ತುಮಕೂರು:
ತುಮಕೂರು ಜಿಲ್ಲಾ ಕಸಾಪ ಕಾರ್ಯಚಟುವಟಿಕೆಗಳ ಚಾಲನೆ, ವಿಶ್ವಮಾನವ ಕುವೆಂಪು ದಿನಾಚರಣೆಯಲ್ಲಿ ಸಾಹಿತಿ ಡಾ.ದೊಡ್ಡರಂಗೇಗೌಡ ಅವರನ್ನು ಸನ್ಮಾನಿಸಲಾಯಿತು. ಕೇಂದ್ರ ಕಸಾಪ ಅಧ್ಯಕ್ಷ ಡಾ.ಮಹೇಶ್‍ಜೋಷಿ, ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಡಾ.ಕವಿತಾಕೃಷ್ಣ, ಬಾ.ಹ.ರಮಾಕುಮಾರಿ ಇತರ ಪದಾಧಿಕಾರಿಗಳಿದ್ದರು.
ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ರಚಿಸದ ಸಾಹಿತ್ಯ ಪ್ರಾಕಾರವಿಲ್ಲ. ಗೊಬ್ಬರದ ಮೇಲೂ ಕವನ ಬರೆದ ಏಕೈಕ ಕವಿ ಕುವೆಂಪು ಎಂದು ಕವಿ, ಚಿತ್ರ ಸಾಹಿತಿ ಹಾಗೂ ನಿಯೋಜಿತ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ ಬಣ್ಣಿಸಿದರು.
ನಗರದ ಅಮಾನಿಕೆರೆ ರಸ್ತೆಯ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಉದ್ಘಾಟನೆ, ಕುವೆಂಪು ಜಯಂತಿ, ಅಭಿನಂದನಾ ಸಮಾರಂಭ ಹಾಗೂ ಪ್ರೇರಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನಕ್ಕೆ ಮತ್ತೊಂದು ಹೆಸರೇ ಕುವೆಂಪು. ಅವರು ತಮ್ಮ ಜ್ಞಾನದಿಂದ ವಸ್ತು-ವಿಷಯದ ನಿಜವಾದ ಸಾರಸಂಗ್ರಹವನ್ನು ಸಮರ್ಥವಾಗಿ ಬಣ್ಣಿಸುವ ಶಕ್ತಿ ಹೊಂದಿದ್ದರು.
ಆದ್ದರಿಂದಲೇ ಅವರೊಬ್ಬ ವಾಗ್ದೇವಿಯ ಶಬ್ದ ಭಂಡಾರವನ್ನು ಸೂರೆಗೈದ ಕನ್ನಡದ ಏಕೈಕ ಮೇರು ಕವಿ ಎಂದರಲ್ಲದೆ, ಕನ್ನಡದ ಮತ್ತೋರ್ವ ಸಾಹಿತ್ಯ ಶ್ರೇಷ್ಠ ವರಕವಿ ದ.ರಾ.ಬೇಂದ್ರೆಯವರು ಕುವೆಂಪು ಅವರನ್ನು ಯುಗದ ಕವಿ, ಜಗದ ಕವಿ ಎಂದು ಬಣ್ಣಿಸಿದ್ದಾರೆಂಬುದನ್ನು ಸ್ಮರಿಸಿದರು.
ಕನ್ನಡ ಸಾಹಿತ್ಯದ ಕವಿ ರತ್ನ ಕುವೆಂಪು. ಅವರು ಹಸಿರೇ ಉಸಿರೆಂದು ನಂಬಿದ್ದವರು. ಶ್ರೇಷ್ಠ ಕಥೆಗಾರರಾಗಿದ್ದರು. ಶ್ರೇಷ್ಠ ಕಥೆಗಾರರಾಗಿದ್ದರು. ಅವರ ಓನನ್ನ ಚೇತನ ಆಗು ನೀ ಅನಿಕೇತನ ಆಧ್ಯಾತ್ಮದ ಉತ್ತಂಗದ ಕವಿತೆ ಎಂದು ಹೇಳಿ ತುಮಕೂರಿಗೆ ಬರುವುದೆಂದರೆ ನನಗೆ ತವರು ಮನೆಗೆ ಬಂದಷ್ಟೇ ಸಂತಸ ಎಂದರು.
