ಮಹತ್ವದ ಆದೇಶ ನೀಡಿದ ಹೈಕೋರ್ಟ್….!

ಬೆಂಗಳೂರು: 

    ವೇಶ್ಯಾವಾಟಿಕೆ ಸಂತ್ರಸ್ತೆಯನ್ನು ಶಿಕ್ಷಿಸಲು ಯಾವುದೇ ಕಾನೂನು ಇಲ್ಲ. ಮಹಿಳೆಯನ್ನು ಸಂತ್ರಸ್ತೆ ಮಾಡಿದವರು ಮಾತ್ರವೇ ಶಿಕ್ಷೆಗೆ ಅರ್ಹರು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

    ವೇಶ್ಯಾವಾಟಿಕೆ ಸಂತ್ರಸ್ತೆಯನ್ನು ಅಭಿಯೋಜನೆಗೆ ಗುರಿಪಡಿಸುವುದು ಕಾನೂನು ಪ್ರಕ್ರಿಯೆ ದುರುಉಪಯೋಗ ಮತ್ತು ಅನ್ಯಾಯಕ್ಕೆ ಕಾರಣವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.

    ವೇಶ್ಯಾವಾಟಿಕೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ವಿಚಾರಣಾ ನ್ಯಾಯಾಲಯ ನಡೆಸುತ್ತಿರುವ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಚಿಕ್ಕಮಗಳೂರಿನ ಮಹಿಳೆ ಸಲ್ಲಿಸಿದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ. ಜೊತೆಗೆ ಅರ್ಜಿದಾರರ ವಿರುದ್ಧ ಕುಂದಾಪುರ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆಯನ್ನು ರದ್ದುಪಡಿಸಿದೆ.

    ವೇಶ್ಯಾವಾಟಿಕೆ ಆರೋಪ ಸಂಬಂಧ ಮಹಿಳೆ ವಿರುದ್ಧ ಮಾನವ ಕಳ್ಳ ಸಾಗಾಣೆ ತಡೆ ಅಡಿಯಲ್ಲಿ ವಿಚಾರಣಾ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿದೆ. ಆದರೆ, ಅರ್ಜಿದಾರರೇ ವೇಶ್ಯಾವಾಟಿಕೆ ಸಂತ್ರಸ್ತೆ ಆಗಿದ್ದಾರೆ. ಸಂತ್ರಸ್ತ ಮಹಿಳೆಯನ್ನು ಶಿಕ್ಷಿಸಬೇಕು ಎಂದು ಕಾಯ್ದೆಯ ಸೆಕ್ಷನ್ 5ರಲ್ಲಿ ಎಲ್ಲಿಯೂ ಹೇಳಿಲ್ಲ. ಆಕೆಯ ವಿರುದ್ಧ ಮುಂದಿನ ವಿಚಾರಣೆಗೆ ಅನುಮತಿ ನೀಡುವುದು ಕಾನೂನು ಪ್ರಕ್ರಿಯೆ ದುರ್ಬಳಕೆಯಾಗುತ್ತದೆ ಎಂದು ನ್ಯಾಯ ಪೀಠ ಆದೇಶದಲ್ಲಿ ತಿಳಿಸಿದೆ.

   ವೇಶ್ಯಾವಾಟಿಕೆ ಉದ್ದೇಶದಿಂದ ಒಬ್ಬ ಮಹಿಳೆ ಅಥವಾ ಹುಡುಗಿಯನ್ನು ಖರೀದಿಸಿದ ಅಥವಾ ಖರೀದಿಗೆ ಯತ್ನಿಸಿದ ಅಥವಾ ವೇಶ್ಯಾವಾಟಿಕೆಯಲ್ಲಿ ತೊಡಗಲು ಪ್ರೇರೇಪಿಸಿದ ವ್ಯಕ್ತಿ ವೇಶ್ಯಾವಾಟಿಕೆ ಪ್ರಕರಣದಡಿ ಶಿಕ್ಷಾರ್ಹನಾಗುತ್ತಾನೆ ಎಂದು ಹೇಳಲಾಗಿದೆ.

2013ರ ಜನವರಿ 13ರಂದು ಕುಂದಾಪುರ ಠಾಣಾ ಪೊಲೀಸರು ವೇಶ್ಯಾವಾಟಿಕೆಯಲ್ಲಿ ತೊಡಗಿಸಲು ಕೆಲವು ಹುಡುಗಿಯರನ್ನು ಉಡುಪಿಯಿಂದ ಗೋವಾಗೆ ವಾಹನದಲ್ಲಿ ಅರ್ಜಿದಾರೆ ಹಾಗೂ ಹುಡುಗಿಯರನ್ನು ಕರೆದುಕೊಂಡು ಹೋಗುವಾಗ ತಡೆದು ಪರಿಶೀಲಿಸಿದ್ದರು. ಅರ್ಜಿದಾರೆ ಸೇರಿದಂತೆ ಇತರೆ ಹುಡುಗಿಯರಿಗೆ ತಲಾ 10,000 ರೂ ನೀಡಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಲು ಕರೆದುಕೊಂಡು ಹೋಗುತ್ತಿರುವುದು ತಿಳಿದು ಬಂದಿತ್ತು.

ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಅರ್ಜಿದಾರರನ್ನು ಎಂಟನೇ ಆರೋಪಿಯನ್ನಾಗಿ ಮಾಡಿ ಮಾನವ ಕಳಸಾಗಣೆ ಕಾಯ್ದೆ ಅಡಿಯಲ್ಲಿ ಅರ್ಜಿದಾರರೆ ವಿರುದ್ಧ ಕುಂದಾಪುರ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ಪ್ರಕರಣ ರದ್ದು ಕೋರಿ ಅರ್ಜಿದಾರ ಮಹಿಳೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link