ಅಹಮದಾಬಾದ್:
ಸೀರೆ ರವಿಕೆ, ಚೂಡಿದಾರ್ ಹೊಲಿಯಲು ಕೊಟ್ಟರೆ, ದರ್ಜಿ (ಟೈಲರ್) ಗಳು ಸಮಯಕ್ಕೆ ಸರಿಯಾಗಿ ಹಿಂತಿರುಗಿಸುವುದಿಲ್ಲ ಅನ್ನೋದು ಹಲವರ ಆರೋಪ. ಇದೀಗ ಮಹಿಳೆಯೊಬ್ಬರು ಇಂಥದ್ದೇ ಸಮಸ್ಯೆ ಎದುರಿಸಿದ್ದಾರೆ. ಕುಟುಂಬದ ಮದುವೆಗೆ ತಯಾರಿ ನಡೆಸುತ್ತಿದ್ದ ಮಹಿಳೆಯೊಬ್ಬರಿಗೆ ದರ್ಜಿ ಸಮಯಕ್ಕೆ ಸರಿಯಾಗಿ ತನ್ನ ರವಿಕೆಯನ್ನು ತಲುಪಿಸಲಿಲ್ಲ. ಇದಕ್ಕೆ ಮಹಿಳೆ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಸುದ್ದಿ ಇದೀಗ ವೈರಲ್ ಆಗಿದೆ.
ಸಮಯಕ್ಕೆ ಸರಿಯಾಗಿ ಸೀರೆ ರವಿಕೆ ಸಿಗದ ಕಾರಣ ತೀವ್ರ ನಿರಾಶೆ ಎದುರಿಸಿದ ಅವರು ಸಿಂಪಲ್ ಸೀರೆ ಉಡಬೇಕಾಗಿ ಬಂದಿತ್ತು. ಗುಜರಾತ್‍ನ ಅಹಮದಾಬಾದ್‍ನಲ್ಲಿ ಡಿಸೆಂಬರ್ 24, 2024 ರಂದು ನಡೆದಿದ್ದ ಘಟನೆ ಇದಾಗಿದೆ. ಮದುವೆಗೆಂದು ತಯಾರಿ ನಡೆಸಿದ್ದ ಅವರಿಗೆ ದರ್ಜಿಯು ರವಿಕೆ ಹೊಲಿದು ಕೊಟ್ಟಿರಲಿಲ್ಲ. ಹೀಗಾಗಿ ದರ್ಜಿಗೆ ಕೋರ್ಟ್ ದಂಡ ವಿಧಿಸಿದೆ.
ಮಹಿಳೆಯು ಮದುವೆ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಸೀರೆಯನ್ನು ಉಡಬೇಕಾಗಿತ್ತು. ಅದಕ್ಕಾಗಿ ಅವರು ರವಿಕೆ ಹೊಲಿಯಲು ದರ್ಜಿಯೊಬ್ಬರಿಗೆ ಬಟ್ಟೆಯನ್ನು ನೀಡಿದ್ದರು. ಆ ಮಹಿಳೆ 4,395 ರೂ. ಮುಂಗಡ ಹಣವನ್ನು ಪಾವತಿಸಿ ತನ್ನ ಎಲ್ಲಾ ಶಾಪಿಂಗ್ ಅನ್ನು ಸಾಕಷ್ಟು ಮುಂಚಿತವಾಗಿಯೇ ಮುಗಿಸಿದ್ದಳು. ಆದರೆ, ಮದುವೆಗೆ ಹತ್ತು ದಿನಗಳ ಮೊದಲು, ರವಿಕೆಯನ್ನು ಸಂಪೂರ್ಣವಾಗಿ ಹೊಲಿಯಲಾಗಿಲ್ಲ ಎಂದು ಅವಳಿಗೆ ತಿಳಿದುಬಂತು.
ಮದುವೆಗೆ ಮೊದಲು ಅದನ್ನು ಪೂರ್ಣಗೊಳಿಸುವುದಾಗಿ ಟೈಲರ್ ಭರವಸೆ ನೀಡಿದ್ದರೂ, ಅದು ಅಪೂರ್ಣವಾಗಿಯೇ ಇತ್ತು. ಪರಿಣಾಮವಾಗಿ, ಅವಳು ಬೇರೆ ಸೀರೆಯನ್ನು ಉಡಬೇಕಾಯಿತು. ಇದು ಆಕೆಗೆ ಬಹಳ ಬೇಸರ ತರಿಸಿದೆ. ವಿವಾಹ ಕಾರ್ಯಕ್ರಮದ ನಂತರ, ಆಕೆ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಅಹಮದಾಬಾದ್ (ಹೆಚ್ಚುವರಿ) ಗ್ರಾಹಕ ಪರಿಹಾರ ಆಯೋಗವು, ಟೈಲರ್ ತನಗೆ ಸಮಯಕ್ಕೆ ಸರಿಯಾಗಿ ಬ್ಲೌಸ್ ತಲುಪಿಸುವಲ್ಲಿ ವಿಫಲರಾಗಿರುವುದನ್ನು ಮತ್ತು ಅದು ಉಂಟುಮಾಡಿದ ಮಾನಸಿಕ ಯಾತನೆಯ ಬಗ್ಗೆ ತಿಳಿಸಿದ್ದಾಳೆ.
ಆರೋಪಗಳನ್ನು ಪರಿಶೀಲಿಸಿದ ನ್ಯಾಯಾಲಯವು ದರ್ಜಿಗೆ ಮುಂಗಡವಾಗಿ ಪಡೆದ 4,395 ರೂ.ಗಳನ್ನು ವಾರ್ಷಿಕ ಶೇ. 7 ರಷ್ಟು ಬಡ್ಡಿಯೊಂದಿಗೆ ಹಿಂದಿರುಗಿಸಲು ಆದೇಶಿಸಿತು. ಜೊತೆಗೆ ಮಾನಸಿಕ ಒತ್ತಡ ಮತ್ತು ಮೊಕದ್ದಮೆ ವೆಚ್ಚಗಳಿಗೆ ಪರಿಹಾರವನ್ನು ನೀಡಿತು. ಟೈಲರ್‌ಗೆ ಒಟ್ಟು 7,000 ರೂ.ಗಳ ದಂಡವನ್ನು ವಿಧಿಸಲಾಯಿತು. ದರ್ಜಿ ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ. ಸಮಯಕ್ಕೆ ಸರಿಯಾಗಿ ರವಿಕೆ ಸಿಗದ ಬೇಸರದಲ್ಲಿದ್ದ ಮಹಿಳೆಗೆ ತೀರ್ಪು ತನ್ನ ಪರ ಬಂದಿರುವುದು ಮನಸ್ಸಿಗೆ ನೆಮ್ಮದಿ ತಂದಿದೆ.








