ಹೊನ್ನಾವರ:
ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ 90ನೇ ವರ್ಷದ ಸಂಭ್ರಮ ಹಾಗೂ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-15 ಕಾರ್ಯಕ್ರಮವು ಫೆ. 22ರಿಂದ ಮಾ. 2 ರವರೆಗೆ ಹೊನ್ನಾವರದ (Honnavar News) ಗುಣವಂತೆಯ ಯಕ್ಷಾಂಗಣದಲ್ಲಿ ನಡೆಯಲಿದೆ. ಫೆ. 22 ರಂದು ಶನಿವಾರ ಸಂಜೆ 4.30 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು.
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್. ವೈದ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ಪ್ರದರ್ಶನಾಂಗಣವನ್ನು ಬೆಂಗಳೂರು ಉತ್ತರ ವಿವಿ ಕುಲಪತಿ ಡಾ. ನಿರಂಜನ ವಾನಳ್ಳಿ ಉದ್ಘಾಟಿಸಲಿದ್ದಾರೆ. ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ-2023 ಅನ್ನು ಕರ್ನಾಟಕ ಜಾನಪದ ಪರಿಷತ್ತಿಗೆ ಪ್ರದಾನ ಮಾಡಲಾಗುವುದು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ, ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಬಳಿಕ ಸಂಜೆ 6.30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ. 23 ರಂದು ಬೆಳಿಗ್ಗೆ 10 ಗಂಟೆಗೆ ಹೊಸ್ತೋಟ ಮಂಜುನಾಥ ಭಾಗವತರ ʼಯಕ್ಷಹಂಸʼ ದ ಕುರಿತು ಒಂದು ಮರು ಓದು ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಲಿದೆ. ಸಾಗರದ ಶಿಕ್ಷಣ ಸಂಯೋಜಕ ಡಾ. ಶಂಕರ ಶಾಸ್ತ್ರಿ ಅಧ್ಯಕ್ಷತೆ ವಹಿಸುವರು. ಸಂಜೆ 4.30 ಗಂಟೆಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಯನ್ನು ಯಕ್ಷಗಾನ ಭಾಗವತ ವಿದ್ವಾನ್ ಗಣಪತಿ ಭಟ್ಟ ಅವರಿಗೆ ಪ್ರದಾನ ಮಾಡಲಾಗುವುದು. ಉದ್ಯಮಿ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡೀನ್ ಪ್ರೊ. ಎಂ.ಎನ್. ವೆಂಕಟೇಶ್, ಕಿಶೋರ ಕುಮಾರ, ಡಾ. ಮಿಲಿಂದ ಕುಲಕರ್ಣಿ ಪಾಲ್ಗೊಳ್ಳುವರು.
ಕಲಾಪೋಷಕ ಪ್ರಶಸ್ತಿಯನ್ನು ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ, ಮಂಗಳೂರಿನ ಎಸ್. ಪ್ರದೀಪಕುಮಾರ ಕಲ್ಕೂರ್ ಅವರಿಗೆ ಪ್ರದಾನ ಮಾಡಲಾಗುವುದು. ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ ನಡೆಯಲಿದ್ದು, ಲೇಖಕಿ ಭುವನೇಶ್ವರಿ ಹೆಗಡೆ ಅವರನ್ನು ಸನ್ಮಾನಿಸಲಾಗುವುದು. ಅನಂತರ ಸಂಜೆ 6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕಥಕ್ ನೃತ್ಯ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಫೆ. 24ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಗಮಕವಾಚನ ಕಾರ್ಯಕ್ರಮ ನಡೆಯಲಿದೆ. ಸಂಜೆ 4.30 ಗಂಟೆಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ ನಡೆಯಲಿದ್ದು, ಹಿರಿಯ ಸಾಹಿತಿಗಳಾದ ಶಾಂತಾರಾಮ ನಾಯಕ ಹಿಚಕಡ, ಮೋಹನಕುಮಾರ ಹಬ್ಬು, ಲಕ್ಷ್ಮೀ ನಾರಾಯಣ ಶಾಸ್ತ್ರಿ ಹಾಗೂ ಯಕ್ಷಗಾನ ಭಾಗವತರಾದ ಗೋಪಾಲಕೃಷ್ಣ ಭಟ್ಟ ಜೋಗಿಮನೆ ಅವರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ಶಿವರಾಮ ಗಾಂವ್ಕರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕಲಾಪೋಷಕ ಜಿ.