ಮಂಡ್ಯ:
ತನ್ನನ್ನು ಮದುವೆಯಾಗಲು ನಿರಾಕರಿಸಿದ ಯುವತಿಯೊಬ್ಬಳಿಗೆ ಹಿಂದೂ ಮುಖಂಡನೊಬ್ಬ ನಿರಂತರ ನಾಲ್ಕು ವರ್ಷಗಳಿಂದ ಆಕೆಗೆ ಕಿರುಕುಳ ನೀಡುತ್ತಿದ್ದಾನೆ. ಜೊತೆಗೆ ಆಕೆಗೆ ನಿಶ್ಚಯವಾಗುತ್ತಿದ್ದ ಮದುವೆಗಳನ್ನೆಲ್ಲ ರದ್ದು ಮಾಡಿಸಿದ್ದ. ಆ್ಯಸಿಡ್ ದಾಳಿ ಮಾಡುವ ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಸದ್ಯ ಆತನ ವಿರುದ್ಧ ಮಂಡ್ಯದ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ನೀಡಿದ್ದ ದೂರಿನ ಆಧಾರದಲ್ಲಿ ಹಿಂದೂ ಮುಖಂಡ ಚಿಕ್ಕಬಳ್ಳಿ ಬಾಲಕೃಷ್ಣ ಎಂಬಾತನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
4 ವರ್ಷಗಳ ಹಿಂದೆ ಸಂತ್ರಸ್ತೆ ಹಾಗೂ ಬಾಲಕೃಷ್ಣನಿಗೆ ಮದುವೆ ನಿಶ್ಚಯವಾಗಿತ್ತು. ಆ ವೇಳೆ ಸಂತ್ರಸ್ತೆ ಮತ್ತು ಬಾಲಕೃಷ್ಣ ಜೊತೆಯಲ್ಲಿ ಫೋಟೋ ತೆಗೆಸಿಕೊಂಡಿದ್ದರು. ಆದರೆ, ಬಾಲಕೃಷ್ಣ ಹಲವು ಸುಳ್ಳುಗಳನ್ನು ಹೇಳಿ ಮದುವೆ ನಿಶ್ಚಯ ಮಾಡಿಕೊಂಡಿದ್ದು ನಂತರ ಸಂತ್ರಸ್ತೆಯ ಅರಿವಿಗೆ ಬಂದಿತ್ತು. ಹೀಗಾಗಿ ಮದುವೆ ನಿರಾಕರಿಸಿದ್ದಳು. ಇದು ಬಾಲಕೃಷ್ಣನನ್ನು ಕೆರಳಿಸಿತ್ತು.
ಅದಾದ ನಂತರ ಸಂತ್ರಸ್ತೆಗೆ ಬೇರೆ ಮದುವೆ ಪ್ರಸ್ತಾಪಗಳು ಬಂದಾಗಲೆಲ್ಲ ಆರೋಪಿ ಬಾಲಕೃಷ್ಣ ಹಳೇ ಫೋಟೋ ತೋರಿಸಿ ಚಾಡಿ ಹೇಳಿ ವಿವಾಹ ರದ್ದಾಗುವಂತೆ ಮಾಡುತ್ತಿದ್ದ. ಇಷ್ಟೇ ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ, ಆ್ಯಸಿಡ್ ಎರಚುವುದಾಗಿಯೂ, ಕೊಲೆ ಮಾಡುವುದಾಗಿಯೂ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿದ್ದಾರೆ.
‘ನೀನು ಬೇರೆಯವರನ್ನು ಮದುವೆಯಾಗಲು ಬಿಡುವುದಿಲ್ಲ. ನಿನ್ನ ಮದುವೆ ಎಲ್ಲೇ ನಿಶ್ಚಯವಾದರೂ ಅಲ್ಲಿಗೆ ಬಂದು ನಿನ್ನ ಮದುವೆ ನಿಲ್ಲಿಸಿ ನಿನ್ನ ಬಗ್ಗೆ ಅಪಪ್ರಚಾರ ಮಾಡಿ ನಿನ್ನನ್ನು ಅಲ್ಲೇ ಕೊಲೆ ಮಾಡುತ್ತೆನೆಂದು ಹೆದರಿಸಿ ಆರೋಪಿಯು ಪ್ರಾಣಭಯ ಉಂಟುಮಾಡಿರುತ್ತಾನೆ. ಸಾರ್ವಜನಿಕ ಸ್ಥಳದಲ್ಲಿ ನನ್ನನ್ನು ಬೈದು ಹೀಯಾಳಿಸಿ ಅವಮಾನ ಮಾಡಿರುತ್ತಾನೆ. ಆಗ ನನ್ನ ದೊಡ್ಡಮ್ಮ ಲಕ್ಷ್ಮಮ್ಮ ಮತ್ತು ಜತೆಗೆ ಬಂದಿದ್ದ ಚಿಕ್ಕಬಳ್ಳಿ ಗ್ರಾಮದ ಸಿಕೆ ಪದ್ಮ ಅವರು ಆತನಿಗೆ ಬೈದು ಕಳುಹಿಸಿರುತ್ತಾರೆ’ ಎಂದೂ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಆರೋಪಿ ಬಾಲಕೃಷ್ಣನಿಂದ ರಕ್ಷಣೆ ಕೋರಿ ಹಾಗೂ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂತ್ರಸ್ತೆ ಮನವಿ ಮಾಡಿದ್ದಾರೆ.








