ಜನನ-ಮರಣಗಳ ನೋಂದಣಿ : ನೂತನ ನಿಯಮ ರದ್ದು ಮಾಡಿದ ಹೈಕೋರ್ಟ್

ಬೆಂಗಳೂರು

     ಜನನ-ಮರಣಗಳ ನೋಂದಣಿಗೆ ಸಂಬಂಧಿಸಿದಂತೆ ವ್ಯಾಜ್ಯಗಳ ಕುರಿತು ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿ ವರ್ಗಾಯಿಸಿದ್ದ ನಿಯಮಗಳನ್ನು ಕರ್ನಾಟಕ ಹೈಕೋರ್ಟ್ ಅಸಂವಿಧಾನಿಕ ಎಂದು ಸಾರಿದೆ.

     ಅಷ್ಟೇ ಅಲ್ಲದೇ, ಸರ್ಕಾರ ಜಾರಿಗೊಳಿಸಿದ್ದ ಕರ್ನಾಟಕ ಜನನ ಮರಣಗಳ ನೋಂದಣಿ (ತಿದ್ದುಪಡಿ) ಅಧಿನಿಯಮಗಳು-2022 ಅನ್ನು ರದ್ದುಪಡಿಸಿ ಮಹತ್ವದ ಆದೇಶ ನೀಡಿದೆ. ಇದರಿಂದಾಗಿ ಈ ಮೊದಲಿದ್ದ ವ್ಯವಸ್ಥೆಯಂತೆ ಜನನ-ಮರಣಗಳ ನೋಂದಣಿಗೆ ಸಂಬಂಧಿಸಿದಂತೆ ವ್ಯಾಜ್ಯಗಳ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳುವ ಅಧಿಕಾರ ಜೆಎಂಫ್‌ಸಿ ಕೋರ್ಟ್‌ಗೆ ಮರಳಲಿದೆ.

     ಬೀದರ್ ವಕೀಲರ ಸಂಘದ ಅಧ್ಯಕ್ಷ ಸುದರ್ಶನ ವಿ. ಬಿರಾದರ್ ಕರ್ನಾಟಕ ಜನನ ಮತ್ತು ಮರಣ (ತಿದ್ದುಪಡಿ) ಅಧಿನಿಯಮಗಳು-2022 ಜಾರಿಗೆ 2022ರ ಜು.18ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
     ವಿಚಾರಣೆ ವೇಳೆ ಅರ್ಜಿದಾರರ ಪರ ಮಂಡಿಸಿದ್ದ ಹಿರಿಯ ವಕೀಲ ಪಿ.ಪಿ. ಹೆಗ್ಡೆ, ಕೇಂದ್ರ ಸರ್ಕಾರದ ಜನನ ಮತ್ತು ಮರಣ ಕಾಯ್ದೆಗೆ ವಿರುದ್ಧವಾಗಿ ನಿಯಮಕ್ಕೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರ ನ್ಯಾಯಾಲಯಗಳ ಅಧಿಕಾರ ಮೊಟಕುಗೊಳಿಸಿ ಉಪವಿಭಾಗಾಧಿಕಾರಿಗಳಿಗೆ ನೀಡಿದೆ. ಇದು ಕಾನೂನುಬಾಹಿರ ಕ್ರಮ.
 
      ಮೂಲ ಕಾಯ್ದೆಯ ಪ್ರಕಾರ, ಜನನ ಮತ್ತು ಮರಣ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಅಧಿಕಾರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಮಾತ್ರವಿದೆ. ಈ ರೀತಿ ತಿದ್ದುಪಡಿ ನಿಯಮ ಜಾರಿಗೆ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ವಾದ ಮಂಡಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap