ಬೆಂಗಳೂರು:
ಬೆಂಗಳೂರು, ಮಾರ್ಚ್ 14: ಹೈಕೋರ್ಟ್‌ನಲ್ಲಿ ಮಂಗಳವಾರ ಬೆಳಗ್ಗೆ 10.30ಕ್ಕೆ ಹಿಜಾಬ್ ಅಂತಿಮ ತೀರ್ಪು ಪ್ರಕಟಗೊಳ್ಳುತ್ತಿರುವ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಮತ್ತು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಪೀಠ ಆಲಿಸಿದ್ದು, ನಾಳೆ (ಮಾ.15, ಮಂಗಳವಾರ) ಬೆಳಗ್ಗೆ 10.30ಕ್ಕೆ ಕರ್ನಾಟಕ ಹೈಕೋರ್ಟ್‌ನಲ್ಲಿ ಅಂತಿಮ ತೀರ್ಪು ಪ್ರಕಟವಾಗಲಿದೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಶೇಷ ಪೀಠದಲ್ಲಿ ಮೂರು ವಾರಗಳ ಕಾಲ ವಿಚಾರಣೆ ನಡೆದಿತ್ತು.
ಅನಂತರ ಅಂತಿಮ ತೀರ್ಪನ್ನು ಕಾಯ್ದಿರಿಸಲಾಗಿತ್ತು. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರು ಸಹ ಪೀಠದಲ್ಲಿರಲಿದ್ದಾರೆ. ಯಾವ ಯಾವ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಇರಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ದಕ್ಷಿಣ ಕನ್ನಡದಲ್ಲಿ ನಿಷೇಧಾಜ್ಞೆ ಜಾರಿ
ಹೈಕೋರ್ಟ್‌ನಲ್ಲಿ ಹಿಜಾಬ್ ತೀರ್ಪು ಪ್ರಕಟಿಸುವ ಹಿನ್ನೆಲೆ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ.
ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳು ಎಂದಿನಂತೆ ಮುಂದುವರಿಯುತ್ತವೆ. ಆದರೆ ಆಂತರಿಕ ಪರೀಕ್ಷೆಗಳನ್ನು ಮುಂದೂಡುವಂತೆ ಆದೇಶ ಹೊರಡಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ಮಾಡಲು ಚಿಂತಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಶಾಲಾ, ಕಾಲೇಜುಗಳ ಮುಂದೆ ನಾಳೆ ಪೊಲೀಸ್ ಬಂದೋಬಸ್ತ್ ನಿಯೋಜನೆ ಕೈಗೊಳ್ಳವ ಬಗ್ಗೆ, ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುತ್ತಿದೆ.
ಬನವಾಸಿ, ಹೊನ್ನಾವರ, ಭಟ್ಕಳ ತಾಲೂಕಿನ ಮೇಲೆ ಹೆಚ್ಚು ನಿಗಾ ಇಡಲು ಸೂಚಿಸಲಾಗಿದೆ. ಅಹಿತಕರ ಘಟನೆಗಳು ನಡೆಸುವ ವ್ಯಕ್ತಿಗಳ ಮೇಲೆ, ಸಂಘಟನೆಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡುವ ಬಗ್ಗೆ ಸೇರಿದಂತೆ ಇನ್ನು ಹೆಚ್ಚಿನ ಕ್ರಮಕ್ಕಾಗಿ ಇಂದು ರಾತ್ರಿ 8:30 ಕ್ಕೆ ಎಸ್ಪಿ, ಡಿಸಿ ಮೀಟಿಂಗ್ ನಡೆಯಲಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಎಸ್ಪಿ ಸುಮನ್ ಪೆನ್ನೆಕರ್ ಮಾಹಿತಿ ನೀಡಿದ್ದಾರೆ.
