ಪಿಎಸ್ಐ ನೇಮಕಾತಿ ಹಗರಣ : ವಿವರ ಸಲ್ಲಿಕೆಗೆ ಹೈಕೋರ್ಟ್‌ ಸೂಚನೆ

ಬೆಂಗಳೂರು:

      ಪಿಎಸ್ಐ ನೇಮಕಾತಿ ಹಗರಣದಲ್ಲಿ ಭಾಗಿಯಾದವರ ವಿವರ ನೀಡಿ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

     ಕರ್ನಾಟಕದಲ್ಲಿ ಪಿಎಸ್‌ಐ ನೇಮಕಾತಿ ಹಗರಣ ಭಾರೀ ಚರ್ಚೆಗೆ ಕಾರಣವಾಗಿದ್ದು, ಪಿಎಸ್‌ಐ ಅಕ್ರಮ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಹಾಲಿ ಅರ್ಜಿದಾರರಾಗಿರುವ 145 ಮಂದಿ ಪೈಕಿ ಎಷ್ಟು ಮಂದಿ ಹಗರಣದಲ್ಲಿ ಭಾಗಿಯಾಗಿದ್ದಾರೆ? ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

     ಪಿಎಸ್ಐ ಮರು ಪರೀಕ್ಷೆ ಆದೇಶ ರದ್ದು ಕೋರಿ ಕೋಲಾರದ ಚಂದನ್ ಎನ್.ವಿ. ವಸಂತ್ ನಾಯಕ್, ಆಶಾ ಸಣಕಲ್ಲ ಮತ್ತು ರಾಜೇಶ್ವರಿ ಸೇರಿದಂತೆ 145 ಮಂದಿ ಪ್ರತ್ಯೇಕವಾಗಿ ಸಲ್ಲಿಸಿರುವ ಒಟ್ಟು ಆರು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ಶಿವಶಂಕರ್‌ ಅಮರಣ್ಣವರ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಸಾಕಷ್ಟು ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗಿ, ನ್ಯಾಯಾಲಯದ ಮೆಟ್ಟಿಲೇರಿರುವ 145 ಮಂದಿ ಅರ್ಜಿದಾರ ಅಭ್ಯರ್ಥಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆಯೇ? ಎಂಬುದರ ಕುರಿತು ಜೂನ್ 15ರ ಒಳಗೆ ರಾಜ್ಯ ಸರ್ಕಾರ ವರದಿ ಸಲ್ಲಿಸಬೇಕು ಎಂದು ಆದೇಶಿಸಿ ವಿಚಾರಣೆಯನ್ನು ಮುಂದೂಡಿತು.
 
   ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರು ಅರ್ಜಿದಾರರು ಮುಗ್ಧರಾಗಿದ್ದು, ಹಗರಣದಲ್ಲಿ ಅವರ ಪಾತ್ರವಿಲ್ಲ. ಹೀಗಾಗಿ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟು ಅರ್ಜಿದಾರರಿಗೆ ನೇಮಕಾತಿ ಆದೇಶ ನೀಡಬೇಕು ಎಂದು ಮನವಿ ಮಾಡಿದರು. ರಾಜ್ಯ ಸರ್ಕಾರದ ಪರ ವಾದಿಸಿದ ಎಜಿ ಪ್ರಭುಲಿಂಗ ನಾವದಗಿ, “ಪಿಎಸ್‌ಐ ಹಗರಣದ ತನಿಖೆಯ ನೇತೃತ್ವ ವಹಿಸಿರುವ ಸಿಐಡಿ ಮುಖ್ಯಸ್ಥರಾದ ಸಂಧು ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ಹಗರಣದಲ್ಲಿ ಎರಡು ಬಗೆಯಿದ್ದು, ಬ್ಲೂಟೂತ್‌ ಬಳಕೆ ಮಾಡಿ ಹೊರಗಿನಿಂದ ಅಭ್ಯರ್ಥಿಗಳಿಗೆ ಉತ್ತರ ಹೇಳಿಕೊಟ್ಟಿರುವುದು ಒಂದು ಕಡೆಯಾದರೆ ನೇಮಕಾತಿ ವಿಭಾಗದಲ್ಲೇ ಓಎಂಆರ್‌ ಶೀಟ್‌ಗಳನ್ನು ತಿದ್ದಿರುವುದು ಇನ್ನೊಂದು ಭಾಗವಾಗಿದೆ.

 

     ಓಎಂಆರ್‌ ಶೀಟುಗಳಿಗೆ ಸಂಬಂಧಿಸಿದಂತೆ ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯದಿಂದ (ಎಫ್‌ಎಸ್‌ಎಲ್) ವರದಿ ಪಡೆಯಲಾಗಿದೆ. ಬ್ಲೂಟೂತ್‌ ಬಳಕೆ ಮಾಡಿ ನಕಲು ಮಾಡಿರುವುದರ ಕುರಿತು ತನಿಖೆ ನಡೆಯುತ್ತಿದೆ. ಮೊದಲಿಗೆ ಹಗರಣದಲ್ಲಿ 8 ಮಂದಿ ಮಾತ್ರ ಭಾಗಿಯಾಗಿದ್ದಾರೆ ಎನ್ನಲಾಗಿತ್ತು. ಆನಂತರ ಇದು 23ಕ್ಕೆ ಏರಿಕೆಯಾಗಿತ್ತು” ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap