ಬೆಂಗಳೂರು:
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಮುರುಘಾ ಶ್ರೀಗಳು ಜೈಲಿನಿಂದ ಬಿಡುಗಡೆಯಾಗಿದ್ದು, ಇದರ ಬೆನ್ನಲ್ಲೇ ಇದೀಗ ಮುರುಘಾ ಶ್ರೀ ಪ್ರಕರಣಗಳ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಚಿತ್ರದುರ್ಗ 2ನೇ ಜಿಲ್ಲಾ ನ್ಯಾಯಾಧೀಶರ ಮುಂದಿರುವ ಕೇಸ್ಗಳಿಗೆ ತಡೆ ನೀಡಿ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಇದರೊಂದಿಗೆ ಮುರುಘಾ ಶರಣರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಮುರುಘಾಶ್ರೀ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ವಾದ ಮಂಡಿಸಿ, 2ನೇ ಅಪರ ಜಿಲ್ಲಾ ನ್ಯಾಯಾಧೀಶರಿಂದ ಪೂರ್ವಾಗ್ರಹಪೀಡಿತ ಕ್ರಮ ಆರೋಪ ಹಿನ್ನೆಲೆಯಲ್ಲಿ ಸಾಕ್ಷ್ಯ ವಿಚಾರಣೆ ಬೇರೆ ಕೋರ್ಟ್ಗೆ ವರ್ಗಾಯಿಸುವಂತೆ ಮನವಿ ಮಾಡಿದರು.
ಮುರುಘಾ ಶ್ರೀಗಳಿಗೆ ಜಾಮೀನು ನೀಡಿದಾಗಲೂ ತಕ್ಷಣ ಬಿಡುಗಡೆಗೆ ಆದೇಶಿಸಲಿಲ್ಲ. ಬಿಡುಗಡೆ ಆದೇಶ ಹೊರಡಿಸಲು ತಡ ಮಾಡಿದ್ದಾರೆ. ಇದರಿಂದಾಗಿ ಮೂರು ದಿನ ಮುರುಘಾಶ್ರೀ ಜೈಲಿನಲ್ಲಿರಬೇಕಾಯ್ತು. ವಿಚಾರಣೆ ಮುಂದೂಡುವಂತೆ ಆದೇಶಿಸಿದ್ದರೂ ವಿಚಾರಣೆ ನಡೆಸಲಾಗಿದೆ. ಚಿತ್ರದುರ್ಗಕ್ಕೆ ಬರದಂತೆ ಹೈಕೋರ್ಟ್ ನಿರ್ಬಂಧಿಸಿದ್ದರೂ ವಾರಂಟ್ ಜಾರಿ ಮಾಡಿದೆ.
ಚಿತ್ರದುರ್ಗ ಜಿಲ್ಲೆಗೆ ಕರೆತರುವಂತೆ 2ನೇ ಅಪರ ಜಿಲ್ಲಾ ನ್ಯಾಯಾಧೀಶರು ಆದೇಶಿಸಿದ್ದಾರೆ. ಪಾಸ್ ಪೋರ್ಟ್ ವಶಕ್ಕೆ ನೀಡಿದಾಗಲೂ ಅದರ ಪರಿಶೀಲನೆಗೆ ಕಳುಹಿಸಿದರು. ಹೈಕೋರ್ಟ್ ಆದೇಶ ವಿಫಲಗೊಳಿಸಲು ಬಂಧನಕ್ಕೆ ಆದೇಶಿಸಿದ್ದಾರೆ ಎಂದು ವಾದ ಮಂಡಿಸಿದರು.
ಈ ವಾದವನ್ನು ಆಲಿಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಚಿತ್ರದುರ್ಗ 2ನೇ ಜಿಲ್ಲಾ ನ್ಯಾಯಾಧೀಶರ ಮುಂದಿರುವ ಮುರುಘಾಶ್ರೀಗಳ ಪ್ರಕರಣ ವಿಚಾರಣೆಗೆ ತಡೆ ನೀಡಿ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಮುರುಘಾ ಶ್ರೀಗಳು ಮೇಲಿಂದ ಮೇಲೆ ರಿಲೀಫ್ ಸಿಕ್ಕಂತಾಗಿದೆ.
ಈಗಾಗಲೇ ಮುರುಘಾ ಶರಣರು ಮೊದಲ ಪೋಕ್ಸೋ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡು ಒಂದು ವರ್ಷದ ನಂತರ ಜೈಲಿನಿಂದ ಬಿಡುಗಡೆಗೊಂಡಿದ್ದರು. ಆದರೆ, 2ನೇ ಪೋಕ್ಸೋ ಪ್ರಕರಣದಲ್ಲಿ ನಿನ್ನೆ (ನವೆಂಬರ್ 21) ಚಿತ್ರದುರ್ಗ ನ್ಯಾಯಾಲಯ ಮುರುಘಾ ಶ್ರೀ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. ಅದರಂತೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀರು ಶ್ರೀಗಳು ಬಂಧಿಸಿದ್ದರು. ಆದರೆ, ಇತ್ತ ಹೈಕೋರ್ಟ್ ತಡೆ ನೀಡಿತ್ತು. ಬಳಿಕ ಶರಣರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಇದೀಗ ಪ್ರಕರಗಳ ವಿಚಾರಣೆಗೆ ತಡೆಯಾಜ್ಞೆ ನೀಡಿದೆ.