ಅರಸರ ಕೊಡುಗೆ ಸ್ಮರಣೆ:
ಸಾಹಿತಿ ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ಕನ್ನಡ ನಾಡು ನುಡಿಗಾಗಿ ಶ್ರಮಿಸಿದವರ ಬಗ್ಗೆ ಅಭಿನಂದನಾ ನುಡಿಗಳನ್ನಾಡುತ್ತಾ, ಇತಿಹಾಸಗಳಲ್ಲಿ ಓದಿರುವಂತೆ ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯರ ಅವಧಿಯಲ್ಲಿ ಕನ್ನಡ ಸಾಹಿತ್ಯದ ಕಂಪು ದೇಶಾದ್ಯಂತ ಪಸರಿಸಿತ್ತು.
ಅನಂತರ ಮೈಸೂರಿನ ಕೃಷ್ಣರಾಜ ಒಡೆಯರ್ ಅವರ ಕಾಲಘಟ್ಟದಲ್ಲಿ ರಾಜ್ಯ ಸಾಹಿತ್ಯ, ಸಾಂಸ್ಕøತಿಕ ಕೇಂದ್ರವಾಗಿ ಜಪರಹೊಮ್ಮಿತು. ಕಸಾಪ ಸಹ ಒಡೆಯರ್ ಅವರ ಕೊಡುಗೆ. ಡಾ. ಮಹೇಶ್ ಜೋಷಿ ಹಾಗೂ ಪದ್ಮಶ್ರೀ ಪುರಸ್ಕøತ ಡಾ.ದೊಡ್ಡರಂಗೇಗೌಡ ಅವರ ಸಾಧನೆಯನ್ನು ಪ್ರಶಂಸಿಸಿದರು.
ಯುವ ಸಾಹಿತಿಗಳನ್ನು ಗಟ್ಟಿಗೊಳಿಸಿ:
ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಮಾತನಾಡಿ, ಕನ್ನಡ ನಾಡು ರಂಗಭೂಮಿಯ ಜೊತೆಗೆ ಸಾಹಿತ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ.
ಜಿಲ್ಲೆಗೆ ಕೀರ್ತಿ ತರುವಂತಹ ನವ ಲೇಖಕರು, ಸಾಹಿತಿಗಳು ಹುಟ್ಟಿಕೊಳ್ಳುತ್ತಿದ್ದು, ಅಂತಹವರನ್ನು ಗಟ್ಟಿಗೊಳಿಸುವ ಕಾರ್ಯವನ್ನು ಪರಿಷತ್ತು ಮಾಡಬೇಕಾಗಿದೆ.ಇತಿಹಾಸದಲ್ಲಿ ಮುಚ್ಚಿಹೋಗಿರುವಂತಹ ಸಾಹಿತ್ಯದ ಎಷ್ಟೋ ವಿಷಯಗಳನ್ನು ಮುನ್ನೆಲೆಗೆ ತರುವಂತಹ ಕೆಲಸವಾಗಬೇಕು ಎಂದರು.
ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ ಅವರು ಕಸಾಪ ಬೆಳೆದು ಬಂದ ಹಾದಿ ಬಗ್ಗೆ ವಿವರಿಸಿದರು. ನಿವೃತ್ತ ಪ್ರಾಚಾರ್ಯ ಮರಿಬಸಪ್ಪ ಸ್ವಾಗತಿಸಿದರು. ಕಂಟಲಗೆರೆ ಸಣ್ಣಹೊನ್ನಯ್ಯ ನಿರೂಪಿಸಿದರು. ಎಂ.ಎಚ್.ನಾಗರಾಜು, ಎಂ.ಸಿ.ಲಲಿತಾ ಸೇರಿ ಜಿಲ್ಲಾ ಹಾಗೂ ತಾಲೂಕು ಕಸಾಪದ ಹಲವು ಪದಾಧಿಕಾರಿಗಳು ಹಾಜರಿದ್ದರು.
