ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌ …..!

ಬೆಂಗಳೂರು:

    ನಿಮ್ಮ ಕಚೇರಿಯಲ್ಲಿ ಕಾಫಿ, ಟೀಗೆ ಪ್ರತಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಆದರೆ, ಬಡ ಕಾರ್ಮಿಕರ ಪುತ್ರಿಯರ ಶಿಕ್ಷಣದ ಖರ್ಚು ಭರಿಸಲು ನಿಮಗೆ ಆಗದೇ? ಇಂಥ ಮಕ್ಕಳ ಸಹಾಯಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು. ಸೆಸ್‌ ಸಂಗ್ರಹಿಸಿರುವುದು ಅವರಿಗಾಗಿ ಅಲ್ಲವೇ? ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿತು.

    ಇದೇ ವೇಳೆ, ಅರ್ಜಿದಾರ ವಿದ್ಯಾರ್ಥಿನಿಯರ ಶುಲ್ಕದ ಜೊತೆಗೆ ತಲಾ ರೂ.25 ಸಾವಿರ ವ್ಯಾಜ್ಯದ ವೆಚ್ಚ ನೀಡುವಂತೆ ಆದೇಶಿಸಿದೆ.

    ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮೀಸಲಾದ ವರ್ಗದಲ್ಲಿ ಶೈಕ್ಷಣಿಕ ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಿದ್ದ ಇಬ್ಬರು ಸ್ನಾತಕೋತ್ತರ ವಿದ್ಯಾರ್ಥಿನಿಯರ ನೆರವಿಗೆ ಬಾರದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಉದಾಸೀನ ನಿಲುವಿಗೆ ಈಚೆಗೆ ಕರ್ನಾಟಕ ಹೈಕೋರ್ಟ್‌ ಚಾಟಿ ಬೀಸಿದೆ.

    ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕೆ ಮಹಾಂತೇಶ್‌ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

    ಅರ್ಜಿದಾರ ವಿದ್ಯಾರ್ಥಿನಿಯರು ಭರಿಸಬೇಕಿದ್ದ ಕಾಲೇಜು ಶುಲ್ಕವು ಯಾವುದೇ ಒಂದು ಸರ್ಕಾರಿ ಕಚೇರಿಯಲ್ಲಿನ ನೌಕರ ಪಡೆಯಬಹುದಾದ ಸಾರಿಗೆ ಮತ್ತು ತುಟ್ಟಿ ಭತ್ಯೆಗೆ ಸಮಾನವಾದುದು. ಆದರೆ, ಅಂದಂದಿನ ತುತ್ತು ಅನ್ನವನ್ನು ಅಂದೇ ದುಡಿದು ತಿನ್ನುವ ಬಡವರ್ಗದ ವಿದ್ಯಾರ್ಥಿನಿಯರ ಶೈಕ್ಷಣಿಕ ಧನಸಹಾಯ ಕೋರಿದ ಅರ್ಜಿಗಳನ್ನು ಕಳೆದ 10 ತಿಂಗಳಿನಿಂದ ಶೈತ್ಯಾಗಾರದಲ್ಲಿ ಇರಿಸಿದ ನಿಮ್ಮ ನಿಲುವು ಬೆಚ್ಚಿಬೀಳಿಸುವಂತಿದೆ ಎಂದು ಪೀಠ ಕಲ್ಯಾಣ ಮಂಡಳಿ ಅಧಿಕಾರಿಗಳಿಗೆ ಬೆವರಿಳಿಸಿದೆ.

    ಕಲ್ಯಾಣ ಮಂಡಳಿ‌ ಪರವಾಗಿ ಹಾಜರಿದ್ದ ವಕೀಲ ಬಿ ಎನ್‌ ಪ್ರಶಾಂತ್‌, ಮಂಡಳಿಯ ಈ ಹಿಂದಿನ ತೀರ್ಮಾನದಂತೆ ಕೇವಲ ರೂ. 10 ಸಾವಿರ ಹಾಗೂ ರೂ.11 ಸಾವಿರವನ್ನು ಮಾತ್ರವೇ ಪಾವತಿಸಲು‌ ಸಾಧ್ಯ ಎನ್ನುವ ಅಭಿಪ್ರಾಯವನ್ನು ತಳ್ಳಿ ಹಾಕಿರುವ ಪೀಠವು ಸರ್ಕಾರದ ಅಧಿಸೂಚನೆ ಅನುಸಾರ ಅರ್ಜಿದಾರ ವಿದ್ಯಾರ್ಥಿನಿಯರು ಹೆಚ್ಚಿನ ಧನಸಹಾಯ ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಿದೆ.

    ಕಾರ್ಮಿಕರ ಶ್ರಮದಿಂದ ಸಂಗ್ರಹವಾಗಿರುವ ರೂ.8,200 ಕೋಟಿ ಕಲ್ಯಾಣ ನಿಧಿ ಇದ್ದರೂ ಅವರ ಮಕ್ಕಳಿಗೆ ನ್ಯಾಯಬದ್ದವಾಗಿ ನೀಡಬೇಕಾದ ಶೈಕ್ಷಣಿಕ ಧನಸಹಾಯವನ್ನು ನಿರಾಕರಿಸಿರುವುದನ್ನು ಯಾವ‌ ಕಾರಣದಿಂದಲೂ ಸಮರ್ಥನೆ ಮಾಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

    ಅರ್ಜಿದಾರ ವಿದ್ಯಾರ್ಥಿನಿಯರಲ್ಲಿ ಅಂಕಿತಾ ಎಲ್‌ಎಲ್‌ಬಿ ಹಾಗೂ ಅಮೃತಾ ಎಂಬಿಎ ಪದವೀಧರರಿದ್ದಾರೆ. ಇವರಿಬ್ಬರೂ ವಿದ್ಯಾರ್ಥಿನಿಯರು ಈಗಾಗಲೇ ಹೇಗೋ ಹೆಣಗಾಡಿ ರೂ.30 ಮತ್ತು ರೂ. 35 ಸಾವಿರ ಮೊತ್ತ ಶುಲ್ಕವನ್ನು ಸ್ವಂತ ಖರ್ಚಿನಲ್ಲಿ ತುಂಬಿದ್ದಾರೆ. ಅವರು ಕೋರಿರುವ ಮೊತ್ತದ ಶುಲ್ಕವನ್ನು ಈ ಮಧ್ಯಂತರ ಆದೇಶ ನೀಡಿದ ದಿನದಿಂದ ನಾಲ್ಕು ವಾರದೊಳಗೆ ಅವರ ಖಾತೆಗೆ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap