ಸುಳ್ಳುಗಳಿಗೆ ಆಯಸ್ಸು ಬಹಳ ಕಡಿಮೆ : ಬಿಜೆಪಿ ಮೇಲೆ ಹೆಚ್‌ ಡಿ ಕೆ ವಾಗ್ದಾಳಿ

ಬೆಂಗಳೂರು:

     ರಾಜಕೀಯ ಪಕ್ಷಗಳು ಕೆಲವೊಂದು ವಿಧಾನಸಭಾ ಕ್ಷೇತ್ರಗಳನ್ನು ತಮ್ಮ ಭದ್ರಕೋಟೆ ಎಂದು ಹೇಳುತ್ತವೆ ಯಾಕೆಂದರೆ ಅಲ್ಲಿ ಅವರ ಪಕ್ಷಕ್ಕೆ ಜಾತಿ, ಹಣ, ಅಭ್ಯರ್ಥಿಯ ವಯಕ್ತಿಕ ವರ್ಚಸ್ಸು ಇನ್ನೂ ಮುಂತಾದ ವಿಷಯಗಳು ಕೆಲಸ ಮಾಡುತ್ತವೆ ಅದರಂತೆ  ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ಮತ್ತು ಸಮಾವೇಶ ಮಾಡಿದ ಬಳಿಕ ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ವಿರುದ್ಧ ‘ಒಕ್ಕಲಿಗ’ ಅಸ್ತ್ರ ಪ್ರಯೋಗಿಸಿದ್ದಾರೆ.

    ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು ಅಭಿವೃದ್ಧಿಯ ಮೇಲೆ ಚುನಾವಣೆಯಲ್ಲಿ ಮತ ಕೇಳಬೇಕಿದ್ದ ಬಿಜೆಪಿ; ಮತ ಫಸಲಿಗೆ ಅಡ್ಡದಾರಿಗಳನ್ನು ಕಂಡುಕೊಂಡು ಸಮುದಾಯ, ಧರ್ಮಗಳ ಜತೆ ಚೆಲ್ಲಾಟ ಆಡುತ್ತಿದೆ. ಸ್ವಾಭಿಮಾನಿ ಒಕ್ಕಲಿಗರ ಆತ್ಮಾಭಿಮಾನವನ್ನು ಕೆಣಕಿ ಬಿಜೆಪಿ ಬಹುದೊಡ್ಡ ತಪ್ಪು ಮಾಡಿದೆ ಎಂದಿದ್ದಾರೆ.

    ಇತಿಹಾಸ ತಿರುಚಿ ಕಪೋಲಕಲ್ಪಿತ ಪಾತ್ರಗಳನ್ನು ಸೃಷ್ಟಿಸಿ, ಕೋಮುದ್ವೇಷದ ವಿಷಬೀಜ ಬಿತ್ತಿ, ಅದನ್ನು ಹೆಮ್ಮರವಾಗಿ ಬೆಳೆಯಲು ತನು-ಮನ-ಧನವನ್ನೆಲ್ಲ ಅರ್ಪಿಸುವ ಪಕ್ಷವೇ ಬಿಜೆಪಿ. ಈಗ ಒಕ್ಕಲಿಗರ ಹೆಗಲ ಮೇಲೆ ಕೋವಿ ಇಟ್ಟು ಹೊಸ ಸುಳ್ಳಿನಕಥೆ ಸೃಷ್ಟಿ ಮಾಡಿ ಅಸಲಿ ಇತಿಹಾಸವನ್ನು ಕೊಲ್ಲುವ ಹುನ್ನಾರ ನಡೆಸಿದೆ. ಟಿಪ್ಪುವನ್ನು ಕೊಂದವರೆಂದು ಚರಿತ್ರೆಯಲ್ಲಿ ಇಲ್ಲದ ಉರಿಗೌಡ, ನಂಜೇಗೌಡರೆಂಬ ಒಕ್ಕಲಿಗ ಕಾಲ್ಪನಿಕ ಹೆಸರುಗಳನ್ನು ಸೃಷ್ಟಿಸಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ನಡೆಸಿದ ಮಹಾದ್ವಾರಕ್ಕೆ ಇಟ್ಟಿದ್ದು ಮಂಡ್ಯಕ್ಕೆ, ಅದರಲ್ಲೂ ಸಮಸ್ತ ಒಕ್ಕಲಿಗರ ಕುಲಕ್ಕೆ ಮಾಡಿದ ಘೋರ ಅಪಮಾನ. ಮೇಲಾಗಿ, ಮಹಾದ್ವಾರಕ್ಕೆ ಮೊದಲೇ ಇದ್ದ ಪರಮಪೂಜ್ಯ ಗುರುಗಳಾದ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಗಳವರ ಹೆಸರನ್ನು ಮುಚ್ಚಿಟ್ಟು, ಅವರ ಜಾಗದಲ್ಲಿ ಈ ಕಾಲ್ಪನಿಕ ಪಾತ್ರಗಳ ಹೆಸರನ್ನು ಹಾಕಿದ ದುರುದ್ದೇಶವೇನು? ಇದು ಪರಮಪೂಜ್ಯರಿಗೆ ಮಾಡಿದ ಅಪಮಾನ ಎಂದಿದ್ದಾರೆ.

