ನಿರಂತರ ಮಳೆಯಿಂದ 300 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದ ಬೆಳ್ಳುಳಿ ನಾಶ

ದಾವಣಗೆರೆ

    ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ  ದಾವಣಗೆರೆ  ಜಿಲ್ಲೆಯ ಹರಿಹರ ತಾಲ್ಲೂಕಿನ ಎರೇ ಹೊಸಹಳ್ಳಿಯಲ್ಲಿ ಸುಮಾರು 300 ಎಕರೆ ಪ್ರದೇಶದಲ್ಲಿ ಬೆಳೆದ ಬೆಳ್ಳುಳ್ಳಿ  ನಾಶವಾಗಿದೆ. ಈ ಗ್ರಾಮದ ಪ್ರಮುಖ ವಾಣಿಜ್ಯ ಬೆಳೆ ಬೆಳ್ಳುಳ್ಳಿ. ಕಳೆದ ಹಲವು ವರ್ಷಗಳಿಂದ ಇಲ್ಲಿನ ರೈತರು ಇದನ್ನೇ ಪ್ರಮುಖ ಬೆಳೆಯನ್ನಾಗಿ ಬೆಳೆದು ಜೀವನ ನಡೆಸುತ್ತಿದ್ದಾರೆ. ಪ್ರತಿ ಬೆಳೆಗೆ ಲಕ್ಷಾಂತರ ರೂಪಾಯಿ ಪಡೆಯಬಹುದು ಎನ್ನುವ ನಿರೀಕ್ಷೆ ಯನ್ನು ಇಟ್ಟುಕೊಂಡು ಕೃಷಿ ಮಾಡುತ್ತಿದ್ದಾರೆ. ಆದರೆ ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ತುಂತುರು ಮಳೆಯಾಗಿತ್ತಿದ್ದು, ಇದರಿಂದ ಬೆಳ್ಳುಳ್ಳಿ ಬೆಳೆ ಜಮೀನಿನಲ್ಲಿಯೇ ಕೊಳೆತು ಹೋಗುತ್ತಿದೆ.

   ಈಗಾಗಲೇ ಬೆಳ್ಳುಳ್ಳಿಯನ್ನು ಕಿತ್ತು ಒಣಗಿಸಿ ಮಾರುಕಟ್ಟೆಗೆ ಕಳುಹಿಸಬೇಕಿತ್ತು. ಆದರೆ ಮಳೆ ನಿರಂತರವಾಗಿ ಸುರಿಯುತ್ತಿರುವ ಪರಿಣಾಮ ಕೈಗೆ‌ಬಂದಿರುವ ಬೆಳ್ಳುಳ್ಳಿ ಬೆಳೆ ಬಾಯಿಗೆ ಬಾರದಂತಾಗಿದೆ. ಬೆಳ್ಳುಳ್ಳಿ ಬೆಳೆಗೆ ಎಕರೆಗೆ 30 ರಿಂದ 40 ಸಾವಿರ ಖರ್ಚು ಮಾಡಿದ್ದು, ಖರ್ಚು ಮಾಡಿದ್ದ ಹಣದಲ್ಲಿ ಶೇ 10 ಆದರೂ ಸಿಗಲಿ ಎಂದು ರೈತರು ಇರುವ ಬೆಳೆಯನ್ನು ಕಿತ್ತು ಒಣಗಿಸಲು ಮುಂದಾಗಿದ್ದಾರೆ. 

   ಬೆಳ್ಳುಳ್ಳಿ ಬೆಳೆಗೆ ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇದ್ದು, ಈ ಬಾರಿ ಬೆಳೆ ಕೂಡ ಉತ್ತಮವಾಗಿ ಬಂದಿತ್ತು. ಆದರೆ ನಿರಂತರವಾಗಿ ಮಳೆ ಇರುವ ಹಿನ್ನಲೆ ಬೆಳೆ ಕೊಳೆಯುತ್ತಿದೆ. ಇದರಿಂದ ಕೆಲ ರೈತರು ಜಮೀನುಗಳಲ್ಲಿ ಬೆಳ್ಳುಳ್ಳಿ ಬೆಳೆಯನ್ನು ಹಾಗೆಯೇ ಬಿಟ್ಟಿದ್ದಾರೆ. ಮಳೆ ಆರ್ಭಟಕ್ಕೆ ಸಿಲುಕಿರುವ ಬೆಳ್ಳುಳ್ಳಿ‌ ಬೆಳೆ ಅನ್ನದಾತರನ್ನು ಸಾಲದ ಸುಳಿಯಿಂದ ಪಾರುವ ಮಾಡುವ ಬದಲು ಮತ್ತಷ್ಟು ಸಮಸ್ಯೆಗೆ ಒಳಗಾಗಿಸಲಿದೆ. ಹೀಗಾಗಿ ಸರ್ಕಾರ ಬೆಳೆಹಾನಿ ಸಮೀಕ್ಷೆ ನಡೆಸಿ, ಕನಿಷ್ಠ ಬೆಲೆಯನ್ನು ನೀಡಿ ಪರಿಹಾರ ಒದಗಿಸುವ ಮೂಲಕ ರೈತರು ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ. 

   ಒಟ್ಟಾರೆಯಾಗಿ, ಮಳೆಯಿಂದ ಹೊಸಹಳ್ಳಿ ರೈತರು 300 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದ ಬೆಳ್ಳುಳ್ಳಿ ಬೆಳೆ ನಾಶವಾಗಿದ್ದು, ಸಾಲ ಮಾಡಿ ಬೆಳೆ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಬೇಕಿದೆ.

Recent Articles

spot_img

Related Stories

Share via
Copy link