಣಕ ಕಾರ್ಯಕರ್ತರೆ ಕಾರಣ. 2004ರಲ್ಲಿ ಜೆಡಿಎಸ್ ಟಿಕೆಟ್ ತಪ್ಪಿಸಿದ್ದರು ಎನ್ನುವ ಮುನ್ನ ಆಲೋಚನೆ ಮಾಡಬೇಕಿದೆ. 2023 ಕ್ಕೆ ಪ್ರಾದೇಶಿಕ ಪಕ್ಷವನ್ನು ಆಳ್ವಿಕೆಗೆ ತರಲು ಪಕ್ಷದ ಎಲ್ಲಾ ಕಾರ್ಯಕರ್ತರು ಶ್ರಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಗುಬ್ಬಿ ಮತದಾರರು ಜೆಡಿಎಸ್ ಪರ ಮತ ನೀಡಲು ಮನವಿ ಮಾಡಿದರು.

      ಪ್ರಾದೇಶಿಕ ಪಕ್ಷದ ಅವಶ್ಯಕತೆ ಜನರಿಗೆ ತಿಳಿದಿದೆ :

       14 ತಿಂಗಳಲ್ಲಿ 25 ಸಾವಿರ ಕೋಟಿ ರೂ.ಗಳ ಸಾಲಮನ್ನಾ ಯೋಜನೆ ಎಲ್ಲಾ ಪಕ್ಷದ ಮತದಾರರಿಗೆ ದಕ್ಕಿದೆ. ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ ಎಂಬುದು ಜನತೆಗೆ ಈಗ ತಿಳಿದಿದೆ. ನೆರೆ ರಾಜ್ಯಗಳಲ್ಲಿ ಈಗಾಗಲೇ ಪ್ರಾದೇಶಿಕ ಪಕ್ಷದ ಆಳ್ವಿಕೆ ಜನ ಮನ್ನಣೆ ಗಳಿಸಿದೆ. ಈ ಹಿಂದೆ ಎರಡು ಬಾರಿ ಪರಾವಲಂಬಿ ಮುಖ್ಯಮಂತ್ರಿಯಾಗಿ ಕೂಡ ಹಲವು ಜನಮನ ಗೆದ್ದ ಯೋಜನೆ ಇಂದಿಗೂ ಪ್ರಸ್ತುತ. ಈ ನಿಟ್ಟಿನಲ್ಲಿ ಮತ್ತೆ ಜೆಡಿಎಸ್ ಅಧಿಕಾರ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಪಂಚರತ್ನ ಯೋಜನೆ ಮೂಲಕ ಜನರಿಗೆ ಅವಶ್ಯ ಇರುವ ಆರೋಗ್ಯ ಮತ್ತು ಶಿಕ್ಷಣವನ್ನು ಉಚಿತವಾಗಿ ಜನರಿಗೆ ನೀಡುವ ಯೋಜನೆ ಪ್ರಣಾಳಿಕೆಯಾಗಿ ಜನರಿಗೆ ತಲುಪಲಿದೆ ಎಂದರು.

ಮಂತ್ರಿಸ್ಥಾನದ ಆಸೆಗೆ ಕೃಷ್ಣಪ್ಪ ಬಲಿ :

      ನೆಲಮಂಗಲದಿಂದ ಕರೆತಂದು ಇಲ್ಲಿ ಎಂಎಲ್ಸಿ ಮಾಡಿದ ತಪ್ಪಿಗೆ ಕಾಂತರಾಜುಗೆ ತುರುವೇಕೆರೆಯಲ್ಲಿ ಟಿಕೆಟ್ ನೀಡಬೇಕೆಂತೆ. ಈ ಹಿಂದೆ ಗುಬ್ಬಿ ಶಾಸಕರ ಜೊತೆ ಸೇರಿ ಕಾಂತರಾಜು ತಮ್ಮ ಸಂಬಂಧಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿ ಕೃಷ್ಣಪ್ಪ ಅವರನ್ನು ಸೋಲಿಸಿದ್ದರು. ಸಚಿವ ಸ್ಥಾನದ ಆಸೆಗೆ ತುರುವೇಕೆರೆ ಕ್ಷೇತ್ರ ಬಲಿಕೊಟ್ಟ ಇವರಿಗೆ ಪಕ್ಷ ನಿಷ್ಠೆ ಎಲ್ಲಿಂದ ಬರುತ್ತದೆ ಎಂದು ಕಿಡಿಕಾರಿದ ಅವರು, ಮಠದಹಳ್ಳ ಕೆರೆಗೆ ಹೇಮೆ ಹರಿಸುವ ಯೋಜನೆ ನನ್ನ ಕಾಲದಲ್ಲಿ 25 ಕೋಟಿ ರೂ.ಗೆ ಮಂಜೂರು ಆಗಿತ್ತು. ತಾಂತ್ರಿಕ ಸಮಸ್ಯೆ ನೆಪದಲ್ಲಿ ನಿಂತ ಈ ಕಾಮಗಾರಿ ಕುರಿತು ಸಚಿವರ ಜೊತೆ ಮಾತನಾಡಿ ಶೀಘ್ರದಲ್ಲೇ ಯೋಜನೆ ಕಾರ್ಯಗತಗೊಳಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪಟ್ಟಣದ ಪೊಲೀಸ್ ಠಾಣೆ ಹಿಂಬದಿಯ ಕಾಲನಿಗೆ ಭೇಟಿ ನೀಡಿ, ಆ ಜನರ ಕಷ್ಟ ಕಾರ್ಪಣ್ಯ ಆಲಿಸುವುದಾಗಿ ತಿಳಿಸಿದರು.

