ಬೆಂಗಳೂರು:
ರಾಜ್ಯದಲ್ಲಿ ಬಹಳವಾಗಿ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್ ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಶ್ರೀಧರ್ ಕೆ. ಪೂಜಾರ್ ಅವರನ್ನು ಮುಂದಿನ ವಿಚಾರಣೆಯರೆಗೆ ಬಂಧಿಸದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಪೊಲೀಸ್ ಅಧಿಕಾರಿ ಶ್ರೀಧರ್ ಕೆ. ಪೂಜಾರ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ಅವರು “ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹೊಸದಾಗಿ ನಿರೀಕ್ಷಣಾ ಜಾಮೀನು ಕೋರಲಾಗಿದೆ. ಈ ಹಿಂದೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್ ಸೂಚನೆಯಂತೆ ತನಿಖಾಧಿಕಾರಿಯ ಮುಂದೆ ಪೂಜಾರ್ ವಿಚಾರಣೆಗೆ ಒಳಪಟ್ಟಿದ್ದರು. ಈ ಸಂದರ್ಭದಲ್ಲಿ ಪೂಜಾರ್ ಅವರ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮತ್ತು ಪೆನ್‌ಡ್ರೈವ್ ಅನ್ನು ಜಪ್ತಿ ಮಾಡಲಾಗಿದೆ. ಈಗ ಅಹಂಕಾರವನ್ನು ತೃಪ್ತಿಪಡಿಸಿಕೊಳ್ಳಲು ಪೂಜಾರ್ ಅವರನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ” ಎಂದು ಆಕ್ಷೇಪಿಸಿದರು.
ಶ್ರೀಕಿಯು ತನ್ನ ಸ್ನೇಹಿತರನ್ನು ಸಂಧಿಸಲು ಅವಕಾಶ ಮಾಡಿಕೊಟ್ಟಿರುವುದು ಮತ್ತು ಶ್ರೀಕಿ ಇತರರನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿರುವ ಆರೋಪ ಪೂಜಾರ್ ಮೇಲಿದೆ. ಈ ಹಿಂದೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್ ಆದೇಶದಂತೆ ಮೂರು ಬಾರಿ ತನಿಖಾಧಿಕಾರಿಯ ಮುಂದೆ ಪೂಜಾರ್ ಹಾಜರಾಗಿದ್ದು, ತನಿಖಾಧಿಕಾರಿ ಹಿಂಬರಹ ನೀಡಿದ್ದಾರೆ. ಪೂಜಾರ್ ತನಿಖಾಧಿಕಾರಿಯ ಮುಂದೆ ಹಾಜರಾಗಲು ಸಿದ್ಧರಿದ್ದಾರೆ. ಆದರೆ, ಅವರ ಹಿತಾಸಕ್ತಿ ಕಾಪಾಡಬೇಕು. ಪೂಜಾರ್ ಅವರು ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಯಾಗಿದ್ದು, ಹಲವು ಪ್ರಕರಣಗಳಲ್ಲಿ ತನಿಖಾಧಿಕಾರಿಯಾಗಿದ್ದಾರೆ. ಒಂದೊಮ್ಮೆ ಪೂಜಾರ್ ಬಂಧನವಾದರೆ ಪ್ರತಿವಾದಿಗಳು ಪೂಜಾರ್ ಬಂಧನದ ವಿಚಾರವನ್ನು ಪ್ರಸ್ತಾಪಿಸಬಹುದು. ಅವರ ಇಡೀ ಸೇವೆಯು ಕಳಂಕಿತವಾಗಲಿದೆ ಎಂದರು.
ಮುಂದುವರೆದು, ಪೂಜಾರ್ ತನಿಖೆಯಲ್ಲಿ ಭಾಗಿಯಾಗಲಿದ್ದಾರೆ. ಹಿಂದಿನ ಹೈಕೋರ್ಟ್ ಆದೇಶದಲ್ಲಿ ಪೂಜಾರ್ ಸಲ್ಲಿಸುವ ಜಾಮೀನು ಅರ್ಜಿಗೆ ಪ್ರಾಸಿಕ್ಯೂಷನ್ ವಿರೋಧಿಸಬಾರದು ಎಂದು ಷರತ್ತು ವಿಧಿಸಲಾಗಿತ್ತು. ಇದಕ್ಕೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೂಜಾರ್‌ಗೆ ಹೊಸದಾಗಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಬಹುದು ಎಂದಿತ್ತು. ಅದರಂತೆ ಹೊಸದಾಗಿ ನಿರೀಕ್ಷಣಾ ಜಾಮೀನು ಕೋರಲಾಗಿದೆ. ಒಂದೊಮ್ಮೆ ಪೂಜಾರ್ ಬಂಧನವಾದರೆ ಅವರ ಇಡೀ ವೃತ್ತಿ ಬದುಕು ನಾಶವಾಗಲಿದೆ ಎಂದರು.