ಸಾಹಿತ್ಯ ಕಾರ್ಯಕ್ರಮಗಳಲ್ಲಿ ಹಾರ, ಶಾಲುಗಳಿಗೆ ಬದಲಾಗಿ ಕನ್ನಡ ಪುಸ್ತಕಗಳನ್ನು ನೀಡುವ ಪ್ರವೃತ್ತಿ ಬೆಳೆಯಬೇಕು. ಕುವೆಂಪು ಅವರಂತೆಯೇ ಸಾಹಿತ್ಯವನ್ನು ಬೆಳೆಸುವ ಕಾರ್ಯಗಳಾಗಬೇಕು.
ರಾಜ್ಯ ಹಾಗೂ ಜಿಲ್ಲಾ ಕಸಾಪಗೆ ಕ್ರಿಯಾಶೀಲ ಅಧ್ಯಕ್ಷರು ಆಯ್ಕೆಯಾಗಿದ್ದು, ಸಾಹಿತ್ಯ ಪರಿಷತ್‍ಅನ್ನು ಜನಪರವಾಗಿಸುವ ಉದ್ದೇಶ ಹೊಂದಿರುವುದು ಸ್ವಾಗತಾರ್ಹ.
-ಡಾ.ದೊಡ್ಡರಂಗೇಗೌಡ, ನಿಯೋಜಿತ ಸಮ್ಮೇಳನಾಧ್ಯಕ್ಷರು.
ಕರ್ನಾಟಕ ಭಾವನಾತ್ಮಕವಾಗಿ ಏಕೀಕರಣವಾಗಿಲ್ಲ: ಜೋಷಿ
ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಪ್ರೇರಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಜೀವನದಲ್ಲಿ ಗುರಿ ತಲುಪಲು ಗುರು ಇರಬೇಕು. ಕುವೆಂಪು ಅವರಿಗೆ ಸ್ವಾಮಿ ರಾಮಕೃಷ್ಣ ಪರಮಹಂಸರು.
ಅರವಿಂದರು ಗುರುಗಳಾಗಿದ್ದರು. ಪ್ರಕೃತಿ ಮತ್ತು ಆಧ್ಯಾತ್ಮ ಕುವೆಂಪು ಅವರ ಸಾಹಿತ್ಯದ ಎರಡು ಕಣ್ಣುಗಳಾಗಿದ್ದವು ಎಂದು ತಿಳಿಸಿದರಲ್ಲದೆ, ಕಸಾಪ ಚುನಾವಣೆ ರಾಜಕೀಯ ಚುನಾವಣೆಯಂತಲ್ಲ.
ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಪ್ರಾದೇಶಿಕತೆ ವಿಷಯವನ್ನು ಮುನ್ನೆಲೆಗೆ ತರಲಾಯಿತು. ಇದನ್ನು ನೋಡಿದರೆ ಕರ್ನಾಟಕ ಭಾವನಾತ್ಮಕವಾಗಿ ಏಕೀಕರಣವಾಗಿಲ್ಲ ಎಂಬುದು ಗೋಚರಿಸುತ್ತದೆ ಎಂದರು.
ಕನ್ನಡ ನಾಡು ನುಡಿ ಏಳಿಗೆಗೆ ಶ್ರಮಿಸೋಣ
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಕುವೆಂಪು ಅವರ ಸಮಾಜಮುಖಿ ಚಿಂತನೆಯನ್ನು ನಾವೆಲ್ಲರು ಜೀವನದ ಭಾಗವಾಗಿಸಿಕೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ಸ್ಥಾಪಿತವಾಗುವ ಸಾಹಿತ್ಯ ಪರಿಷತ್ತಿನ ಘಟಕಗಳು ಜಡತ್ವವನ್ನು ಬಿಟ್ಟು ಸದಾ ಚೈತನ್ಯಶೀಲವಾಗಿರಬೇಕು.
ಕಟ್ಟಡ ಇಲ್ಲದಿರುವುದನ್ನೇ ಕೊರತೆಯೆಂದುÉ್ನೀ ಭಾವಿಸದೆಕನ್ನಡ ಭಾಷೆ, ನಾಡು-ನುಡಿಯ ಏಳ್ಗೆಗಾಗಿ ಮಾಡಬಹುದಾದಂತಹ ಕಾರ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
