ಉತ್ತರಾಖಂಡ:
ಪ್ರಸವ ನೋವು ಕಾಣಿಸಿಕೊಂಡು ಒದ್ದಾಡುತ್ತಿದ್ದ ಮಹಿಳೆಯೊಬ್ಬರು ಆಸ್ಪತ್ರೆಗೆ ಹೋಗಿದ್ದು, ಸೂಕ್ತ ಚಿಕಿತ್ಸೆ ಹಾಗೂ ಸೌಲಭ್ಯ ದೊರಕದೆ ನರಳಾಡಿ ಹಾಸ್ಪಿಟಲ್ ನ ನೆಲದ ಮೇಲೆಯೇ ಹೆರಿಗೆ ಆಗಿರುವ ಅಮಾನವೀಯ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಈ ಖಾಸಗಿ ಆಸ್ಪತ್ರೆಗಳಿಗೆ ತೆರಳಿದ್ದರೆ ಅಧಿಕ ಖರ್ಚು ವೆಚ್ಚವನ್ನು ಭರಿಸಬೇಕಾಗುತ್ತದೆ ಎಂಬ ಹಿಂಜರಿಕೆ ಹಾಗೂ ಅಸಹಾಯಕತೆಯಲ್ಲಿಯೇ ಜ್ವರ – ಶೀತದಿಂದ ಹಿಡಿದು ಹೆರಿಗೆಗೂ ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ ಈ ಮಧ್ಯಮ ವರ್ಗದವರು.
ಆದರೆ ಕೆಲವೊಮ್ಮೆ ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು , ಸಿಬ್ಬಂದಿ ಕೊರತೆ ಅಥವಾ ಅಲ್ಲಿದ್ದವರ ನಿರ್ಲಕ್ಷ್ಯದಿಂದಾಗಿ ಬಹಳಷ್ಟು ಸಲ ಅಚಾತುರ್ಯಗಳಾಗುತ್ತವೆ. ಇದೇ ರೀತಿಯ ಘಟನೆಯೊಂದು ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ. ಉತ್ತರಾಖಂಡ ರಾಜ್ಯದ ಹರಿದ್ವಾರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹೆರಿಗೆಗೆ ಎಂದು ಆಸ್ಪತ್ರೆಯತ್ತ ಓಡೋಡಿ ಬಂದಿದ್ದಾರೆ. ಆದರೆ ಇಲ್ಲಿ ಹೆರಿಗೆ ಮಾಡಿಸಲು ಸಾಧ್ಯವಿಲ್ಲ ಎಂಬ ಉಡಾಫೆ ಉತ್ತರವನ್ನು ವೈದ್ಯರು ಕೊಟ್ಟಿದ್ದು, ಆ ಮಹಿಳೆ ಪ್ರಸವದ ನೋವಿನಿಂದ ನರಳಿ ಓಡಾಡುತ್ತಿದ್ದರು ಸ್ಪಂದಿಸದೇ ನೆಲದ ಮೇಲೆಯೇ ಹೆರಿಗೆ ಆಗಿದೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮನುಷ್ಯತ್ವ ಇಲ್ಲದಂತೆ ನಡೆದುಕೊಂಡ ವೈದ್ಯರು ಹಾಗೂ ಸಿಬ್ಬಂದಿಗಳ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದಾರೆ.
ಇನ್ನು ವೈರಲ್ ಆದ ವಿಡಿಯೋದಲ್ಲಿ ಮಹಿಳೆ ನೆಲದ ಮೇಲೆ ನೋವಿನಿಂದ ಒದ್ದಾಡುತ್ತಿರುವ ದೃಶ್ಯ ಸೆರೆಯಾಗಿದೆ. ಆ ತುಂಬು ಗರ್ಭಿಣಿ ನೆಲದ ಮೇಲೆ ಮಲಗಿ ಕಿರುಚಾಡಿದ್ದರು, ಸಂಕಟ ಪಟ್ಟರು ಅಲ್ಲಿನ ಸಿಬ್ಬಂದಿಗಳು ಸಹಾಯಕ್ಕೆ ಬಾರದೇ ಬೇಜವಾಬ್ದಾರಿ ತೋರಿಸಿರುವುದು ಜನರ ಕಣ್ಣಿಗೆ ಗುರಿಯಾಗುವಂತೆ ಮಾಡಿದೆ.
ಇನ್ನು ಯಾರ ಸಹಾಯವಿಲ್ಲದೇ ಗರ್ಭಿಣಿ ಮಹಿಳೆಯು ಆಸ್ಪತ್ರೆಯ ನೆಲದ ಮೇಲೆ ಮಗುವಿಗೆ ಜನ್ಮ ನೀಡಿದ್ದು, ಕರ್ತವ್ಯದಲ್ಲಿದ್ದ ವೈದ್ಯರು ಆಸ್ಪತ್ರೆಯಲ್ಲಿ ಹೆರಿಗೆಗಳನ್ನು ಮಾಡಿಸುವುದಿಲ್ಲ ಎಂದು ಹೇಳಿಕೊಂಡು ಆಸ್ಪತ್ರೆಗೆ ದಾಖಲಿಸಿಲ್ಲ ಎಂದು ತಿಳಿದುಬಂದಿದೆ. ಸಾರ್ವಜನಿಕರ ಸಮ್ಮುಖದಲ್ಲಿ ಹೆರಿಗೆ ಆಗಿದ್ದು, ಹೆರಿಗೆಯ ವೇಳೆ ಯಾವುದೇ ವೈದ್ಯಕೀಯ ಸಿಬ್ಬಂದಿ ಸಹಾಯ ಮಾಡಲಿಲ್ಲ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ.
ಇನ್ನು ಘಟನೆ ಬಗ್ಗೆ ಮಾತನಾಡಿರುವ ಗರ್ಬಿಣಿ ಮಹಿಳೆಯ ಸಂಬಂಧಿ ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ಕಿಡಿಕಾರಿದ್ದಾರೆ. ಮರುದಿನ ಬೆಳಗ್ಗೆ ಬಂದಂತಹ ಕುಟುಂಬದ ಸಂಬಂಧಿ ಸೋನಿ ಈ ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ ನೋವು ನೋವು ಎಂದು ಯಾತನೆ ಪಡುತ್ತಿದ್ದರು ನಮ್ಮ ಕಷ್ಟಕ್ಕೆ ಅವರು ಸ್ಪಂದಿಸಿಲ್ಲ, ಬೆಡ್ ಮೇಲೆ ಮಲಗಲು ಸಹ ಬಿಡಲಿಲ್ಲ. ಮಗುವಿಗೆ ಏನಾದರೂ ಆಗಿದ್ದರೆ, ಯಾರು ಜವಾಬ್ದಾರಿ ಆಗುತ್ತಿದ್ದರು?,” ಎಂದು ಆಕ್ರೋಶ ಹೊರಹಾಕಿದರು. ಅಲ್ಲದೆ, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.








