ಶಾಸಕರ ಅಧ್ಯಕ್ಷತೆಯಲ್ಲಿ ಹೈವೆ ಅಧಿಕಾರಿಗಳ ಸಭೆ

ಹುಳಿಯಾರು:

    ಹುಳಿಯಾರು ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 234 ಕ್ಕೆ ಸಂಬಂಧಿಸಿದಂತೆ ರಸ್ತೆ ವಿಸ್ತರಣೆಗೆ ಅನುಸರಿಸಬೇಕಾದ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆಂದು ಸಾರ್ವಜನಿಕರು ಆರೋಪಿಸಿ ಕಾಮಗಾರಿ ತಡೆದ ಹಿನ್ನೆಲೆಯಲ್ಲಿ ಗುರುವಾರ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಹೈವೆ ಅಧಿಕಾರಿಗಳಾದ ಇಇ ಮಹದೇವಯ್ಯ, ಎಇಇ ಹರೀಶ್, ಗುತ್ತಿಗೆದಾರ ರೆಡ್ಡಿ ಮತ್ತು ಸಾರ್ವಜನಿಕರ ಸಭೆ ನಡೆಸಲಾಯಿತು.

     ಈ ಸಭೆಯಲ್ಲಿ ಸಾರ್ವಜನಿಕರು ಅಧಿಕಾರಿಗಳ ಮೇಲೆ ಆರೋಪದ ಸುರಿಮಳೆಗೆರೆದರು. ಪ್ರಾಜೆಕ್ಟ್ ರಿಪೋರ್ಟಿನಲ್ಲಿ 36 ಮೀಟರ್ ರಸ್ತೆ ಮಾಡುವುದಾಗಿದ್ದು ಅದರಂತೆ ಕಟ್ಟಡಗಳನ್ನು ಹೊಡೆಯಲು ಮಾರ್ಕ್ ಸಹ ಮಾಡಲಾಗಿತ್ತು. ಆದರೆ ಏಕಾಏಕಿ 6 ಮೀಟರ್ ಕಡಿಮೆ ಮಾಡಿ ಹಿಂದಿದ್ದ ಭೂಸ್ವಾದೀನದ ಮಾರ್ಕ್ ಅಳಿಸಿ 30 ಮೀಟರ್‍ಗೆ ಮಾರ್ಕ್ ಮಾಡಿದ್ದಾರೆ. ಅಲ್ಲದೆ ರಸ್ತೆಯ ಮಧ್ಯದ ಭಾಗದಿಂದ ಸಮನಾಗಿ ಎರಡೂ ಕಡೆ ಅಗಲೀಕರಿಸದೆ ಹಣ ಮತ್ತು ಅಧಿಕಾರಶಾಹಿಗಳ ಭೂಮಿ ಉಳಿಸಲು ಒಂದೇ ಕಡೆ ಅಗಲೀಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

     ಈ ಬಗ್ಗೆ ಸ್ಪಷ್ಟನೆ ಕೊಡುವಂತೆ ಶಾಸಕರು ಅಧಿಕಾರಿಗಳನ್ನು ತಾಕೀತು ಮಾಡಿದ ಪರಿಣಾಮ ಪಟ್ಟಣದಲ್ಲಿ 36 ಮೀಟರ್ ರಸ್ತೆ ಅಗಲೀಕರಣ ವಿರೋಧಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರಿಂದ ಕಾಮಗಾರಿ ವಿಳಂಭವಾಗದಿರಲೆಂದು 6 ಮೀಟರ್ ಕಡಿಮೆ ಮಾಡಿ ಕಾಮಗಾರಿ ಮಾಡುವಂತೆ ಹೈವೆ ಪ್ರಾಧಿಕಾರ ಸೂಚಿಸಿದ ಹಿನ್ನೆಲೆಯಲ್ಲಿ ಕಡಿಮೆ ಮಾಡಿ ಮಾಡಲಾಗುತ್ತಿದೆ ಎಂದು ಹೈವೆ ಅಧಿಕಾರಿಗಳು ಸ್ಪಷ್ಟನೆ ಕೊಟ್ಟರಲ್ಲದೆ ಎರಡೂ ಕಡೆ ಸರ್ಕಾರಿ ಭೂಮಿಯಿಲ್ಲದ ಪರಿಣಾಮ ಸರ್ಕಾರಿ ಭೂಮಿಯಿರುವೆಡೆ ಅಗಲೀಕರಣ ಮಾಡಲಾಗಿದೆ ವಿನಃ ಯಾರ ಪ್ರಭಾವಕ್ಕೂ ಒಳಗಾಗಿ ಗೈಡ್‍ಲೈನ್ ಬದಲಾಯಿಸಿಲ್ಲ ಎಂದರು.

     ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಎರಡೂ ಕಡೆಯೂ ಸರ್ಕಾರಿ ಭೂಮಿಯಿದ್ದು ಪ್ರಭಾವಿಗಳ ಭೂಮಿ ರಕ್ಷಣೆಗೆ ಹೈವೆ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಶಾಸಕರು ನಾನಿಲ್ಲಿ ಜಿಪಂ ಸದಸ್ಯರಾಗಿದ್ದ ವೇಳೆಯಲ್ಲಿ ಕೆರೆಯ ನೀರು ಇದೇ ಮಾರ್ಗದಲ್ಲಿ ಹರಿಯುವುದನ್ನು ನೋಡಿದ್ದೇನೆ. ಇಲ್ಲಿ ರಾಜಕಾಲುವೆಯಿದ್ದು ಮತ್ತೊಮ್ಮೆ ಸರ್ವೆ ಮಾಡಿಸಿ ಸರ್ಕಾರಿ ಭೂಮಿಯಿರುವುದು ದೃಢ ಪಟ್ಟರೆ ನಿರ್ಧಾಕ್ಷಿಣ್ಯವಾಗಿ ಈಗ ಮಾಡಿರುವ ಚರಂಡಿ ಹೊಡೆದು ರಸ್ತೆಯ ಮಧ್ಯಭಾಗದಿಂದ 15 ಮೀಟರ್‍ನಂತೆ ಎರಡೂ ಕಡೆ ಅಳೆದು ಕಾಮಗಾರಿ ಮಾಡಬೇಕು ಇಲ್ಲವಾದರೆ ಪರಿಣಾಮ ನೆಟ್ಟಗಿರೋದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

      ಹುಳಿಯಾರಿನ ಎಸ್‍ಎಲ್‍ಆರ್ ಬಂಕ್‍ನಿಂದ ಹೊಸದುರ್ಗ ರಸ್ತೆಯ ಒಣಕಾಲುವೆಯ ವರೆವಿಗೂ ಎರಡೂ ಕಡೆ 15 ಮೀಟರ್‍ನಂತೆ ಪುನಃ ಅಳತೆ ಮಾಡಿ 30 ಮೀಟರ್ ಪೂರಾ ಸರ್ಕಾರಿ ಜಾಗವಾದರೆ 30 ಮೀಟರ್ ಚತುಷ್ಪತ ರಸ್ತೆ ಮಾಡುವಂತೆಯೂ ಖಾಸಗಿ ಭೂಮಿ ಮತ್ತು ಕಟ್ಟಡ ಇದ್ದರೆ ಹಾಲಿ ಈಗಿರುವ ಚರಂಡಿವರೆಗೆ ಮಾತ್ರ ರಸ್ತೆ ಮಾಡುವಂತೆ ಸೂಚಿಸಿದರು. ಅಲ್ಲದೆ ಒಣಕಾಲುವೆಯವರೆವಿಗೂ ಎರಡೂ ಕಡೆಯೂ ಚರಂಡಿ ಮಾಡಬೇಕು. ಎಪಿಎಂಸಿ ಬಳಿಯ ವಿವಾಧಿತ ಸ್ಥಳದ ಸಂಪೂರ್ಣ ಸರ್ವೆ ಮಾಡುವವರೆವಿಗೂ ಆ ಭಾಗದ ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸಿ ಒಣಕಾಲುವೆಯಿಂದ ಕಾಮಗಾರಿ ಮಾಡುವಂತೆಯೂ ಸೂಚಿಸುವ ಮೂಲಕ ಸಭೆ ಮುಕ್ತಾಯಗೊಳಿಸಿದರು.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap