ಬೆಂಗಳೂರು:
ರಾಷ್ಟ್ರಮಟ್ಟದಲ್ಲಿ ಅಧಿಕಾರದಲ್ಲಿರುವ ಎನ್ ಡಿಎ ಮೈತ್ರಿಕೂಟವನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಣಿಸಲು ಮಹಾ ಘಟಬಂಧನ ಹೆಸರಿನಲ್ಲಿ ರಾಷ್ಟ್ರಮಟ್ಟದ ಮತ್ತು ರಾಜ್ಯಗಳ ಘಟಾನುಘಟಿ ನಾಯಕರ ಸಭೆ ಇಂದು ಮತ್ತು ನಾಳೆ ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ ಒಂದರಲ್ಲಿ ನಡೆಯುತ್ತಿದ್ದು ಸಭೆಗೆ ಜನತಾದಳ(JDS) ಭಾಗವಹಿಸುತ್ತಿಲ್ಲ, ಅದಕ್ಕೆ ನಮಗೆ ಆಹ್ವಾನ ನೀಡಿಲ್ಲ ಎಂದೆಲ್ಲ ಸುದ್ದಿಯಾಗಿತ್ತು.
ಈ ಬಗ್ಗೆ ಸ್ವತಃ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಇಂದು ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಸಭೆಗೆ ನಮಗೆ ಆಹ್ವಾನವನ್ನು ನೀಡಿಲ್ಲ, ನಾಳೆಯ ಎನ್ ಡಿಎ ಮೈತ್ರಿಕೂಟ ಸಭೆಗೂ ಆಹ್ವಾನವಿಲ್ಲ, ನೋಡೋಣ ಮುಂದೆ ಏನಾಗುತ್ತದೆ ನಾವು ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ ಎಂದಿದ್ದಾರೆ.
ಮಹಾಘಟಬಂಧನ್ ನಮ್ಮ ಪಕ್ಷವನ್ನು ಲೆಕ್ಕಕ್ಕೇ ಇಟ್ಟಿಲ್ಲ ಅವರು. ಮಹಾಘಟಬಂದನ್ ವ್ಯವಸ್ಥಾಪಕರು ಜೆಡಿಎಸ್ ಮುಳುಗಿಹೋಗಿದೆ ಅನ್ನುವ ಭ್ರಮೆಯಲ್ಲಿದ್ದಾರೆ. ಆಹ್ವಾನ ಕೊಟ್ಟರೊ, ಇಲ್ಲವೋ ಅನ್ನೊದಕ್ಕೆ ತಲೆ ಕೂಡ ಕೆಡಿಸಿಕೊಂಡಿಲ್ಲ. ನಮಗೆ ಎಲ್ಲೂ ಕೂಡ ಆಹ್ವಾನ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ನಮ್ಮ ಪಕ್ಷದ ಸಂಘಟನೆ ಹೇಗೆ ಮಾಡಬೇಕು, ನಾಡಿನ ಜನತೆ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಬೇಕೋ ಅದರ ಬಗ್ಗೆ ಚಿಂತಿಸಿ ಕಾರ್ಯಪ್ರವೃತ್ತರಾಗುತ್ತೇವೆ. ಈಗಾಗಲೇ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳಿಂದ ತಿಳಿದುಕೊಂಡೆ. ಅದರ ಬಗ್ಗೆ ಸರ್ಕಾರಕ್ಕೆ ಚಿಂತೆಯಿಲ್ಲ, ಮಹಾಘಟ ಬಂಧನ ಎಂದು ರಸ್ತೆಯುದ್ಧಕ್ಕೂ ದೊಡ್ಡ ದೊಡ್ಡ ಕಟೌಟ್, ಬ್ಯಾನರ್ ಹಾಕಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಯಾರೂ ಮಾಡದ ಸಾಧನೆ ಮಾಡಿದ್ದೇವೆ ಎಂದು ತೋರಿಸುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಏನಾದರೂ ಪ್ರಯೋಜನವಿದೆಯೇ ಎಂದು ಕುಮಾರಸ್ವಾಮಿ ಕೇಳಿದರು.
ರಾಜ್ಯದಲ್ಲಿ 42 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ರೈತರ ಸಂಕಷ್ಟಕ್ಕೆ ಮಿಡಿಯುವ ಬಗ್ಗೆ ಸರ್ಕಾರ ಒಂದಾದರೂ ಸಂದೇಶ ಕೊಟ್ಟಿದೆಯೇ? ರೈತರ ಬಗ್ಗೆ ಸರ್ಕಾರ ಯಾವುದೇ ಹೇಳಿಕೆಯನ್ನೂ ನೀಡಿಲ್ಲ, ಇದು ಇಂದಿನ ಪರಿಸ್ಥಿತಿಯಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