ಬೆಂಗಳೂರು:
ಕನಿಷ್ಠ ವಿದ್ಯುತ್ ಬಳಸುವವರಿಗೆ ಹಾಗೂ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರೂ ಬಳಸದೆ ಬಿಲ್ ಪಡೆಯುತ್ತಿದ್ದವರಿಗೆ ಕೋರ್ಟ್ ರಿಲೀಫ್ ನೀಡಿದೆ. ವಿದ್ಯುತ್ ಕನಿಷ್ಠ ಶುಲ್ಕಗಳ ಮೇಲೆ ತೆರಿಗೆ ವಿಧಿಸುವಂತಿಲ್ಲ. ಬಳಸಿದ ವಿದ್ಯುತ್ ಶುಲ್ಕಕ್ಕೆ ಮಾತ್ರ ತೆರಿಗೆ ವಿಧಿಸಬಹುದು. ಬಳಸದ ವಿದ್ಯುತ್ಗೆ ಗ್ರಾಹಕರು ತೆರಿಗೆ ಕಟ್ಟಬೇಕಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಜೊತೆಗೆ ಕರ್ನಾಟಕ ವಿದ್ಯುತ್ ಕಾಯ್ದೆ ಸೆಕ್ಷನ್ 3 (1) ರ ತಿದ್ದುಪಡಿಯನ್ನು ನ್ಯಾ.ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಹೈಕೋರ್ಟ್ ಪೀಠ ರದ್ದುಪಡಿಸಿದೆ.
ಕರ್ನಾಟಕ ವಿದ್ಯುತ್ (ಬಳಕೆಯ ಮೇಲಿನ ತೆರಿಗೆ) ಕಾಯ್ದೆ 1959ರ ಸೆಕ್ಷನ್ 3 (1) ಗೆ 2003ರಲ್ಲಿ ಮತ್ತು 2004ರಲ್ಲಿ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿ ಮೂಲಕ ವಿದ್ಯುತ್ ಕನಿಷ್ಠ ಶುಲ್ಕಕ್ಕೆ ತೆರಿಗೆ ವಿಧಿಸಲಾಗಿದೆ. ಈ ತಿದ್ದುಪಡಿಯು ನಿಯಮದ ತದ್ವಿರುದ್ಧವಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಮೆಸಸ್ ಸೋನಾ ಸಿಂಥೆಟೆಕ್ ಕಂಪನಿ ಅರ್ಜಿ ಸಲ್ಲಿಸಿದ್ದವು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಪೀಠ, ಈಗಾಗಲೇ ಸಂಗ್ರಹಿಸಿರುವ ತೆರಿಗೆಯನ್ನು ಹಿಂದಿರುಗಿಸುವಂತೆ ನಿರ್ದೇಶನ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ. ಇದೇ ವೇಳೆ, ವಿದ್ಯುತ್ ಶುಲ್ಕದ ಮೇಲಿನ ತೆರಿಗೆ ವಿಧಿಸಿದ್ದ ತಿದ್ದುಪಡಿಯನ್ನು ಅಸಂವಿಧಾನಿಕ ಎಂದು ಘೋಷಿಸಿದೆ.
ವಿದ್ಯುತ್ ಕನಿಷ್ಠ ಶುಲ್ಕ ತೆರಿಗೆ ಅಂದರೆ ವಿದ್ಯುತ್ ಅನ್ನು ಬಳಸಿದರೂ ಅಥವಾ ಬಳಸದಿದ್ದರೂ, ಪ್ರತಿ ತಿಂಗಳು ವಿಧಿಸಲಾಗುವ ಕನಿಷ್ಠ ಮೊತ್ತದ ತೆರಿಗೆ. ನೀವು ವಿದ್ಯುತ್ ಬಳಸಿದಷ್ಟು, ಬಳಕೆಯ ಆಧಾರದ ಮೇಲೆ ಲೆಕ್ಕ ಹಾಕಿದ ಬಿಲ್ಲಿನ ಜೊತೆಗೆ ಈ ಕನಿಷ್ಠ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದು ವಿದ್ಯುತ್ ಸರಬರಾಜು ಕಂಪನಿಯು ವಿಧಿಸುವ ಶುಲ್ಕವಾಗಿದೆ.