ಚಂಡೀಗಢ:
ಹರಿಯಾಣದ ಅಂಬಾಲಾದ ಬಹುಜನ ಸಮಾಜ ಪಕ್ಷದ ನಾಯಕ ಹರ್ಬಿಲಾಸ್ ಸಿಂಗ್‌ನನ್ನು ನರೈಂಗರ್‌ನಲ್ಲಿ ದಾಳಿಕೋರರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ನಿನ್ನೆ ಸಂಜೆ ಬಿಎಸ್‌ಪಿ ನಾಯಕ ಹರ್ಬಿಲಾಸ್ ಸಿಂಗ್ ರಜ್ಜುಮಜ್ರಾ ಅವರ ಜೊತೆ ಪುನೀತ್ ಮತ್ತು ಗುಗಲ್ ಎಂಬ ಇಬ್ಬರು ಸ್ನೇಹಿತರು ಕಾರಿನಲ್ಲಿ ಕುಳಿತಿದ್ದಾಗ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯ ವೇಳೆ ಹರ್ಬಿಲಾಸ್ ಸ್ನೇಹಿತ ಪುನೀತ್‌ಗೂ ಗುಂಡೇಟು ತಗುಲಿದೆ. ದಾಳಿಯ ನಂತರ ಚಿಕಿತ್ಸೆಗಾಗಿ ಅವರನ್ನು ಚಂಡೀಗಢದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಭೀಕರ ಗುಂಡಿನ ದಾಳಿಯ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಹರ್ಬಿಲಾಸ್ ತಡರಾತ್ರಿ ಮೃತಪಟ್ಟಿದ್ದಾರೆ. ಪುನೀತ್ ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಂತಕರನ್ನು ಇದುವರೆಗೆ ಗುರುತಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನರೈಂಗಡ್ ಎಸ್ ಹೆಚ್ ಒ ಲಲಿತ್ ಕುಮಾರ್ ಅಪರಾಧ ಕೃತ್ಯ ನಡೆದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ದಾಳಿಕೋರರನ್ನು ಬಂಧಿಸಲು ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಅಂಬಾಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಎಸ್ ಭೋರಿಯಾ ತಿಳಿಸಿದ್ದಾರೆ.
ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲು ಪೊಲೀಸರು ಎಲ್ಲ ಪ್ರಯತ್ನಗಳನ್ನು ಮಾಡಬೇಕೆಂದು ಅಂಬಾಲಾ ಮೂಲದ ಬಿಎಸ್‌ಪಿ ನಾಯಕರು ಒತ್ತಾಯಿಸಿದ್ದಾರೆ. ಹರ್ಬಿಲಾಸ್ ಸಿಂಗ್ ಕಳೆದ ವರ್ಷ ನರೈಂಗಡ್ ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.