    ಸುಳ್ಳುಗಳಿಗೆ ಆಯಸ್ಸು ಬಹಳ ಕಡಿಮೆ ಎನ್ನುವುದನ್ನು ಇನ್ನಾದರೂ ಬಿಜೆಪಿಗರು ಅರ್ಥ ಮಾಡಿಕೊಳ್ಳಬೇಕು. ಸುಳ್ಳುಗಳ ಮಹಾ ಕಾರ್ಖಾನೆಯನ್ನೇ ತೆರೆದು ʼಸುಳ್ಳುಸೃಷ್ಟಿʼ ಮಾಡುತ್ತಿರುವ ಬಿಜೆಪಿಯ ವಕ್ರದೃಷ್ಟಿ ಈಗ ಸ್ವಾಭಿಮಾನದಿಂದ ಭೂಮಿತಾಯಿಯನ್ನು ನಂಬಿ ಬದುಕುತ್ತಿರುವ ಒಕ್ಕಲಿಗರ ಮೇಲೆ ಬಿದ್ದಿದೆ. ಇಡೀ ಒಕ್ಕಲಿಗ ಸಮುದಾಯವನ್ನು ಅಪಹಾಸ್ಯಕ್ಕೆ ಗುರಿ ಮಾಡುವ, ಇಡೀ ಸಮುದಾಯಕ್ಕೆ ಅಪಕೀರ್ತಿ ತರುವ ಹಾಗೂ ಟಿಪ್ಪುವನ್ನು ಕೊಂದ ಕಳಂಕವನ್ನು ಒಕ್ಕಲಿಗರಿಗೆ ಅಂಟಿಸುವ ಹೀನ ಕೆಲಸವನ್ನು ಬಿಜೆಪಿ ಮಾಡಲು ಹೊರಟಿದೆ. ಇದನ್ನು ಒಕ್ಕಲಿಗರು ಸಹಿಸರು. ಒಂದೆಡೆ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ ಒಕ್ಕಲಿಗರನ್ನು ಓಲೈಸುವ ಕೆಲಸ ಮಾಡುತ್ತಿರುವ ಬಿಜೆಪಿಗರು, ಇನ್ನೊಂದೆಡೆ ಕೊಲೆಯ ಕಳಂಕವನ್ನು ಮೆತ್ತಿ, ಅದೇ ಒಕ್ಕಲಿಗ ಸಮುದಾಯಕ್ಕೆ ಐತಿಹಾಸಿಕವಾಗಿ ಶಾಶ್ವತ ಕಪ್ಪುಚುಕ್ಕೆ ಮೆತ್ತಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

     ಮತಕ್ಕಾಗಿ ಮಾನಕ್ಕೂ ಅಂಜದ ಬಿಜೆಪಿ, ಸುಳ್ಳಿನ ಮೂಲಕ ಚುನಾವಣೆ ಗೆಲ್ಲಲು ಹೊರಟಂತಿದೆ. ರೋಡ್ ಶೋ ಮೂಲಕ ಮಂಡ್ಯದ ಜನರಿಗೆ ಮೋಡಿ ಮಾಡುವುದು ಎಂದರೆ ಇದೇನಾ? ಇಂಥ ವಿದ್ರೋಹಿ ಕೃತ್ಯಗಳನ್ನು ಒಕ್ಕಲಿಗರು ಮಾತ್ರವಲ್ಲ, ಸೌಹಾರ್ದತೆಯಿಂದ ರಾಜ್ಯದಲ್ಲಿ ಬಾಳುತ್ತಿರುವ ಯಾವ ಸಮುದಾಯವೂ ಸಹಿಸದು. ತಾಳ್ಮೆ, ಸ್ವಾಭಿಮಾನ, ಸ್ವಂತಿಕೆ, ಸೇವೆ, ಸೌಹಾರ್ದತೆ, ಸಮನ್ವಯ ತತ್ತ್ವದ ತಳಹದಿಯ ಮೇಲೆ ಬೆಳೆದಿದೆ ಒಕ್ಕಲಿಗ ಸಮುದಾಯ. ದ್ವೇಷ ಮತ್ತು ಹಸಿಸುಳ್ಳುಗಳನ್ನು ಅವರೆಂದು ಪೋಷಿಸಿ ಬೆಳೆಸಿದವರಲ್ಲ. ಒಂದಿಡಿ ಸಮುದಾಯವನ್ನು ಇಂಥ ನಿಕೃಷ್ಟ ರಾಜಕಾರಣಕ್ಕೆ ಇಳಿಸಿ, ಬಳಸಬಹುದು ಎಂಬ ಪಾಪಿ ಚಿಂತನೆಯೇ ಬಿಜೆಪಿಯ ಹೊಲಸು ರಾಜಕಾರಣದ ಪರಾಕಾಷ್ಠೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