ರಾಜ್ಯ ಸರ್ಕಾರವಾಗಿ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು ಈ ಪ್ರಕರಣದಲ್ಲಿ ಕೆಲವು ಪರಿಕರಗಳನ್ನು ಜಪ್ತಿ ಮಾಡಬೇಕಿದೆ. ಬಿಟ್ ಕಾಯಿನ್ ಹಗರಣದ ರೂವಾರಿ ಶ್ರೀಕಾಂತ್ ಅಲಿಯಾಸ್ ಶ್ರೀಕಿ ಭಾಗಿಯಾಗಿರುವ ಪ್ರಕರಣದಲ್ಲಿ ಆತನನ್ನು ಕೆಲವು ಲೈವ್ ಸರ್ವರ್‌ಗಳನ್ನು ಹ್ಯಾಕ್ ಮಾಡಲು ಬಳಸಲಾಗಿದೆ. ಅಲ್ಲಿಂದ ಬಿಟ್‌ಕಾಯಿನ್‌ಗಳನ್ನು ಕದಿಯಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಸಾವಿರಾರೂ ಕೋಟಿ ರೂಪಾಯಿ ಮೌಲ್ಯದ ಹಗರಣವಾಗಿದೆ. ಇದಕ್ಕೆ ವಿಸ್ತೃತವಾದ ಆಕ್ಷೇಪಣೆ ಸಲ್ಲಿಸಬೇಕಿದೆ ಎಂದರು.
ಮೇ 2ರಂದು ಹೈಕೋರ್ಟ್‌ನ ಏಕಸದಸ್ಯ ಪೀಠವು ಪೂಜಾರ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಇದನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಪ್ರಕರಣದಲ್ಲಿ ಕೆಲವು ಪರಿಕರಗಳನ್ನು ಜಪ್ತಿ ಮಾಡಬೇಕಿದೆ. ಪೂಜಾರ್ ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಿ, ಇಡೀ ತನಿಖೆಯನ್ನು ದಾರಿ ತಪ್ಪಿಸಿದ್ದಾರೆ. ತನಿಖೆ ಹಳಿ ತಪ್ಪಿದೆ. ಅವರಿಗೆ ಮಧ್ಯಂತರ ರಕ್ಷಣೆ ನೀಡುವುದು ಸೂಕ್ತವಲ್ಲ. ವಾಟ್ಸಾಪ್ ಸಂವಹನ ಪತ್ತೆಯಾದ ಮೇಲೆ ಶ್ರೀಧರ್ ಪೂಜಾರ್ ಮತ್ತು ಇತರೆ ಅಧಿಕಾರಿಗಳು ಎಸಗಿರುವ ಅಪರಾಧ ಬಹಿರಂಗವಾಗಿದೆ. ಪ್ರಕರಣ ನಡೆದ ಸಂದರ್ಭದಲ್ಲಿ ಒಂದು ಬಿಟ್ ಕಾಯಿನ್ ಮೌಲ್ಯ 40 ಲಕ್ಷ ರೂಪಾಯಿ ಇತ್ತು. ಈಗ ಅದು 50 ಲಕ್ಷಕ್ಕೆ ಏರಿಕೆಯಾಗಿದೆ ಎಂದು ವಿರೋಧಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ನಿಮ್ಮ (ಪ್ರಾಸಿಕ್ಯೂಷನ್) ವಾದ ಸಿದ್ಧವಾಗಿದ್ದರೆ, ಅದನ್ನು ಆಕ್ಷೇಪಣೆಯ ಮೂಲಕ ಸಲ್ಲಿಸಿ. ಅಲ್ಲಿಯವರೆಗೆ ಪೂಜಾರ್ ಅವರನ್ನು ಹಿಡಿಯುವ ಪ್ರಯತ್ನ ಮಾಡಬಾರದು. ಮುಂದಿನ ವಿಚಾರಣೆವರೆಗೆ ಪೂಜಾರ್ ಅವರನ್ನು ಬಂಧಿಸಬಾರದು ಎಂದು ಆದೇಶಿಸಿತು. ವಿಚಾರಣೆಯನ್ನು ಮಂಗಳವಾರಕ್ಕೆ (ಜೂನ್ 11) ಮುಂದೂಡಿತು.
