ಪೋಕ್ಸೊ ಕೇಸ್‌ನಲ್ಲಿ ಬಿ.ಎಸ್.ವೈಗೆ ನೀಡಿದ್ದ ಸಮನ್ಸ್‌ ರದ್ದು ಮಾಡಲು ಹೈಕೋರ್ಟ್‌ ನಕಾರ

ಬೆಂಗಳೂರು

      ಪೋಕ್ಸೊ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ನೀಡಿದ್ದ ಸಮನ್ಸ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಪೋಕ್ಸೊ ಕೇಸ್‌ನಲ್ಲಿ  ನೀಡಿದ್ದ ಸಮನ್ಸ್ ರದ್ದು ಕೋರಿ ಬಿ.ಎಸ್‌. ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ಐ ಅರುಣ್ ಅವರಿದ್ದ ನ್ಯಾಯಪೀಠವು ವಿಚಾರಣೆ ನಡೆಸಿದ್ದು, ವಿಚಾರಣಾ ನ್ಯಾಯಾಲಯದ ಸಮನ್ಸ್ ರದ್ದುಪಡಿಸಲು ನಿರಾಕರಿಸಿದ್ದಾರೆ. ಇದರಿಂದ ಯಡಿಯೂರಪ್ಪ ಅವರಿಗೆ ಭಾರಿ ಹಿನ್ನಡೆ ಉಂಟಾಗಿದ್ದು, ಅವರ ವಿರುದ್ಧ ಸಿಐಡಿ ವಿಚಾರಣೆ ಮುಂದುವರಿಯಲಿದೆ.

     ವಿಚಾರಣಾ ಹಂತದಲ್ಲಿ ಯಡಿಯೂರಪ್ಪ ಅವರ ಅಗತ್ಯವಿಲ್ಲದಿದ್ದರೆ ವಿಚಾರಣೆಗೆ ಹಾಜರಾಗುವಂತೆ ಒತ್ತಾಯಿಸಬಾರದು ಎಂದು ನ್ಯಾಯಾಲಯ ಹೇಳಿದೆ. ಯಡಿಯೂರಪ್ಪ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡನೆ ಮಾಡಿದ್ದರು. ಅರ್ಜಿದಾರರ ಪರ ವಕೀಲರ ವಾದ ಮತ್ತು ಸಿಐಡಿ ತನಿಖಾಧಿಕಾರಿ ಪರ ವಿಶೇಷ ಅಭಿಯೋಜಕರ ಪ್ರತಿವಾದ ಆಲಿಸಿ ಕೋರ್ಟ್‌ ಆದೇಶ ನೀಡಿದೆ.

   ಪ್ರಭಾವಕ್ಕೆ ಒಳಗಾಗದೇ ತನ್ನ ಮುಂದೆ ಇರುವ ಸಾಕ್ಷಿಗಳನ್ನು ಆಧರಿಸಿ ವಿಚಾರಣಾಧೀನ ನ್ಯಾಯಾಲಯ ಪ್ರಕರಣ ನಿರ್ಧರಿಸಬೇಕು. ಪ್ರಮುಖವಾಗಿ ಹೈಕೋರ್ಟ್‌ ಮತ್ತು ಸಕ್ಷಮ ನ್ಯಾಯಾಲಯ ಮಾಡಿರುವ ಆದೇಶದಲ್ಲಿ ಉಲ್ಲೇಖಿಸಿರುವ ಅಂಶಗಳ ಪ್ರಭಾವಕ್ಕೆ ಒಳಗಾಗದೇ ಸಾಕ್ಷಿಯನ್ನು ಪರಿಗಣಿಸಬೇಕು ಎಂದು ಜಡ್ಜ್‌ ಹೇಳಿದರು. ಆರೋಪ ಮುಕ್ತಿ ಸೇರಿಯೂ ಯಾವುದೇ ಅರ್ಜಿಗಳನ್ನು ವಿಚಾರಣಾಧೀನ ನ್ಯಾಯಾಲಯದ ಮುಂದೆ ಸಲ್ಲಿಸಲು ಅರ್ಜಿದಾರರು ಸ್ವತಂತ್ರರಾಗಿದ್ದಾರೆ ಎಂದು ಹೈಕೋರ್ಟ್ ತಿಳಿಸಿದೆ‌. 

    ನನ್ನ 17 ವರ್ಷದ ಮಗಳ ಮೇಲೆ ಮಾಜಿ ಸಿಎಂ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದರು. ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ನಂತರ ಈ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿತ್ತು.

    ಪೋಕ್ಸೊ ಕೇಸ್‌ನಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಅಲ್ಲದೇ ಪ್ರಕರಣದಲ್ಲಿ ಬಂಧಿಸದಂತೆ ಸೂಚನೆ ನೀಡಿತ್ತು. ಬಳಿಕ ವಿಚಾರಣೆಯ ಖುದ್ದು ಹಾಜರಾತಿಗೆ ವಿನಾಯಿತಿ ನೀಡಲಾಗಿತ್ತು. ಬಳಿಕ ಸಿಐಡಿ ಅಧಿಕಾರಿಗಳು ಯಡಿಯೂರಪ್ಪಗೆ ನೋಟಿಸ್‌ ಕೊಟ್ಟು ವಿಚಾರಣೆಗೆ ಕರೆಸಿ ಹೇಳಿಕೆಗಳನ್ನು ಪಡೆದಿದ್ದರು. ಈ ನಡುವೆ, ಕೇಸ್‌ ರದ್ದು ಮತ್ತು ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಹೈಕೋರ್ಟ್‌ಗೆ ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದರು.

Recent Articles

spot_img

Related Stories

Share via
Copy link