ಮುಡಾ ಮಾಜಿ ಆಯುಕ್ತರ ವಿರುದ್ಧ ಕ್ರಮ : ಇಡಿಗೆ ಹೈಕೋರ್ಟ್ ತಪರಾಕಿ

ಬೆಂಗಳೂರು: 

   ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ಮಾಜಿ ಆಯುಕ್ತ ಡಾ. ನಟೇಶ್ ಡಿ.ಬಿ. ಅವರ ನಿವಾಸದಲ್ಲಿ ನಡೆಸಲಾದ ಶೋಧ ಮತ್ತು ವಶಪಡಿಸಿಕೊಳ್ಳುವಿಕೆಯನ್ನು ಕರ್ನಾಟಕ ಹೈಕೋರ್ಟ್ ಕಾನೂನುಬಾಹಿರ, ಅನಗತ್ಯ ಮತ್ತು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ಜಾರಿ ನಿರ್ದೇಶನಾಲಯ(ಇಡಿ)ವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

   ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಅಕ್ರಮವಾಗಿ ನಿವೇಶನಗಳನ್ನು ಮಂಜೂರು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ನಟೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಅಲ್ಲದೆ ಅವರ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿತ್ತು.

   ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ತನ್ನ ಮನೆಯಲ್ಲಿ ನಡೆಸಿರುವ ಶೋಧ ಕಾರ್ಯ ಹಾಗೂ ಇದಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಿ, ದಾಖಲು ಮಾಡಿಕೊಂಡಿರುವ ತಮ್ಮ ಪ್ರಮಾಣಿತ ಹೇಳಿಕೆ ಪ್ರಶ್ನಿಸಿ ನಟೇಶ್ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.ನಟೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠ, ಇಡಿ, ಹಣ ವರ್ಗಾವಣೆ ಮತ್ತು ಅಪರಾಧದ ಆದಾಯವನ್ನು ಮುಟ್ಟುಗೋಲು ಹಾಕಿಕೊಳ್ಳುವ ಗಂಭೀರ ಅಪರಾಧವನ್ನು ತಡೆಗಟ್ಟಲು ಸ್ಥಾಪಿಸಲಾದ ಪ್ರಮುಖ ತನಿಖಾ ಸಂಸ್ಥೆಯಾಗಿದೆ ಮತ್ತು ಅದು ತನ್ನ ಕರ್ತವ್ಯಗಳನ್ನು ನ್ಯಾಯಯುತವಾಗಿ ನಿರ್ವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

   ಇಡಿ ದಾಖಲಿಸಿಕೊಂಡಿರುವ ನಟೇಶ್ ಹೇಳಿಕೆಗಳನ್ನು ರದ್ದುಗೊಳಿಸಿದ ಹೈಕೋರ್ಟ್, ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಸ್ವಾತಂತ್ರ್ಯ ಮತ್ತು ಗೌಪ್ಯತೆಯ ಹಕ್ಕು ಅನಿಯಂತ್ರಿತ ಶೋಧಗಳ ವಿರುದ್ಧದ ಹಕ್ಕನ್ನು ಸಹ ಹೊಂದಿದೆ ಎಂದು ಹೇಳಿದೆ.

   ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಅಪರಾಧವನ್ನು ದಾಖಲಿಸಲು ಯಾವುದೇ ಪ್ರಾಥಮಿಕ ಪುರಾವೆಗಳಿಲ್ಲದಿದ್ದಾಗ, ತನಿಖೆಯ ನೆಪದಲ್ಲಿ ಅರ್ಜಿದಾರರಾದ ನಟೇಶ್ ಅವರ ಆವರಣದಲ್ಲಿ ನಡೆಸಿದ ಶೋಧವು ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರುಪಯೋಗವಾಗಿದೆ ಎಂದು ಹೈಕೋರ್ಟ್ ಹೇಳಿದೆ.

   2024 ರ ಅಕ್ಟೋಬರ್ 28 ರಿಂದ 29 ರವರೆಗೆ ಅರ್ಜಿದಾರ ನಟೇಶ್ ಅವರ ನಿವಾಸದಲ್ಲಿ ನಡೆಸಲಾದ ಆಕ್ಷೇಪಾರ್ಹ ಶೋಧ ಮತ್ತು ವಶಪಡಿಸಿಕೊಳ್ಳುವಿಕೆ ಮತ್ತು ನಂತರದ PMLA, 2002 ರ ಸೆಕ್ಷನ್ 17(1)(f) ಅಡಿಯಲ್ಲಿ ದಾಖಲಿಸಲಾದ ಹೇಳಿಕೆ ಅಮಾನ್ಯ ಮತ್ತು ಕಾನೂನುಬಾಹಿರ ಎಂದು ಹೈಕೋರ್ಟ್ ಘೋಷಿಸಿದೆ.

   ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಹಂಚಿಕೆ ಮಾಡಲಾಗಿದ್ದ 14 ನಿವೇಶನಗಳನ್ನು ಒಳಗೊಂಡ ಮುಡಾ ಪ್ರಕರಣವನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸಲು ಯತ್ನಿಸುತ್ತಿದೆ. ಆದರೆ ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಎರಡನೆಯದಾಗಿ ಜಾರಿ ನಿರ್ದೇಶನಾಲಯ ನಿರ್ದೇಶಕರು ಅಥವಾ ಅವರು ಸೂಚಿಸುವ ಅಧಿಕಾರಿಗಳು ಇದು ಶೋಧ ಮತ್ತು ಜಫ್ತಿ ನಡೆಸಲು ಸೂಕ್ತ ಪ್ರಕರಣ ಎಂದು ಹೇಳಬೇಕು. ಹಾಲಿ ಪ್ರಕರಣದಲ್ಲಿ ಜಂಟಿ ನಿರ್ದೇಶಕರು, ಸಹಾಯಕ ನಿರ್ದೇಶಕರಿಗೆ ತನಿಖೆಗೆ ಅನುಮತಿಸಿದ್ದಾರೆ. ಇದಕ್ಕೆ ಹಣ ಅಕ್ರಮ ವರ್ಗಾವಣೆ ಕಾಯಿದೆ ಸೆಕ್ಷನ್ 17(1)ರಲ್ಲಿ ಅವಕಾಶವಿಲ್ಲ. ಈ ನೆಲೆಯಲ್ಲಿ ಇಡೀ ಶೋಧ ಮತ್ತು ಜಫ್ತಿ ಕಾರ್ಯಾಚರಣೆ ಕಾನೂನುಬಾಹಿರವಾಗಿದೆ ಎಂದು ಪೀಠಕ್ಕೆ ತಿಳಿಸಿದ್ದರು.

Recent Articles

spot_img

Related Stories

Share via
Copy link