ಡಾರ್ಕ್‌ನೆಟ್ ಮೂಲಕ ಮಾದಕ ವಸ್ತು ಖರೀದಿಸಿದ ಆರೋಪದ ಮೇಲೆ 2020ರ ನವೆಂಬರ್‌ನಲ್ಲಿ ಶ್ರೀಕಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆಗ ಸಿಸಿಬಿಯಲ್ಲಿ ಪೂಜಾರ್ ತನಿಖಾಧಿಕಾರಿಯಾಗಿದ್ದರು. ಶ್ರೀಕಿ ಬಂಧನದೊಂದಿಗೆ ಕರ್ನಾಟಕದಲ್ಲಿ ಸೈಬರ್ ಅಪರಾಧಗಳು ಬೆಳಕಿಗೆ ಬಂದಿದ್ದವು. ಇದರಲ್ಲಿ 2019ರ ಜುಲೈ-ಆಗಸ್ಟ್ ಅವಧಿಯಲ್ಲಿ ಕರ್ನಾಟಕ ಸರ್ಕಾರದ ಇ-ಆಡಳಿತ ಘಟಕದ 11.5 ಕೋಟಿ ರೂಪಾಯಿ ದೋಚಿದ್ದ ಪ್ರಕರಣವು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ 10ನೇ ಆರೋಪಿಯಾದ ಶ್ರೀಕಿಯನ್ನು 14.11.2020 ರಿಂದ 17.11.2020 ಹಾಗೂ 12ನೇ ಆರೋಪಿ ರಾಹುಲ್ ಖಂಡೇಲವಾಲಾ ಅವರನ್ನು 14.11.2020 ರಿಂದ 31.11.2020ರವರೆಗೆ ಅಕ್ರಮವಾಗಿ ವಶದಲ್ಲಿಟ್ಟುಕೊಂಡು ಬಿಟ್ ಕಾಯಿನ್ ವರ್ಗಾವಣೆ, ಪಾಸ್‌ವರ್ಡ್ ಬದಲಾವಣೆ ಇತ್ಯಾದಿ ಕೃತ್ಯಕ್ಕೆ ಬಳಕೆ ಮಾಡಿದ ಆರೋಪ ಪೂಜಾರ್ ಮತ್ತಿತರರ ವಿರುದ್ದ ಇದೆ. ಈ ಸಂಬಂಧ ಸೈಬರ್ ಕ್ರೈಮ್ ಪೊಲೀಸರು ಐಪಿಸಿ ಸೆಕ್ಷನ್‌ಗಳಾದ 343, 344, 409, 426, 34, 36, 37, 201, 204 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66, 84ಸಿ ಅಡಿ ಪ್ರಕರಣ ದಾಖಲಿಸಿದ್ದಾರೆ.
ಆನಂತರ, ಈ ಪ್ರಕರಣದಲ್ಲಿ ಪೂಜಾರ್ ಅವರನ್ನು ಬಂಧಿಸಲು ತೆರಳಿದ್ದಾಗ ತನಿಖಾಧಿಕಾರಿಗಳ ಮೇಲೆ ಕಾರು ಹರಿಸಲು ಮುಂದಾದ ಆರೋಪದ ಮೇಲೆ ಐಪಿಸಿ ಸೆಕ್ಷನ್‌ಗಳಾದ 506, 504, 307, 332, 353ರ ಅಡಿ ಪ್ರಕರಣ ದಾಖಲಿಸಲಾಗಿದೆ. ಅದಾಗ್ಯೂ, ಪೂಜಾರ್ ತನಿಖಾಧಿಕಾರಿಗಳಿಂದ ತಲೆಮರಿಸಿಕೊಂಡಿದ್ದರಿಂದ ಅವರ ವಿರುದ್ಧ ಘೋಷಿತ ಆರೋಪಿ ಆದೇಶವನ್ನು ವಿಚಾರಣಾಧೀನ ನ್ಯಾಯಾಲಯ ಹೊರಡಿಸಿತ್ತು.