ಬೆಳಗಾವಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮ ಜನ ಭರ್ಜರಿಯಾಗಿ ಹೋಳಿ ಆಚರಿಸಿ ಕುಣಿದು ಕುಪ್ಪಳಿಸಿ ಮನೆಗೆ ತೆರಳಿದ್ದರು. ಇದಾದ ಕೆಲ ಹೊತ್ತಿನಲ್ಲೇ ಯುವಕನೊಬ್ಬ ವಾಟ್ಸಾಪ್‌ನಲ್ಲಿ ಅಂಬೇಡ್ಕರ್ ಕುರಿತು ಸ್ಟೇಟಸ್ ಹಾಕಿಕೊಂಡಿದ್ದಾನೆ. ಈ ವಿಚಾರಕ್ಕೆ ಎರಡು ಸಮುದಾಯದ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಸ್ಟೇಟಸ್ ಹಾಕಿ ಕೊಂಡಿದ್ದ ಯುವಕ ಮತ್ತಷ್ಟು ಯುವಕರನ್ನು ಕರೆದುಕೊಂಡು ಬಂದು ಅಂಬೇಡ್ಕರ್ ಪ್ರತಿಮೆ ಸುತ್ತ ಹಾಕಲಾಗಿದ್ದ ಕಾಂಪೌಂಡ್ ಬೀಳಿಸಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಅಂಬೇಡ್ಕರ್ ಕಾಲೋನಿಯ ಜನರು ಹಾಗೂ ಬೇರೊಂದು ಸಮುದಾಯದ ಜನರ ನಡುವೆ ಕಲ್ಲು ತೂರಾಟ ನಡೆದಿದೆ.
ಕಲ್ಲು ತೂರಾಟದಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪೊಲೀಸರು ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಿ ಇಡೀ ಗ್ರಾಮವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಬೆಳಗಾವಿಯಿಂದ ಎರಡು ಡಿಆರ್ ತುಕಡಿ ಕೂಡ ರವಾನಿಸಲಾಗಿದೆ. ಗಲಾಟೆ ಹತೋಟಿಗೆ ಬಂದಿದ್ದರೂ ಬೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿ ಗ್ರಾಮದಲ್ಲಿದೆ. ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬೆಳಗಾವಿ ಪ್ರದೇಶದಲ್ಲಿ ನೈತಿಕ ಪೊಲೀಸ್‌ಗಿರಿಯ ಘಟನೆಗಳು ಹೆಚ್ಚುತ್ತಿರುವ ಆರೋಪಗಳ ನಡುವೆ, ಬೇರೆ ಸಮುದಾಯದ ಹುಡುಗಿಯೊಂದಿಗೆ ಮಾತನಾಡಿದ ಯುವಕನ ಮೇಲೆ ಆರು ಜನರ ಗುಂಪೊಂದು ಹಲ್ಲೆ ನಡೆಸಿದೆ. ಅಲ್ಲಾವುದ್ದೀನ್ ಪೀರ್ಜಾದೆ ಎಂಬ ಸಂತ್ರಸ್ತನ ಮೇಲೆ, ತಮ್ಮ ಸಮುದಾಯದ ಹುಡುಗಿಯೊಂದಿಗೆ ಮಾತನಾಡಿದ್ದಕ್ಕಾಗಿ ಪ್ರಶ್ನಿಸಿದ ಯುವಕರ ಗುಂಪೊಂದು ಹಲ್ಲೆ ನಡೆಸಿದೆ. ಪೊಲೀಸರ ಪ್ರಕಾರ, ಪೀರ್ಜಾದೆ ಹರಿದ ಬಟ್ಟೆಗಳೊಂದಿಗೆ ಪೊಲೀಸ್ ಠಾಣೆಗೆ ಧಾವಿಸಿ ಆರು ದಾಳಿಕೋರರ ವಿರುದ್ಧ ದೂರು ದಾಖಲಿಸಿದ್ದಾರೆ. ಎಫ್‌ಐಆರ್ ನಂತರ ತ್ವರಿತವಾಗಿ ಕಾರ್ಯಪ್ರವೃತ್ತರಾದ ಪೊಲೀಸರು ಆರು ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಬಂಧಿತರನ್ನು ಸಾವ್ಗಾಂವ್ ಮೂಲದ ಸಂತೋಷ್ ಜಾಧವ್, ಸುದೇಶ್ ಪಾಟೀಲ್ ಮತ್ತು ಅಂಗೋಲ್ ಪ್ರದೇಶದ ಸುಮಿತ್ ಮೋರ್ ಮತ್ತು ಜಯ್ ಇಂಚಲ್ ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ತಲೆಮರೆಸಿಕೊಂಡಿರುವ ಇನ್ನಿಬ್ಬರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.








