ಡಾಂಬರು ಮಿಶ್ರಣ ಘಟಕದಿಂದ ಪರಿಸರ ಮಾಲಿನ್ಯ : ಕೆಎಸ್‌ಪಿಸಿಬಿಗೆ ಹೈಕೋರ್ಟ್‌ ನೋಟೀಸ್‌

ಬೆಂಗಳೂರು:

    ಕೋಲಾರ ತಾಲ್ಲೂಕಿನ ಮೇಡಿಹಾಳದ ಬಳಿ ಸ್ಥಾಪಿಸಲಾಗಿರುವ ಡಾಂಬರು ಮಿಶ್ರಣ ಘಟಕದಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ದೂರಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

    ಧನಮಂತನಹಳ್ಳಿಯ ಕೆ ಮಂಜುನಾಥ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.

    ಪ್ರಕರಣದ ‌ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದ ಪೀಠವು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 1ಕ್ಕೆ ಮುಂದೂಡಿದೆ. ಅರ್ಜಿದಾರರ ಪರ ನರೇಶ್‌ ಸಂತೋಷ್‌ ವಾದ ಮಂಡಿಸಿದರು.

    ಕೋಲಾರ ತಾಲ್ಲೂಕಿನ ಮೇಡಿಹಾಳದ ಸರ್ವೇ ನಂಬರ್‌ 59 ರಲ್ಲಿ ಮೆಸರ್ಸ್‌ ಪ್ರಶಾಂತ್‌ ಕ್ರಶರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಸ್ಥಾಪಿಸಿರುವ ಹಾಟ್‌ ಮಿಕ್ಸ್‌ ಘಟಕದಿಂದ ಭಾರಿ ಮಾಲಿನ್ಯವಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

    ಈ ಘಟಕದಿಂದಾಗಿ ಸುತ್ತಮುತ್ತಲ ಗ್ರಾಮಸ್ಥರು ಮತ್ತು ಸನಿಹದಲ್ಲೇ ಇರುವ ಶಾಲಾ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಕೃಷಿ ಬೆಳೆಗಳು ಹಾಳಾಗುತ್ತಿವೆ. ಈ ಬಗ್ಗೆ ಸ್ಥಳೀಯ ಶಾಲಾ ಮುಖ್ಯ ಶಿಕ್ಷಕರು ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆದಿದ್ದಾರೆ. ಆದರೆ, ಮಂಡಳಿ ಘಟಕಕ್ಕೆ ನೋಟಿಸ್‌ ನೀಡಿ ಮೌನವಾಗಿದೆಯೇ ಹೊರತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

Recent Articles

spot_img

Related Stories

Share via
Copy link
Powered by Social Snap