ಬೆಂಗಳೂರು:
ನೋಂದಣಿ ಮಾಡಿಸದ ಕಟ್ಟಡ ಮಾಲೀಕರು ಪ್ರತಿ ವರ್ಷ ಬಾಡಿಗೆ ದರ ಹೆಚ್ಚಳ ಮಾಡಲು ಅವಕಾಶ ಇರುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಬೆಂಗಳೂರಿನ ಶ್ರೀನಿವಾಸ ಎಂಟರ್ಪ್ರೈಸಸ್ ಗೆ ಸೇರಿದ ಜಾಗವನ್ನು ಕೇರಳ ಮೂಲದ ನೆಡುಗುಂಡಿ ಬ್ಯಾಂಕಿಗೆ ಪ್ರತಿ ತಿಂಗಳು 13,574 ರೂಪಾಯಿ ಬಾಡಿಗೆ ಮತ್ತು 81,444 ರೂಪಾಯಿ ಅಡ್ವಾನ್ಸ್ ಠೇವಣಿಗೆ ಒಪ್ಪಂದ ಮಾಡಿಕೊಂಡು 1998ರಲ್ಲಿ 5 ವರ್ಷ ಅವಧಿಗೆ ಬಾಡಿಗೆ ನೀಡಲಾಗಿತ್ತು.
ಆ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ವಿಲೀನವಾಗಿದ್ದು, ಒಪ್ಪಂದದಂತೆ ಪ್ರತಿ ಮೂರು ವರ್ಷಕ್ಕೆ ಶೇಕಡ 20ರಷ್ಟು ಬಾಡಿಗೆ ಹೆಚ್ಚಳ ಮತ್ತು ಹೆಚ್ಚುವರಿ ಮುಂಗಡ ಪಾವತಿಗೆ ಅವಕಾಶ ಇತ್ತು. 2002ರಲ್ಲಿ ಮತ್ತೆ ಐದು ವರ್ಷಕ್ಕೆ ಅಗ್ರಿಮೆಂಟ್ ನವೀಕರಣ ಮಾಡಿಕೊಳ್ಳಲಾಗಿದೆ.
ಶ್ರೀನಿವಾಸ ಎಂಟರ್ಪ್ರೈಸಸ್ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿ ಒಪ್ಪಂದದಂತೆ ಬಾಡಿಗೆ ಹೆಚ್ಚಳದ ಬಾಕಿ ನೀಡುತ್ತಿಲ್ಲ. ಬಾಕಿ ನೀಡಲು ನಿರ್ದೇಶನ ನೀಡಬೇಕೆಂದು ಕೋರಿತ್ತು. ಆದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಾಡಿಗೆ ಕರಾರು ಒಪ್ಪಂದ ನೋಂದಣಿ ಆಗಿಲ್ಲ. ಹೀಗಾಗಿ ಬಾಡಿಗೆ ದರ ಹೆಚ್ಚಳ ಮಾಡಲಾಗದು ಎಂದು ವಾದಿಸಿತು. ಆದರೆ, ಸಿವಿಲ್ ಕೋರ್ಟ್ 2018 ರಲ್ಲಿ 5.19 ಲಕ್ಷ ರೂಪಾಯಿ ಪಾವತಿಸುವಂತೆ ಬ್ಯಾಂಕಿಗೆ ಆದೇಶ ನೀಡಿದ್ದು, ಅದನ್ನು ಹೈಕೋರ್ಟ್ ನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಶ್ನಿಸಿತ್ತು.
ವಸತಿ, ವಾಣಿಜ್ಯ ಕಟ್ಟಡಗಳ ಮಾಲೀಕರು ಬಾಡಿಗೆಗೆ ನೀಡುವ ಮನೆ, ಮಳಿಗೆಗಳಿಗೆ ಸಂಬಂಧಿಸಿದ ಕರಾರು ಪತ್ರವನ್ನು ಸ್ಟಾಂಪ್ ಪೇಪರ್ ನಲ್ಲಿ ಮುದ್ರಿಸಿ ಸಹಿ ಮಾಡಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನೋಂದಣಿ ಮಾಡಿಸಬೇಕಿದೆ. ಆದರೆ, ಹೆಚ್ಚಿನವರು ನೋಂದಣಿ ಮಾಡಿಸುವುದಿಲ್ಲ. ಕರ್ನಾಟಕ ರೆಂಟ್ ಆಕ್ಟ್ 1999 ರ ಪ್ರಕಾರ ಬಾಡಿಗೆ ಉದ್ದೇಶದಿಂದ ಯಾವುದೇ ಸ್ಥಳ ನೀಡಿ ಕರಾರು ಮಾಡಿಕೊಂಡರೂ ಅದು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮುದ್ರಾಂಕ ಶುಲ್ಕ ಪಾವತಿಸಿ ನೋಂದಣಿ ಮಾಡಿಸಿಕೊಳ್ಳಬೇಕು.
ಇಲ್ಲದಿದ್ದಲ್ಲಿ ಅದು ಊರ್ಜಿತವಾಗುವುದಿಲ್ಲ. ಕಾನೂನಿನಲ್ಲಿ ಅದಕ್ಕೆ ಮಾನ್ಯತೆಯೂ ಇರುವುದಿಲ್ಲ. ಆದರೆ ಬಾಡಿಗೆ ಮನೆಯವರನ್ನು ತೆರವುಗೊಳಿಸಲು ನೋಂದಣಿಯಾಗದ ಒಪ್ಪಂದ ಪತ್ರವನ್ನು ಮೇಲಾಧಾರವಾಗಿ ಬಳಸಬಹುದಾಗಿದೆ.