      ಸಮಾವೇಶದಲ್ಲಿ ಶಾಸಕರಾದ ಗೌರಿಶಂಕರ್, ವೀರಭದ್ರಯ್ಯ, ಎಂಎಲ್ಸಿ ತಿಪ್ಪೇಸ್ವಾಮಿ, ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಸುಧಾಕರಲಾಲ್, ಸಿ.ಬಿ.ಸುರೇಶ್‍ಬಾಬು, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಮುಖಂಡರಾದ ಕರಿಯಪ್ಪ, ಸಿದ್ಧಗಂಗಮ್ಮ, ಗಾಯತ್ರಿದೇವಿ, ರಾಮಾಂಜಿನಪ್ಪ, ಯಶೋಧಮ್ಮ ಇತರರು ಇದ್ದರು.

 ಡಿಕೆಶಿ ಬ್ರೈನ್‍ವಾಶ್ ಮಾಡಿದ್ದಾರೆ :

      ಎಸ್.ಆರ್.ಶ್ರೀನಿವಾಸ್ ಇತ್ತಿಚ್ಛಿಗೆ ನನ್ನ ಮೇಲೆ ಅಸಮಾಧಾನಗೊಳ್ಳಲು ಡಿಕೆಶಿ ಅವರೆ ನೇರ ಕಾರಣ. ಬ್ರೈನ್ ವಾಶ್ ಮಾಡಿರುವ ಶಿವಕುಮಾರ್ ಮಾತು ಕೇಳಿದ ಗುಬ್ಬಿ ಶಾಸಕರು ಜೆಡಿಎಸ್ ಜಿಲ್ಲೆಯಲ್ಲಿ ಕಳೆದುಹೋಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.

-ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

      ಪ್ರಾದೇಶಿಕ ಪಕ್ಷ ಜೆಡಿಎಸ್ ತತ್ವ ಸಿದ್ದಾಂತ ಒಪ್ಪಿ ಪಕ್ಷ ಸೇರಿದ್ದು, ಮುಂದಿನ 2023ಕ್ಕೆ ಕುಮಾರಣ್ಣನ ಪರ್ವ ಬಲಗೊಳ್ಳಲಿದೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರ ಆಯ್ಕೆಗೆ ಗುಬ್ಬಿ ಕ್ಷೇತ್ರದಲ್ಲಿ ಸಂಘಟನೆ ಮಾಡಲಾಗುವುದು.

-ಬಿ.ಎಸ್.ನಾಗರಾಜು, ಜೆಡಿಎಸ್ ಮುಖಂಡ

 

ಮಂತ್ರಿಯಾದಾಗ ಜಿಲ್ಲೆಗೆ ಏನೂ ಮಾಡಿಲ್ಲ :

      ಮಿಷನ್ 123 ಕಾರ್ಯಾಗಾರಕ್ಕೆ ಎರಡನೇ ದಿನ ಬಂದು, ನನ್ನನ್ನು ಮಾತು ಆಡಿಸದ ಶ್ರೀನಿವಾಸ್ ಅವರಿಗೆ ನಾನೇ ಖುದ್ದು ಏನು ಸಮಸ್ಯೆ ಎಂದು ವಿಚಾರಿಸಿದ್ದೆ. ಕುಳಿತು ಮಾತನಾಡಲು ತಾಲ್ಲೂಕು ಘಟಕಕ್ಕೂ ತಿಳಿಸಿದ್ದೆ. ಯಾರೂ ಬರದೇ ನನ್ನ ವಿರುದ್ದ ಹರಿಹಾಯ್ದ ಹಿನ್ನೆಲೆ ಬೇರೆ ತಿಳಿಸುತ್ತದೆ. ಕಾಂಗ್ರೆಸ್ ಸಖ್ಯದ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದ ಅವರು, ಜಿಲ್ಲೆಯ ಪ್ರಭಾವಿ ಎನಿಸಿಕೊಂಡು ಸಚಿವರಾದಾಗ ಕೂಡ ಯಾವುದೇ ರೈತ ಪರ ಕೆಲಸ ಮಾಡಲಿಲ್ಲ. ತೆಂಗು ಪರಿಹಾರಕ್ಕಾಗಿ ಕಾಳಜಿ ವಹಿಸಲಿಲ್ಲ. 10 ತಾಲ್ಲೂಕಿನ ಈ ದೊಡ್ಡ ಜಿಲ್ಲೆ ತೆಂಗಿನನಾಡು ಎನಿಸಿದೆ. ಇಲ್ಲಿ ರೈತರ ಬಗ್ಗೆ ಆಲೋಚನೆ ಮಾಡಲಿಲ್ಲ. ಜತೆಗೆ ಜನಪರ ಕಾರ್ಯಕ್ರಮ, ನೀರಾವರಿ ಯೋಜನೆಗೂ ಮುಂದಾಗಲಿಲ್ಲ. ಈಗ ಜೆಡಿಎಸ್ ತೆಗಳುವ ಮುನ್ನ ಪಕ್ಷದಿಂದ ಪಡೆದ ಅಧಿಕಾರ ತಿಳಿದುಕೊಳ್ಳಬೇಕು ಎಂದು ಛೇಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