ಬೆಂಗಳೂರು:
ಮುಂದಿನ ಮೂರು ವಾರಗಳಲ್ಲಿ ಬೆಂಗಳೂರಿನಲ್ಲಿರುವ ಕೇಂದ್ರ ಕೈಗಾರಿಕಾ ನ್ಯಾಯಮಂಡಳಿ ಕಮ್ ಕಾರ್ಮಿಕ ನ್ಯಾಯಾಲಯಕ್ಕೆ ಅಧಿಕಾರಿ ನೇಮಕಕ್ಕೆ ಸಕಾರಾತ್ಮಕ ಕ್ರಮ ಕೈಗೊಳ್ಳದಿದ್ದರೆ 10 ಲಕ್ಷ ರೂ. ದಂಡ ವಿಧಿಸಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠವು ಇಂಡಸ್ಟ್ರಿಯಲ್ ಲಾ ಪ್ರಾಕ್ಟೀಷನರ್ಸ್ ಫೋರಂ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿದೆ.
ಕೈಗಾರಿಕಾ ನ್ಯಾಯಮಂಡಳಿಗೆ ಆಗಸ್ಟ್ 18, 2022 ರಂದು ನೇಮಕಾತಿ ಮಾಡಲಾಗಿತ್ತು. ಆದರೆ, ನೇಮಕಗೊಂಡವರು ಅಧಿಕಾರ ವಹಿಸಿಕೊಂಡಿಲ್ಲ. ಹೀಗಾಗಿ ಹೊಸ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಎಂದು ಕೇಂದ್ರ ಸರ್ಕಾರದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣವು ಈ ಹಿಂದೆಯೂ ನ್ಯಾಯಾಲಯಕ್ಕೆ ಬಂದಿತ್ತು ಮತ್ತು ನೇಮಕಾತಿ ನಡೆದ ನಂತರ ಇತ್ಯರ್ಥವಾಗಿತ್ತು. ವೇದಿಕೆ ಮತ್ತೆ ಈಗ ನ್ಯಾಯಾಲಯದ ಮೊರೆ ಹೋಗಿದೆ.
ಈ ಕುರಿತು ವಸ್ತುಸ್ಥಿತಿಯ ವರದಿ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡುವಂತೆ ಸರ್ಕಾರಿ ವಕೀಲರು ಕೋರಿದರು.
ನೇಮಕಾತಿಯಲ್ಲಿನ ವಿಳಂಬವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ‘ವಸ್ತುಸ್ಥಿತಿಯ ವರದಿಯು ಸರ್ಕಾರದ ಮುಂದೆ ಬಾಕಿ ಇದೆ ಎಂದು ಸೂಚಿಸುತ್ತದೆ. ಇದು ಈ ನ್ಯಾಯಾಲಯದ ಕಣ್ಣಿಗೆ ಮಣ್ಣೆರೆಚುವ ಕೆಲಸವಲ್ಲದೆ ಬೇರೇನು ಅಲ್ಲ’ ಎಂದು ಕಿಡಿಕಾರಿತು.
ಅರ್ಜಿದಾರರೇ ಹೇಳುವಂತೆ ಕಳೆದ ಮೂರು ವರ್ಷಗಳಿಂದಲೂ ಹುದ್ದೆ ಖಾಲಿ ಇದೆ. ಈ ರೀತಿ ನ್ಯಾಯಿಕ ಮತ್ತು ಅರೆನ್ಯಾಯಿಕ ಸಂಸ್ಥೆಯ ಹುದ್ದೆಗಳ್ನು ದೀರ್ಘಕಾಲದವರೆಗೆ ಭರ್ತಿ ಮಾಡದಿದ್ದರೆ ಕಕ್ಷಿದಾರರು ನ್ಯಾಯದಿಂದ ವಂಚಿತರಾಗುತ್ತದೆ. ಇಂತಹ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಮೂಕಪ್ರೇಕ್ಷಕನಾಗಿರಬಾರದು ಎಂದು ನ್ಯಾಯಾಲಯ ಹೇಳಿತು.
ಬಳಿಕ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ. ವರದಿ ಸಲ್ಲಿಸಲು ವಕೀಲರು ಕೇಳಿದ ಸಮಯವು ಕೇವಲ ಕಣ್ಣೊರೆಸುವ ಪ್ರಯತ್ನವಾಗಬಾರದು ಎಂದು ಹೇಳಿದೆ.
ಆದ್ದರಿಂದ ನಾವು ಪ್ರತಿವಾದಿಗೆ ಎರಡು ವಾರಗಳ ಕಾಲಾವಕಾಶವನ್ನು ನೀಡುತ್ತೇವೆ ಮತ್ತು ಮುಂದಿನ ದಿನಾಂಕದಂದು ಧನಾತ್ಮಕ ಫಲಿತಾಂಶವನ್ನು ನಿರೀಕ್ಷಿಸುತ್ತೇವೆ. ಒಂದು ವೇಳೆ ವೈಫಲ್ಯವಾದರೆ, 10 ಲಕ್ಷ ರೂ. ದಂಡ ತೆರಬೇಕಾಗುತ್ತದೆ ಎಂದಿತು.