ಬೆಂಗಳೂರು:
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿರುವ ಎಲ್ಲ ಅರ್ಜಿದಾರರ ವಾದವನ್ನೂ ಹೈಕೋರ್ಟ್ ಆಲಿಸಿದ್ದು, ಇಂದು ಅರ್ಜಿ ಕುರಿತು ಸರ್ಕಾರ ಪ್ರತಿವಾದ ಮಂಡಿಸಲಿದೆ.
ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿಗೆ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಹಾಗೂ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರಿದ್ದ ಪೂರ್ಣಪೀಠ ಗುರುವಾರ ವಿಚಾರಣೆ ನಡೆಸಿತು.
ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಅರ್ಜಿದಾರರ ವಾದವನ್ನೂ ಆಲಿಸಿದ ಪೀಠ, ಬಳಿಕ ಪ್ರತಿವಾದ ಮಂಡಿಸುವಂತೆ ಸರ್ಕಾರಕ್ಕೆ ಸೂಚಿಸಿತು. ಶುಕ್ರವಾರ ವಾದ ಮಂಡಿಸುವುದಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಪರ ಹಿರಿಯ ವಕೀಲ ಸಜನ್ ಪೂವಯ್ಯ ಸರ್ಕಾರ ವಾದ ಪೂರ್ಣಗೊಂಡ ಬಳಿಕ ತಮ್ಮ ವಾದ ಮಂಡಿಸುವುದಾಗಿ ತಿಳಿಸಿದರು. ಅದನ್ನು ಪರಿಗಣಿಸಿದ ಪೀಠ, ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.
ಎರಡು ಅರ್ಜಿಗಳು ವಜಾ:
ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ 2 ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಂದ ಹೈಕೋರ್ಟ್ ವಜಾಗೊಳಿಸಿತು. ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರೀಫ್ ಜಮೀಲ್ ಸಲ್ಲಿಸಿದ್ದ ಪಿಐಎಲ್ನಲ್ಲಿ ವಕೀಲ ರಹಮತ್ ಉಲ್ಲಾ ಕೊತ್ವಾಲ್ ವಾದ ಮಂಡಿಸಿ, ರಾಜ್ಯ ಸರ್ಕಾರದ ನಿಲುವು ಭಾರತ ಅಂಗೀಕರಿಸಿರುವ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಅನುಗುಣವಾಗಿಲ್ಲ. ಅಗತ್ಯ ಧಾರ್ವಿುಕ ಆಚರಣೆಗಳಿಗೆ ಸರ್ಕಾರ ಅಡ್ಡಿಪಡಿಸುವಂತಿಲ್ಲ.
ಈ ಕುರಿತ ಅಂತಾರಾಷ್ಟ್ರೀಯ ಒಡಂಬಡಿಕೆಗಳನ್ನೂ ನ್ಯಾಯಲಯ ಪರಿಗಣಿಸಬೇಕಿದೆ ಎಂದರು. ಅರ್ಜಿ ಗಮನಿಸಿದ ಪೀಠ, ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದ ಹೈಕೋರ್ಟ್ ರೂಪಿಸಿರುವ ನಿಯಮಗಳನ್ನು ಪಾಲಿಸಿಲ್ಲ. ಆದ್ದರಿಂದ, ಅರ್ಜಿ ವಿಚಾರಣೆಗೆ ಮಾನ್ಯತೆ ಹೊಂದಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.
ಮತ್ತೊಂದು ಅರ್ಜಿಯಲ್ಲಿ ಹಿರಿಯ ವಕೀಲ ಅಬ್ದುಲ್ ಮಜೀದ್ ಧರ್ ವಾದ ಮಂಡಿಸಿ, ಅರ್ಜಿದಾರ ವಿದ್ಯಾರ್ಥಿನಿಯರನ್ನು ಶಾಲೆಗೆ ತೆರಳದಂತೆ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು. ಅದಕ್ಕೆ ನ್ಯಾಯಪೀಠ, ಅರ್ಜಿದಾರರು ಯಾವ ಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ, ಅವರನ್ನು ಹೇಗೆ ಶಾಲೆಗೆ ತೆರಳದಂತೆ ನಿರ್ಬಂಧಿಸಲಾಗಿದೆ ಎಂಬ ಬಗ್ಗೆ ಸಮರ್ಪಕ ಮಾಹಿತಿ ನೀಡಿಲ್ಲ.
ಆದ್ದರಿಂದ ಅರ್ಜಿ ವಿಚಾರಣೆಗೆ ಮಾನ್ಯತೆ ಹೊಂದಿಲ್ಲ ಎಂದು ಅಭಿಪ್ರಾಯಪಟ್ಟು, ಸಮರ್ಪಕ ರೀತಿಯಲ್ಲಿ ಹೊಸದಾಗಿ ಅರ್ಜಿಯನ್ನು ಸಲ್ಲಿಸಬಹುದು ಎಂದು ಅರ್ಜಿದಾರರಿಗೆ ಅನುಮತಿ ನೀಡಿ, ಅರ್ಜಿ ವಜಾಗೊಳಿಸಿತು.
ಮಧ್ಯಂತರ ಅರ್ಜಿಗಳ ವಿಚಾರಣೆ ಸದ್ಯಕ್ಕಿಲ್ಲ:
ಪ್ರಕರಣದ ಸಂಬಂಧ ಹಲವು ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ವಿಚಾರಣೆಗೆ ಪರಿಗಣಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಮೊದಲಿಗೆ ಎಲ್ಲ ಅರ್ಜಿದಾರರು ಹಾಗೂ ಪ್ರತಿವಾದಿಗಳ ವಾದ ಪೂರ್ಣಗೊಳ್ಳಲಿ, ಆನಂತರ ನೋಡೋಣ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
ಶುಕ್ರವಾರ ಹಿಜಾಬ್ಗೆ ಅವಕಾಶ ಕೋರಿ ಅರ್ಜಿ:
ಶುಕ್ರವಾರ ಹಾಗೂ ರಂಜಾನ್ ಮಾಸದಲ್ಲಾದರೂ ಹಿಜಾಬ್ ಧರಿಸಲು ಅವಕಾಶ ಮಾಡಿಕೊಡಬೇಕು ಎಂದು ಮನೋವಿಜ್ಞಾನಿ ಹಾಗೂ ವಕೀಲ ಡಾ.ವಿನೋದ್ ಕುಲಕರ್ಣಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಗುರುವಾರ ಖುದ್ದು ವಾದ ಮಂಡಿಸಿದ ವಿನಯ್ ಕುಲಕರ್ಣಿ, ಹಿಜಾಬ್ ನಿಷೇಧದಿಂದ ಸಮಾಜದಲ್ಲಿ ಸಮೂಹಸನ್ನಿ ಸೃಷ್ಟಿಯಾಗುತ್ತಿದೆ.
ಇದು ಬಡ ಮುಸ್ಲಿಂ ಬಾಲಕಿಯರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಅಥವಾ ನೈತಿಕತೆಗೆ ಹಿಜಾಬ್ ವಿರುದ್ಧವಾಗಿಲ್ಲ. ಆದ್ದರಿಂದ, ಕೊನೇ ಪಕ್ಷ ಶುಕ್ರವಾರ ಹಾಗೂ ರಂಜಾನ್ ಮಾಸದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸಲು ಅವಕಾಶ ಕಲ್ಪಿಸಿ ಇಂದೇ ಮಧ್ಯಂತರ ಆದೇಶ ನೀಡಬೇಕು ಎಂದು ಕೋರಿದರು.
ಮಧ್ಯಸ್ಥಿಕೆ ಸಾಧ್ಯವೇ?:
ವಿಚಾರಣೆಯ ಕೊನೆಯಲ್ಲಿ ವಕೀಲೆಯೊಬ್ಬರು,ಮುಸ್ಲಿಂ ವಿದ್ಯಾರ್ಥಿನಿಯರ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ. ತೀರ್ಪು ಏನೇ ಬಂದರೂ ಸಮಸ್ಯೆಗಳು ಮುಂದುವರಿಯುವ ಸಾಧ್ಯತೆ ಇದೆ. ಆದ್ದರಿಂದ, ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸುವುದು ಸೂಕ್ತ.
ಈ ಕುರಿತು ಮಧ್ಯಂತರ ಅರ್ಜಿ ಸಲ್ಲಿಸಲಾಗಿದ್ದು, ಅದನ್ನು ಪರಿಗಣಿಸಬೇಕು ಎಂದು ಕೋರಿದರು. ಅದಕ್ಕೆ ನ್ಯಾಯಪೀಠ, ಇದರಲ್ಲಿ ಸಾಂವಿಧಾನಿಕ ವಿಚಾರಗಳಿವೆ, ನಾವು ಅವುಗಳಿಗೆ ಉತ್ತರ ನೀಡಬೇಕು, ಮಧ್ಯಸ್ಥಿಕೆ ಹೇಗೆ ಸಾಧ್ಯ,
ಇಂತಹ ವಿಚಾರಗಳಲ್ಲಿ ಮಧ್ಯಸ್ಥಿಕೆ ಸಾಧ್ಯವೇ ಎಂದು ಪ್ರಶ್ನಿಸಿತಲ್ಲದೆ, ಅರ್ಜಿದಾರರು, ಪ್ರತಿವಾದಿಗಳೆಲ್ಲರೂ ಒಪ್ಪಿದರೆ ಪ್ರಕರಣದ ಬಗ್ಗೆ ಮಧ್ಯಸ್ಥಿಕೆ ನಡೆಸಲು ಪರಿಶೀಲನೆ ಮಾಡಬಹುದು ಎಂದು ಮೌಖಿಕವಾಗಿ ಹೇಳಿತು.
ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ರಾಜ್ಯದಲ್ಲಿ ಕೋಮುವಾದ ಮತ್ತು ಮತೀಯವಾದವನ್ನು ಬಿತ್ತಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿರುವವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರಾವಳಿ ಭಾಗದ ಶಾಸಕರು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಮಾಡಿದ್ದಾರೆ.
ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ ಹಲವು ಜಿಲ್ಲೆಗಳಿಗೆ ವಿಸ್ತರಿಸಲು ಮತೀಯ ಸಂಘಟನೆಗಳ ಷಡ್ಯಂತ್ರವೇ ಕಾರಣವಾಗಿದೆ. ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ವಿವಾದ ಆರಂಭಕ್ಕೆ ಮುನ್ನ 12 ವಿದ್ಯಾರ್ಥಿನಿಯರಿಗೆ ಮೂರು ದಿನ ತರಬೇತಿ ನೀಡಲಾಗಿದೆ. ಹೈಕೋರ್ಟ್ ಆದೇಶವಿದ್ದರೂ ಹಿಜಾಬ್ ಧರಿಸುವುದು ಬಿಟ್ಟಿಲ್ಲವೆಂದರೇ ಮತೀಯ ಶಕ್ತಿಗಳ ಕುಮ್ಮಕ್ಕು ಇರುವುದು ಸ್ಪಷ್ಟವಾಗುತ್ತದೆ ಎಂದು ವಿವರಿಸಿದ್ದಾರೆ.
ಭಾರತದಲ್ಲಿ ಮುಸ್ಲಿಂ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂಬುದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವುದು ಮತೀಯ ಶಕ್ತಿಗಳ ಉದ್ದೇಶವಾಗಿದೆ ಎಂದು ಶಾಸಕರಾದ ವೇದವ್ಯಾಸ ಕಾಮತ್, ರಘುಪತಿ ಭಟ್, ಲಾಲಾಜಿ ಮೆಂಡನ್, ಹರೀಶ್ ಪೂಂಜಾ, ಸಂಜೀವ್ ಮಠದೂರು, ಉಮಾನಾಥ ಕೊಟ್ಯಾನ್ ಮನವಿಯಲ್ಲಿ ತಿಳಿಸಿದ್ದಾರೆ.
ಮಕ್ಕಳಲ್ಲಿ ಗೊಂದಲ ಸೃಷ್ಟಿ ಬೇಡ
ಎಲ್ಲ ಮಕ್ಕಳು ವಿದ್ಯಾರ್ಜನೆ ಮಾಡಬೇಕು ಎಂದು ರಾಜ್ಯದ ಜನತೆ, ಸಮಾಜ, ಸರ್ಕಾರ ಅವರವರ ಜವಾಬ್ದಾರಿ ಅರಿತು ಕೆಲಸ ಮಾಡುತ್ತಿದ್ದೇವೆ. ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಶಾಂತಿ ಮೂಡಬೇಕು.
