ಬೆಂಗಳೂರು:
ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾ| ರಿತುರಾಜ್ ಅವಸ್ಥಿ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ಮುಂದುವರಿಸಿದ್ದು,ಅರ್ಜಿದಾರರ ಪರ ವಕೀಲ ರಹಮತುಲ್ಲಾ ಕೊತ್ವಾಲ್ ವಾದ ಮಂಡನೆ ನಡೆಸಿ ಧರ್ಮ ಸ್ವಾತಂತ್ರ್ಯದ ಬಗ್ಗೆ ಪ್ರಶ್ನಿಸಿದ್ದಾರೆ.
ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನಕ್ಕೆ ಮುಂದೂಡಿಕೆ ಮಾಡಲಾಗಿದೆ.
ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿರುವ ಸರ್ಕಾರದ ಕ್ರಮಕ್ಕೆ ಬಲವಾದ ವಿರೋಧ ವ್ಯಕ್ತಪಡಿಸಿ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಉತ್ತರ ನೀಡಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಈ ಬಗ್ಗೆ ಸರಿಯಾದ ಅರ್ಜಿ ಸಲ್ಲಿಸಿಲ್ಲ, ಪೇಜ್ ನಂಬರ್ ಹಾಕಿಲ್ಲ. ಕೋರ್ಟ್ ಸಮಯ ವ್ಯರ್ಥ ಮಾಡಬೇಡಿ. ಅಂತರ್ ರಾಷ್ಟ್ರೀಯ ಒಪ್ಪಂದಗಳನ್ನು ತಪ್ಪಾಗಿ ಉಲ್ಲೇಖ ಮಾಡಿದ್ದಾರೆ. ನಿಯಮದಂತೆ ನೀವು ಪ್ರಮಾಣ ಪತ್ರ ಸಲ್ಲಿಸಿದ್ದೀರಾ ? ಎಂದು ಪ್ರಶ್ನೆ ಮಾಡಿದ್ದಾರೆ.
ನ್ಯಾಯ ಪೀಠದ ಪ್ರಶ್ನೆಗೆ ವಕೀಲ ಡಾ.ವಿನೋದ್ ಕುಲಕರ್ಣಿ ನಿಯಮದಂತೆ ನಾವು ಪ್ರಮಾಣ ಪತ್ರ ಸಲ್ಲಿಸಿದ್ದೇವೆ ಎಂದು ಉತ್ತರ ನೀಡಿದ್ದಾರೆ.
ವಿವಾದದಿಂದ ಮುಸ್ಲಿಂ ಹೆಣ್ಣು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ವಿನೋದ್ ಕುಲಕರ್ಣಿ ವಾದ ಮಂಡನೆ ಮಾಡಿದ್ದಾರೆ.
ಇಂದೇ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ವಿನೋದ್ ಕುಲಕರ್ಣಿ ನ್ಯಾಯಪೀಠಕ್ಕೆ ಮನವಿ ಮಾಡಿದ್ದಾರೆ.
ವಕೀಲ ಎ.ಎಂ.ದಾರ್ ಅವರ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯ ಪೀಠ ಮತ್ತೆ ಕ್ರಮವಾಗಿ ಅರ್ಜಿ ಸಲ್ಲಿಸಲು ಹೇಳಿದೆ.
ಯಾರ್ಯಾರೋ ವಾದ ಮಂಡನೆಗೆ ಬರುವುದು ಸರಿಯಲ್ಲ. ಇದುವರೆಗೆ ಸರಿಯಾದ ದಿಕ್ಕಿನಲ್ಲಿ ವಾದ ಮಂಡನೆಯಾಗಿದೆ ಎಂದು ನ್ಯಾಯ ಪೀಠ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