ಜಿ. ಶಂಕರ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸತೀಶ ತಾಂಡೇಲ್, ಕೆಳಗಿನೂರು ಗ್ರಾಪಂ ಅಧ್ಯಕ್ಷೆ ಚಿತ್ರಾಕ್ಷಿ ಗೌಡ, ಶಂಭು ಹೆಗಡೆ ಪಾಲ್ಗೊಳ್ಳುವರು. ಅನಂತರ ಸಂಜೆ 6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಯಲಿನ ಜುಗಲ್‌ಬಂದಿ ಹಾಗೂ ʼಕಣಿವೆಯ ಹಾಡುʼ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
ಫೆ. 25ರಂದು ಸಂಜೆ 4.30 ಗಂಟೆಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ ನಡೆಯಲಿದ್ದು, ತಾಳಮದ್ದಲೆ ಅರ್ಥಧಾರಿ ಜಬ್ಬಾರ ಸಮೋ, ಯಕ್ಷಗಾನ ಭಾಗವತರಾದ ಡಾ. ಸುರೇಂದ್ರ ಫಣಿಯೂರು, ರಾಮಕೃಷ್ಣ ಮಯ್ಯ ಅವರನ್ನು ಸನ್ಮಾನಿಸಲಾಗುವುದು. ಉ.ಕ ಜಿಲ್ಲಾ ಸಹಕಾರಿ ಯೂನಿಯನ್ ಬ್ಯಾಂಕ್ ಅಧ್ಯಕ್ಷ ವಿ.ಎನ್. ಭಟ್ ಅಳ್ಳಂಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಶಿರಸಿಯ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ, ಸಾಹಿತಿ ಜಿ.ಎನ್. ಮೋಹನ, ಮಂಕಿಯ ಗೋಲ್ ಇಂಟರನ್ಯಾಷನಲ್ ಸ್ಕೂಲ್ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಹೊನ್ನಾವರ ತಾಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಎಚ್. ಗೌಡ ಪಾಲ್ಗೊಳ್ಳುವರು. ಅನಂತರ ಸಂಜೆ 6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಫೆ. 26ರಂದು ಸಂಜೆ 4.30 ಗಂಟೆಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ ನಡೆಯಲಿದ್ದು, ಕಲಾವಿದ ಡಾ.ಎಂ. ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸುವರು. ಹಿರಿಯ ಮುಖಂಡ ಗಣಪಯ್ಯ ಗೌಡ, ಹೊನ್ನಾವರದ ನಾಗರಿಕ ಪತ್ರಿಕೆ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ, ಹಡಿನಬಾಳ ಹಳ್ಳೇರ ಸಮಾಜ ಕ್ಷೇಮಾಭಿವೃದ್ಧಿ ಹಾಗೂ ಸಾಂಸ್ಕೃತಿಕ ವೇದಿಕೆಯ ಡಾ.ಬಿ.ಆರ್. ಅಂಬೇಡ್ಕರ್, ಯಕ್ಷಗಾನ ಕಲಾವಿದ ರಾಮಗೌಡ ಅವರನ್ನು ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ಪದ್ಮನಾಭ ಶಾನಭಾಗ, ಡಿ.ಬಿ. ಹರಿಕಾಂತ, ನಾಗರಾಜ ಭಟ್ಟ ಪಾಲ್ಗೊಳ್ಳುವರು. ಅನಂತರ ಸಂಜೆ 6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಫೆ. 27 ರಂದು ಸಂಜೆ 4.30 ಗಂಟೆಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ ನಡೆಯಲಿದ್ದು, ಬರಹಗಾರ, ಅಂಕಣಕಾರ ಬಿ. ಗಣಪತಿ ಅಧ್ಯಕ್ಷತೆ ವಹಿಸುವರು. ಯಕ್ಷಗಾನ ಕಲಾವಿದರಾದ ಗಜಾನನ ಹೆಗಡೆ ಮೂರೂರು, ಕೆ.ಬಿ.