ಮೊದಲಿನಂತೆಯೇ ವಿದ್ಯಾರ್ಜನೆಯಾಗಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಮಾರ್ಚ್ನಲ್ಲಿ ಪರೀಕ್ಷೆಗಳು ನಡೆಯಲಿದ್ದು, ಅದಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು. ಮಕ್ಕಳಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗಬಾರದು. ನಾವೆಲ್ಲರೂ ಸೇರಿ ವಿಧಾನಸಭೆ ಮೂಲಕ ಒಂದು ಸಂದೇಶ ಕಳುಹಿಸಬಹುದಾಗಿತ್ತು.
ಆದರೆ, ಅಂತಹ ಅವಕಾಶಕ್ಕೆ ಕಾಂಗ್ರೆಸ್ ಸದನದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕಲ್ಲು ಹಾಕಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೆ ಪ್ರಕರಣ ನ್ಯಾಯಾಲಯದಲ್ಲಿದ್ದು, ಅದರ ಆದೇಶವನ್ನು ಪಾಲಿಸಬೇಕಾಗಿದೆ. ಸಂವಿಧಾನದಲ್ಲಿ ನ್ಯಾಯಾಂಗಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದರು.
ಹಿಜಾಬ್ ತೆಗೆದಿಡಲು ಶಾಲೆಗಳಲ್ಲಿ ವ್ಯವಸ್ಥೆ
ಹಿಜಾಬ್ ವಿಷಯವಾಗಿ ರಾಜ್ಯದಲ್ಲಿ ಉಂಟಾಗಿರುವ ಗೊಂದಲ ತಿಳಿಗೊಳಿಸುವ ಉದ್ದೇಶದಿಂದ ಮತ್ತು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ತಿಳುವಳಿಕೆ ಮೂಡಿಸಲು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗುರುವಾರ ಮುಸ್ಲಿಂ ಜನಪ್ರತಿನಿಧಿಗಳ ಜತೆ ಸಭೆ ನಡೆಸಿದರು. ಈ ವೇಳೆ ಜನಪ್ರತಿನಿಧಿಗಳು ವಿವಿಧೆಡೆ ಆಗುತ್ತಿರುವ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.
ಈ ವೇಳೆ ಮಾತನಾಡಿದ ಸಚಿವರು, ಕೋರ್ಟ್ ಸೂಚನೆಯಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ಹಿಜಾಬ್ ತೆಗೆದಿಟ್ಟು ಶಾಲೆ, ಕಾಲೇಜಿಗೆ ಪ್ರವೇಶಿಸಬಹುದು. ಹಿಜಾಬ್ ಹಾಕಿಕೊಂಡು ಬಂದವರಿಗೆ ಅದನ್ನು ತೆಗೆದಿರಿಸಲು ಶಾಲಾ ಆವರಣದ ಒಂದು ಕೊಠಡಿಯಲ್ಲಿ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ, ಎಲ್ಲ ರೀತಿಯ ರಕ್ಷಣೆ ಕೊಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ನಾಗೇಶ್, ಹೈಕೋರ್ಟ್ಗೆ ಹಿಜಾಬ್ ಪ್ರಕರಣ ಹೋದ ನಂತರ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ನಾಲ್ಕೈದು ಕಾಲೇಜ್ ಗಳಲ್ಲಿ ಸಮಸ್ಯೆಯಾಗಿತ್ತು. ಮಕ್ಕಳ ಮನವೊಲಿಕೆಯಲ್ಲಿ ಯಶಸ್ವಿಯಾಗಿದ್ದೇವೆ, ಇನ್ನೂ ಕೆಲವರ ಮನವೊಲಿಕೆ ನಡೆಯುತ್ತಿದೆ.
ಸಮವಸ್ತ್ರ ಪಾಲಿಸುವಂತೆ ಮನವಿ ಮಾಡಿದ್ದೇವೆ, ಕೆಲವು ಕಾಲೇಜುಗಳಲ್ಲಿ ಗೊಂದಲ ಇದೆ, ಎಲ್ಲವೂ ಬಗೆಹರಿಯಲಿದೆ ಎಂಬ ವಿಶ್ವಾಸವಿದೆ ಎಂದರು. ಹಿಜಾಬ್ ಗೊಂದಲದ ಬಳಿಕ ಸ್ಪಷ್ಟವಾದ ಸಮವಸ್ತ್ರ ನೀತಿಯೊಂದನ್ನು ತರಲು ಸರ್ಕಾರ ಬಯಸಿದೆ ಎಂದು ನಾಗೇಶ್ ಇದೆ ವೇಳೆ ಮಾಹಿತಿ ನೀಡಿದರು.
ಹಿಜಾಬ್ ಗದ್ದಲ ಮುಂದುವರಿಕೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಜಾಬ್ ವಿಷಯವಾಗಿ ಹೈಡ್ರಾಮಾ ನಡೆಯಿತು. ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿಯರು, ಪಾಲಕರನ್ನು ಕರೆತಂದು ರಾದ್ಧಾಂತ ಸೃಷ್ಟಿದರು. ಪ್ರತಿಭಟನೆ ನಡೆಸಿದರು. ಸಾಕಷ್ಟು ವಿದ್ಯಾರ್ಥಿಗಳು ‘ನಾವು ಹಿಜಾಬ್ ತೆಗೆಯುವುದಿಲ್ಲ’ ಎಂದು ತರಗತಿ ಬಹಿಷ್ಕರಿಸಿ ಹೊರನಡೆದರು.
ಎಲ್ಲಿ, ಏನೇನಾಯ್ತು…?
- ಬೆಳಗಾವಿಯ ವಿಜಯಾ ಪ್ಯಾರಾಮೆಡಿಕಲ್ ಕಾಲೇಜ್ನ ಗೇಟ್ ಬಳಿ ಜಮಾಯಿಸಿದ ವಿದ್ಯಾರ್ಥಿನಿಯರು, ಪಾಲಕರಿಗೆ ಕರೆ ಮಾಡಿ ಕರೆಸಿದರು. ಸ್ಥಳಕ್ಕಾಗಮಿಸಿದ ಕೆಲ ಯುವಕರು, ಪ್ರಾಚಾರ್ಯರ ವಿರುದ್ಧ ಧಿಕ್ಕಾರ ಕೂಗಿ, ಅಲ್ಲಾಹು ಅಕ್ಬರ್ ಘೊಷಣೆ ಹಾಕಿದ್ದರಿಂದ ಬಿಗುವಿನ ವಾತಾವರಣ ನಿರ್ವಣವಾಗಿತ್ತು. ಧಾರ್ವಿುಕ ಘೊಷಣೆ ಕೂಗಿದ ಆರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು, ಪರಿಸ್ಥಿತಿ ತಿಳಿಗೊಳಿಸಿದರು.
- ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರಾಯೋಗಿಕ ಪರೀಕ್ಷೆಗಳು ಗುರುವಾರ ನಡೆದಿಲ್ಲ. ಶುಕ್ರವಾರ ಆರಂಭವಾಗಲಿವೆ ಎಂದು ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
- ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಿಸಲಾಗಿದ್ದು, ಬೆಂಬಲಿಸಿ ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಕಾಲೇಜಿಗೆ 2 ದಿನ ರಜೆ ನೀಡಲಾಗಿದೆ.
- ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಬೆನಕ ಆಸ್ಪತ್ರೆ ಮಕ್ಕಳತಜ್ಞ ಡಾ.ಶಾಂತನು ಆರ್.ಪ್ರಭು ಅವರ ಟ್ವಿಟರ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದು, ಹಿಜಾಬ್ ವಿರುದ್ಧ ಟ್ವೀಟ್ ಮಾಡಿದ್ದಾರೆ. ಈ ಕುರಿತು ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.
- ಶಿವಮೊಗ್ಗದಲ್ಲಿ ಹಿಜಾಬ್ ಧರಿಸಿ ತರಗತಿಗೆ ಅವಕಾಶ ನೀಡುವ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸುವುದಾಗಿ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದು, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
- ಯಾದಗಿರಿ, ಧಾರವಾಡ, ಮಂಡ್ಯ, ದಾವಣಗೆರೆ, ಬಳ್ಳಾರಿ, ವಿಜಯಪುರ ಜಿಲ್ಲೆಗಳಲ್ಲೂ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿ ಮನೆಗೆ ವಾಪಸಾದರು. ಶಾಲಾ-ಕಾಲೇಜಿಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.
- ಉಡುಪಿಯ ಅಜ್ಜರಕಾಡು ಪ್ರಥಮ ದರ್ಜೆ ಕಾಲೇಜಿನ 50 ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿ ಮನೆಗೆ ವಾಪಸಾಗಿದ್ದಾರೆ. ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಪದವಿ ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹಾಗಾಗಿ ಹೈಕೋರ್ಟ್ ಮಧ್ಯಂತರ ಆದೇಶದ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