ಅಕ್ರಮ ಮದರಸಾ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್‌ ನೋಟೀಸ್‌

ಮಂಡ್ಯ: 

     ಶ್ರೀರಂಗಪಟ್ಟಣ ತಾಲೂಕಿನ ಐತಿಹಾಸಿಕ ಜುಮ್ಮಾ ಮಸೀದಿಯ ಆವರಣದಲ್ಲಿ ಅಕ್ರಮವಾಗಿ ಮದರಸಾ ನಡೆಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.

    ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹೊಸ ಕಬ್ಬಾಳು ಗ್ರಾಮದ ಅಭಿಷೇಕ್‌ ಗೌಡ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತು.

    ಪೀಠವು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಮಹಾನಿರ್ದೇಶಕರು (ಎಎಸ್‌ಐ), ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಮತ್ತು ಕರ್ನಾಟಕದ ಮಂಡ್ಯ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

     ಶ್ರೀರಂಗಪಟ್ಟಣವು ಐತಿಹಾಸಿಕ ಮತ್ತು ಪ್ರವಾಸಿ ತಾಣವಾಗಿದ್ದು, ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ನಿರ್ಮಿಸಲಾದ ಶ್ರೀರಂಗಪಟ್ಟಣದ ಜುಮ್ಮಾ ಮಸೀದಿಯನ್ನು ಐತಿಹಾಸಿಕ ಮತ್ತು ಪುರಾತನ ಸ್ಮಾರಕವೆಂದು ಘೋಷಿಸಲಾಗಿದೆ, ಇದನ್ನು ಎಎಸ್‌ಐ ರಕ್ಷಿಸಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

     ಆದರೆ, ಐತಿಹಾಸಿಕ ಮಸೀದಿಯ ಆವರಣದಲ್ಲಿ ಮದರಸಾ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಅರ್ಜಿಯ ಪ್ರಕಾರ, ಅಲ್ಲಿ 50 ರಿಂದ 60 ಮಕ್ಕಳಿಗೆ ವಸತಿ ಮತ್ತು ಆಹಾರದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಮಕ್ಕಳನ್ನು ಪ್ರಾರ್ಥನೆಗೆ ಸಮೀಪದ ಮಸೀದಿಗೆ ಕರೆದೊಯ್ಯುವುದರಿಂದ ಕಾಂಪೌಂಡ್‌ ಕುಸಿದಿದೆ. ಇದಕ್ಕೆ ಬಾಗಿಲು ಅಳವಡಿಸಲಾಗಿದೆ.

     ಹೆಚ್ಚುವರಿಯಾಗಿ, ಶೌಚಾಲಯಗಳು, ಸ್ನಾನಗೃಹಗಳು, ಅತಿಥಿ ಗೃಹ ಮತ್ತು ಅಡುಗೆಮನೆ ನಿರ್ಮಿಸಲಾಗಿದೆ ಮತ್ತು ಒದ್ದೆಯಾದ ಬಟ್ಟೆಗಳನ್ನು ಆವರಣದಲ್ಲಿ ಒಣಗಲು ಬಿಡಲಾಗಿದೆ. ಈ ಚಟುವಟಿಕೆಗಳು 1958 ರ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಕಾಯಿದೆಯ ಸೆಕ್ಷನ್ 7, 8 ಮತ್ತು 16ರ ನಿಯಮ ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

     ಈ ಉಲ್ಲಂಘನೆಗಳ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮತ್ತು ಎಎಸ್‌ಐಗೆ ತಿಳಿದಿದೆ ಎಂದು ಅರ್ಜಿದಾರರು ಹೇಳಿದ್ದಾರೆ.  2020ರ ಮೇ 20 ರಂದು ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ಅತಿಕ್ರಮಣ ಮತ್ತು ಉಲ್ಲಂಘನೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಲಾಗಿದೆ. ಕೂಡಲೇ ಮದರಸಾವನ್ನು ಆವರಣದಿಂದ ಬಿಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

     ಪುರಾತನ ಸ್ಮಾರಕವಾಗಿ ಮಸೀದಿಯನ್ನು ಸಂರಕ್ಷಿಸಬೇಕೆಂದು, ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡಬೇಕೆಂದು ಕೋರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap