ಬೆಂಗಳೂರು:
ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯಲ್ಲಿ ನಡೆದಿದೆ.
ಆರೋಪಿಯನ್ನು ಜಯಂತ್ ಅಲಿಯಾಸ್ ಬ್ಯಾಟರಿ ಜಯಂತ್ ಎಂದು ಗುರುತಿಸಲಾಗಿದೆ. ಈತ ಕುದೂರಿನ ನಿವಾಸಿಯಾಗಿದ್ದು, ಈತನ ವಿರುದ್ಧ ಬೆಂಗಳೂರು ನಗರ, ಬೆಂಗಳೂರು ಜಿಲ್ಲೆ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಒಟ್ಟು 51 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಹೆದ್ದಾರಿಯಲ್ಲಿ ದರೋಡೆ ನಡೆಸುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸಪರ ತಂಡ ಮಹಿಮಾಪುರ ಕ್ರಾಸ್‌ನಲ್ಲಿರುವ ದಾಬಸ್‌ಪೇಟೆ-ರಾಮನಗರ ಹೆದ್ದಾರಿಗೆ ಬಂದಿತ್ತು. ಈ ವೇಳೆ ಜಯಂತ್ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಆತನ ಬಲಗಾಲಿಗೆ ಗುಂಡಿ ಹಾರಿಸಿ, ವಶಕ್ಕೆ ಪಡೆದಿದ್ದಾರೆ. ಕಾರಿನಲ್ಲಿ ಬಂದ ನಾಲ್ವರ ಪೊಲೀಸರ ತಂಡ ಜಯಂತ್ ನನ್ನು ಹಿಂಬಾಲಿಸಿದ್ದಾರೆ. ಇಬ್ಬರು ಪೇದೆಗಳು ಆತನನ್ನು ತಡೆದಿದ್ದು, ಈ ವೇಳೆ ಜಯಂತ್ ಹೆಡ್ ಕಾನ್ ಸ್ಟೇಬಲ್ ಇಮ್ರಾನ್ ಖಾನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಇನ್ಸ್ ಪೆಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ, ಆತ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬಲಗಾಲಿಗೆ ಗುಂಡು ಹಾರಿಸಲಾಗಿದೆ.
ಘಟನೆ ಬಳಿಕ ಜಯಂತ್ ಮತ್ತು ಖಾನ್ ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, ಖಾನ್ ಅವರ ಎಡಗೈಗೆ ಆರು ಹೊಲಿಗೆಗಳನ್ನು ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ ಜಯಂತ್ ವಿರುದ್ಧ ಮತ್ತೊಂದು ಪ್ರಕರಣವನ್ನು ದಾಖಲಾಗಿದೆ ಎಂದು ತಿಳಿದುಬಂದಿದೆ