ಅದೇ ರೀತಿ ಹಿಜಾಬ್ ಪ್ರಕರಣದ ತೀರ್ಪು ಹೈಕೋರ್ಟ್‌ನಿಂದ ಹೊರಬೀಳುವ ಹಿನ್ನೆಲೆ ತುಮಕೂರು, ಮೈಸೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಹಾಸನದಲ್ಲಿ 144 ಸೆಕ್ಷನ್ ಜಾರಿ
ನಾಳೆ ಹಿಜಾಬ್ ತೀರ್ಪು ಹಿನ್ನೆಲೆ ಹಾಸನ ಜಿಲ್ಲಾದ್ಯಂತ ಸೆಕ್ಷನ್ 144 ಜಾರಿಗೊಳಿಸಿ ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶ ಹೊರಡಿಸಿದ್ದಾರೆ. ನಾಳೆ ಬೆಳಗ್ಗೆ 6 ಗಂಟೆಯಿಂದ ಮಾ.18ರವರೆಗೂ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಪ್ರತಿಭಟನೆ, ಮೆರವಣಿಗೆ ಸೇರಿದಂತೆ ಯಾವುದೇ ಸಂಭ್ರಮಾಚರಣೆ ನಡೆಸದಂತೆ ಆದೇಶಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಶಾಲಾ- ಕಾಲೇಜು ರಜೆ
ಶಿವಮೊಗ್ಗದಲ್ಲಿ ನಾಳೆ (ಮಾರ್ಚ್ 15) ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಇರುತ್ತದೆ. ಮಾರ್ಚ್ 21 ರವರೆಗೆ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಕೆಎಸ್‌ಆರ್‌ಪಿಯ 8 ತುಕಡಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 6 ತುಕಡಿ, ಆರ್‌ಎಎಫ್‌ನ 1 ತುಕಡಿ ನಿಯೋಜನೆ ಮಾಡಲಾಗಿದೆ ಎಂದು ಶಿವಮೊಗ್ಗ ಎಸ್ಪಿ ಬಿ.ಎಂ. ಲಕ್ಷ್ಮಿ ಪ್ರಸಾದ್ ತಿಳಿಸಿದರು.
ಉಡುಪಿಯಲ್ಲಿ ನಿಷೇಧಾಜ್ಞೆ ಜಾರಿ
ಉಡುಪಿ ಜಿಲ್ಲೆಯ ಎಲ್ಲಾ ಶಾಲಾ- ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಕೂರ್ಮಾರಾವ್ ಆದೇಶಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲೂ ನಿಷೇಧಾಜ್ಞೆ ಜಾರಿ
ಮೈಸೂರು ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಹೈಕೋರ್ಟ್ ನೀಡುವ ತೀರ್ಪಿಗೆ ಜನರು ಬದ್ಧರಾಗಿರಬೇಕು, ಕಾನೂನು ಕೈಗೆತ್ತಿಕೊಳ್ಳದೆ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು. ಯಾವುದೇ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶವಿದೆ. ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇಷ್ಟೇ ಅಲ್ಲದೇ ದಾವಣಗರೆ, ಗದಗ, ವಿಜಯಪುರ, ರಾಯಚೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಬಳ್ಳಾರಿ ಸೇರಿದಂತೆ ಹಲವು ಬಿಗಿ ಪೊಲೀಸ್ ಭದ್ರತೆಯ ಜೊತೆಗೆ ಶಾಲಾ- ಕಾಲೇಜುಗಳಿಗೆ ರಜೆ ಮತ್ತು ನಿಷೇಧಾಜ್ಞೆ ಘೋಷಿಸಲಾಗಿದೆ.
ಚಿಕ್ಮಮಗಳೂರಿನಲ್ಲಿ ನಿಷೇಧಾಜ್ಞೆ ಜಾರಿ:
ಹೈಕೋರ್ಟ್ ನಿಂದ ಹಿಜಾಬ್ ತೀರ್ಪು ಬರುತ್ತಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಚಿಕ್ಕಮಗಳೂರು ಡಿಸಿ ಕೆ ಎನ್ ರಮೇಶ್ ಆದೇಶ ಹೊರಡಿಸಿದ್ದಾರೆ.
ಜಿಲ್ಲಾದ್ಯಂತ ಶಾಲಾ-ಕಾಲೇಜಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮಾ.15ರಿಂದ ಮಾರ್ಚ್ 21ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಯಾವುದೇ ಅಪರಿಚಿತ ವ್ಯಕ್ತಿಗಳು ಶಾಲಾ ಕಾಲೇಜು ಆವರಣ ಪ್ರವೇಶಿಸಿದಂತೆ ಸೂಚನೆ ನೀಡಲಾಗಿದೆ.
ಹಾಸನದಲ್ಲಿ ಮಾ.18ರವರೆಗೆ ನಿಷೇಧಾಜ್ಷೆ
ಹಿಜಾಬ್ ತೀರ್ಪು ಹಿನ್ನೆಲೆ ಹಾಸನ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಿದ ಹಾಸನ ಡಿಸಿ ಆದೇಶ ಮಾಡಿದ್ದಾರೆ.
ಮಾ.15ರ ಬೆಳಗ್ಗೆ 6ರಿಂದ ಆರಂಭಗೊಂಡು ಮಾ.18 ರ ರಾತ್ರಿ 10 ವರೆಗೂ 144 ಸೆಕ್ಷನ್ ಜಾರಿಯಲ್ಲಿರುತ್ತದೆ. ಪ್ರತಿಭಟನೆ, ಮೆರವಣಿಗೆ ಸೇರಿದಂತೆ ಯಾವುದೇ ಸಂಭ್ರಮಾಚರಣೆ ನಡೆಸದಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