ಮಂಜುನಾಥ, ನಾಟಕ ನಿರ್ದೇಶಕ ಮೂರ್ತಿ ದೇರಾಜೆ, ಕಲಾ ಸಂಘಟಕ ಬೇಗಾರು ರಮೇಶ ಅವರನ್ನು ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ಕಸಾಪ ಕೇರಳ ಗಡಿನಾಡು ಘಟಕ ಕಾಸರಗೋಡು ಅಧ್ಯಕ್ಷ ಜಯಪ್ರಕಾಶ ನಾರಾಯಣ ತೊಟ್ಟಿತ್ತೋಡಿ, ಉದಯವಾಣಿ ವಿಶೇಷ ಪ್ರತಿನಿಧಿ ರಾಘವೇಂದ್ರ ಭಟ್ಟ, ಶಿವಾನಂದ ನಾಯ್ಕ ಪಾಲ್ಗೊಳ್ಳುವರು. ಅನಂತರ ಸಂಜೆ 6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಫೆ. 28 ರಂದು ಸಂಜೆ 4.30 ಗಂಟೆಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ ನಡೆಯಲಿದ್ದು, ಹೊನ್ನಾವರ-ಕುಮಟಾ ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಕಥಕ್ ಮತ್ತು ಅಧುನಿಕ ನೃತ್ಯ ಕಲಾವಿದೆ ಮಧು ನಟರಾಜ, ಭರತನಾಟ್ಯ ಕಲಾವಿದೆ ವಿದ್ವಾನ್ ಪ್ರಸನ್ನ ಕಸ್ತೂರಿ, ರಂಗ ನಿರ್ದೇಶಕ ಕಿರಣ ಭಟ್ಟ ಅವರನ್ನು ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ಇತಿಹಾಸ ತಜ್ಞ ಡಾ. ಲಕ್ಷ್ಮೀಶ ಹೆಗಡೆ, ಎಸ್.ಜಿ. ಭಟ್ಟ, ಶಂಭು ಎಸ್ ಹೆಗಡೆ, ಶಿವಾನಂದ ಗೌಡ ಪಾಲ್ಗೊಳ್ಳುವರು. ಅನಂತರ ಸಂಜೆ 6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಾ.1 ರಂದು ಸಂಜೆ 4.30 ಗಂಟೆಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ ನಡೆಯಲಿದ್ದು, ಹಿರಿಯ ಸಾಹಿತಿ ಜಿ.ಎಸ್. ಭಟ್ಟ ಅಧ್ಯಕ್ಷತೆ ವಹಿಸುವರು. ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ, ಯಕ್ಷಗಾನ ಸಂಘಟಕ ಹೇರಂಭ ಭಟ್ಟ ಅಗ್ಗೆರೆ, ಯಕ್ಷಗಾನ ಕಲಾವಿದ ಕೃಷ್ಣಮೂರ್ತಿ ಗರ್ತಿಕೆರೆ ಅವರನ್ನು ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್, ಪತ್ರಕರ್ತ ಅಶೋಕ ಹಾಸ್ಯಗಾರ, ಡಾ.ಪುಷ್ಪಲತಾ ವೈದ್ಯ ಪಾಲ್ಗೊಳ್ಳುವರು. ಅನಂತರ ಸಂಜೆ 6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಾ.2 ರಂದು ಸಂಜೆ 4.30 ಗಂಟೆಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ ನಡೆಯಲಿದ್ದು, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಆಧ್ಯಕ್ಷತೆ ವಹಿಸುವರು. ಶ್ರೀಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಧರ್ಮಕರ್ತ ಭೀಮೆಶ್ವರ ಜೋಶಿ ದಿವ್ಯ ಉಪಸ್ಥಿತಿ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ ಕಟೀಲು, ಮಾಜಿ ಶಾಸಕ ಸುನೀಲ್ ನಾಯ್ಕ, ಸುಬ್ರಾಯ ಭಟ್ಟ ಬಕ್ಕಳ, ಸುಧಾಕರ ಗೌಡ ಪಾಲ್ಗೊಳ್ಳುವರು. ಹಿರಿಯ ಯಕ್ಷಗಾನ ಕಲಾವಿದ ಕರ್ಕಿ ಸತ್ಯನಾರಾಯಣ ಉಪಸ್ಥಿತರಿರುವರು. ಖ್ಯಾತ ಅಂಕಣಕಾರ ನಾರಾಯಣ ಯಾಜಿ ಸಾಲೇಬೈಲು ಕಾರ್ಯಕ್ರಮದ ಸಮಗ್ರ ಅವಲೋಕನ ಮಾಡುವರು. ರಾತ್ರಿ 9.30 ರಿಂದ ಅಹೋರಾತ್ರಿ ಯಕ್ಷಗಾನ ನಡೆಯಲಿದೆ ಎಂದು ಕೆರೆಮನೆ ಶ್ರೀ ಇಡಗುಂಜಿ ಮೇಳ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
