ಚಂಡೀಗಢ:
ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಸೇನಾ ನೆಲೆಗಳು ಮತ್ತು ಇತರ ನಗರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದಿಂದ ಬಂದ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ಭಾರತ ಸಂಪೂರ್ಣ ವಿಫಲಗೊಳಿತ್ತು. ಇದೀಗ ಚಂಡೀಗಢದಲ್ಲಿ ಮತ್ತೆ ಸೈರನ್ ಸದ್ದು ಕೇಳಿ ಬಂದಿದ್ದು ಜನರು ಬೆಚ್ಚಿಬಿದ್ದಾರೆ. ಸೈರನ್ ಸದ್ದಾಗುತ್ತಿದ್ದಂತೆ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದ್ದು ಜನರು ಮನೆಯಿಂದ ಹೊರಬರಬಾರದು ಎಂದು ಸೂಚನೆ ನೀಡಿದೆ. ಮನೆಯ ಹೊರಗೆ ಹಾಗೂ ಬಾಲ್ಕನಿಯ ಮೇಲೆ ನಿಲ್ಲಬಾರದು ಎಂಬ ಸೂಚನೆಯನ್ನು ನೀಡಿದೆ.
ಭಾರತದ ನಾಗರಿಕ ಪ್ರದೇಶ ಹಾಗೂ ಸೇನಾ ನೆಲೆಯ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಸಂಚು ರೂಪಿಸಿತ್ತು. ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಆದರೆ ಆ ದಾಳಿಯನ್ನು ನಮ್ಮ ಸೇನಾ ಪಡೆಗಳು ಯಶಸ್ವಿಯಾಗಿ ವಿಫಲಗೊಳಿಸಿವೆ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನಗಳಲ್ಲಿ ಪಾಕಿಸ್ತಾನದ ದಾಳಿಯ ನಂತರ ಭಾರತ 8 ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಗುರುವಾರ ಸಂಜೆ ಭಾರತವು ರಾಜಸ್ಥಾನದ ರಾಮಗಡ್ ವಲಯದಲ್ಲಿ ಶತ್ರುವಿನ F-16 ಯುದ್ಧ ವಿಮಾನವನ್ನು ಹೊಡೆದುರುಳಿಸಿತು. ಭಾರತೀಯ ವಾಯು ರಕ್ಷಣಾ ಘಟಕಗಳು ಸತ್ವಾರಿಯ ಆಯಕಟ್ಟಿನ ಮಹತ್ವದ ಜಮ್ಮು ವಿಮಾನ ನಿಲ್ದಾಣ ಸೇರಿದಂತೆ ಜಮ್ಮುವಿನ ಗಡಿ ಪ್ರದೇಶಗಳ ಕಡೆಗೆ ಪಾಕಿಸ್ತಾನ ಹಾರಿಸಿದ ಕನಿಷ್ಠ ಎಂಟು ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆದಿವೆ.
LOC ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಭಾರತೀಯ ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಡ್ರೋನ್ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲಾಯಿತು ಮತ್ತು ಸೇನೆಯಿಂದ ಕದನ ವಿರಾಮ ಉಲ್ಲಂಘನೆಗಳಿಗೆ “ಸೂಕ್ತ ಪ್ರತ್ಯುತ್ತರ” ನೀಡಲಾಯಿತು ಹೇಳಿಕೆ ಬಂದಿದೆ. ಭಾರತೀಯ ಸೇನೆಯು ರಾಷ್ಟ್ರದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಬದ್ಧವಾಗಿದೆ ಎಂದು ತಿಳಿಸಿದೆ.
ಇದೀಗ ಮುಂದಿನ ಕ್ರಮ ಕೈಗೊಳ್ಳಲು ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ಸಿಡಿಎಸ್, 3 ಸೇನೆಯ ಮುಖ್ಯಸ್ಥರು ಸೇರಿದಂತೆ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಸಭೆಯ ನಂತರ ಸುದ್ದಿಗೋಷ್ಠಿ ನಡೆಯಲಿದೆ.
