ಅಧಿಕಾರಿಗಳಿರುವುದು ಜನಸಾಮಾನ್ಯರ ಸೇವೆಗಾಗಿ : ಹೈಕೋರ್ಟ್‌

ಬೆಂಗಳೂರು:

    ಅಧಿಕಾರಿಗಳಿರುವುದು ಜನಸಾಮಾನ್ಯರ ಸೇವೆಗಾಗಿಯೇ ಹೊರತು ಪ್ರಭಾವಿಗಳ ಸೇವೆ ಸಲ್ಲಿಸಲು ಅಲ್ಲ ಎಂದು ಹೈಕೋರ್ಟ್ ಬಿಬಿಎಂಪಿಗೆ ಚಾಟಿ ಬೀಸಿದೆ.

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಬಡಾವಣೆಯೊಂದರಲ್ಲಿ ಸಾಮಾನ್ಯ ಜನರ ನಿವೇಶನಗಳನ್ನು ಪಾಲಿಕೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ಪ್ರಭಾವಿಗಳು ಕಬಳಿಸಲು ಮುಂದಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

    ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಬಿಬಿಎಂಪಿ ನೀಡಿದ್ದ ನೋಟಿಸ್‌ ಪ್ರಶ್ನಿಸಿ ಬೆಂಗಳೂರಿನ ರೆಮ್ಕೊ (ಬಿಎಚ್‌ಇಎಲ್) ಬಡಾವಣೆಯ ನಿವಾಸಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

    ಬಿಬಿಎಂಪಿ ಶಾಸನಬದ್ಧ ಸಂಸ್ಥೆಯಾಗಿದ್ದು, ಸಾಮಾನ್ಯ ಜನರ ಹಿತಾಸಕ್ತಿ ಕಾಯಲು ಅದನ್ನು ಸ್ಥಾಪಿಸಲಾಗಿದೆಯೇ ವಿನಾ ಪ್ರಭಾವಿಗಳ ಹಿತಾಸಕ್ತಿ ರಕ್ಷಣೆಗಲ್ಲ. ಈ ರೀತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪೀಠ ಎಚ್ಚರಿಕೆ ನೀಡಿದೆ.

    ವಿಚಾರಣೆಯಲ್ಲಿ ಅರ್ಜಿದಾರರು ಮಿರ್ಲೆ ವರದರಾಜ್ ಮತ್ತು ಅವರ ಸಂಬಂಧಿ ಮಂಜುನಾಥ್ ಎಂಬವರು ಬಿಬಿಎಂಪಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ತಮ್ಮ ಜಮೀನು ಕಬಳಿಸಿದ್ದಾರೆ. ಈ ಸಂಬಂಧ ದಾಖಲೆಗಳೊಂದಿಗೆ ದೂರು ನೀಡಿದ್ದರೂ ಬಿಬಿಎಂಪಿ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂದು ಪೀಠದ ಗಮನಕ್ಕೆ ತಂದಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪೀಠವು ಬಿಬಿಎಂಪಿ ಅಧಿಕಾರಿಗಳು ಖಾಸಗಿ ವ್ಯಕ್ತಿಗಳೊಂದಿಗೆ ಕೈಜೋಡಿಸಿರುವ ಆರೋಪದ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಲು ಬಿಬಿಎಂಪಿ ಮುಖ್ಯ ಆಯುಕ್ತರು ಕ್ರಮ ವಹಿಸಬೇಕು ಎಂದು ನಿರ್ದೇಶಿಸಿದೆ.

    ಸರ್ಕಾರಿ ಅಧಿಕಾರಿಗಳು ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸಬೇಕು. ಎಲ್ಲರನ್ನೂ ಸಮಾನಾಗಿ ಪರಿಗಣಿಸಬೇಕು. ದೂರು ಬಂದ ತಕ್ಷಣ ಮತ್ತೊಬ್ಬರನ್ನು ತಾರತಮ್ಯದಿಂದ ನೋಡಬಾರದು, ಖಾಸಗಿ ವ್ಯಕ್ತಿಗಳ ಕೈಗೊಂಬೆಯಾಗಿ ಕಾರ್ಯನಿರ್ವಹಣೆ ಮಾಡಬಾರದು ಎಂದು ಇದೇ ವೇಳೆ ಪೀಠ ಸೂಚನೆ ನೀಡಿದೆ. ಪ್ರಕರಣದಲ್ಲಿ ಮಿರ್ಲೆ ವರದರಾಜು ಮತ್ತು ಮಂಜುನಾಥ್ ಎಂಬವರ ಪ್ರಸ್ತುತದ ಪ್ರಕರಣ ಆಸ್ತಿಯ ಮೇಲೆ ಹಕ್ಕು ಹೊಂದಿರಬಹುದು ಅಥವಾ ಇಲ್ಲದಿರಬಹುದು. ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಪರವಾಗಿ ಕೆಲಸ ಮಾಡುವುದು ಕಾನೂನಿಗೆ ವಿರುದ್ಧ ಎಂದು ಪೀಠ ತಿಳಿಸಿದೆ.

    ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿರುವ ಕಟ್ಟಡಗಳನ್ನು ನೆಲಸಮ ಮಾಡುವ ಬದಲು ಬಿಬಿಎಂಪಿ ಬೈಲಾ ಉಲ್ಲಂಘನೆಯಾಗಿದ್ದರೆ ಅದಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ದೇಶನ ನೀಡಬಹುದು. ಉಲ್ಲಂಘನೆ ಮಾಡಿರುವುದನ್ನು ಪರಿಗಣಿಸಿ ಅಂತಹ ಕಟ್ಟಡಗಳ ಸಕ್ರಮ ಮಾಡುವುದಕ್ಕೆ ಬೈಲಾದಲ್ಲಿ ಅವಕಾಶವಿದೆ. ಉಲ್ಲಂಘನೆ ಮಾಡಿದ ದಿನದಿಂದ ತೆರಿಗೆ ಮತ್ತು ದಂಡ ಪಾವತಿಸುವಂತೆ ಸೂಚನೆ ನೀಡಬಹುದು ಎಂದು ಪೀಠ ಆದೇಶದಲ್ಲಿ ಹೇಳಿದೆ.

     ರಾಜ್ಯ ಸರ್ಕಾರದಿಂದ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯಲ್ಲಿ ಬಿಎಚ್‌ಇಎಲ್ ಅಧೀನದ ರೆಮ್ಕೊ ಗೃಹ ನಿರ್ಮಾಣ ಸಹಕಾರ ಸಂಘ ಬಡಾವಣೆ ನಿರ್ಮಿಸಿ 1992ರಲ್ಲಿ ನಿವೇಶನಗಳನ್ನು ಸಿದ್ದಪಡಿಸಿ ಹಂಚಿಕೆ ಮಾಡಿತ್ತು. ಈ ನಡುವೆ ಕೆಲ ಭೂ ಮಾಲೀಕರು ಸ್ವಾಧೀನ ಪ್ರಕ್ರಿಯೆ ಕಾನೂನು ಬಾಹಿರ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಪೀಠವು ಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸಿತ್ತು. ಬಳಿಕ ಸೊಸೈಟಿಯು ಭೂ ಮಾಲೀಕರನ್ನು ಸಂಪರ್ಕಿಸಿ ಹೆಚ್ಚುವರಿಯಾಗಿ ಪರಿಹಾರ ನೀಡುವುದಾಗಿ ಚರ್ಚೆ ನಡೆಸಿತ್ತು. ಇದಕ್ಕೆ ಒಪ್ಪಿಗೆ ಸೂಚಿಸಿದ್ದ ಭೂ ಮಾಲೀಕರು ತಮ್ಮ ಜಮೀನನ್ನು ಸೊಸೈಟಿಗೆ ಬಿಟ್ಟುಕೊಟ್ಟಿದ್ದರು.

   ಈ ಬಡಾವಣೆಯಲ್ಲಿ ನಿವೇಶನ ಪಡೆದ ಬಳಿಕ ಸಂಘದಿಂದ ಮಾಲೀಕರು ಸ್ವಾಧೀನಾನುಭವ ಪತ್ರ ಪಡೆದುಕೊಂಡಿದ್ದರು. ಖಾತೆಯನ್ನೂ ತಮ್ಮ ಹೆಸರಿಗೆ ಮಾಡಿಕೊಂಡು ತೆರಿಗೆ ಪಾವತಿ ಮಾಡಿದ್ದರು. ಅಲ್ಲದೆ, ಒತ್ತುವರಿದಾರರಿಂದ ಈ ನಿವೇಶನಗಳನ್ನು ರಕ್ಷಣೆ ಮಾಡುವುದಕ್ಕಾಗಿ ಕಾಂಪೌಂಡ್‌ ಮತ್ತು ಶೆಡ್‌ ನಿರ್ಮಾಣ ಮಾಡಿಕೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap