2024 ಮುಗಿಯುವ ಹಂತ ತಲುಪಿದೆ. ಹೀಗಾಗಿ 2025ರ ಸ್ವಾಗತಕ್ಕೆ ಸಿದ್ಧತೆಯೂ ನಡೆದಿದೆ. ಆದ್ರೆ 2024ರಲ್ಲಿ ಬಹಳಷ್ಟು ಘಟನೆಗಳು ಸಂಭವಿಸಿದೆ. ಕೆಲವೊಂದು ವಿಚಾರಗಳು ಅಚ್ಚರಿಗೂ ಕಾರಣವಾಗಿವೆ. ರಾಜ್ಯದಲ್ಲಿ ಹಲವು ವಿದ್ಯಮಾನಗಳು ಜರುಗಿವೆ, ಹಲವು ವಿವಾದಗಳು ಸದ್ದು ಮಾಡಿವೆ. ರಾಜ್ಯದ ರಾಜಕೀಯ ನಾಯಕರು ಸೇರಿದಂತೆ ಸ್ವಾಮೀಜಿಗಳು ಕೂಡ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದರು. ಅದರ ಒಂದು ಸಣ್ಣ ಝಲಕ್ ಇಲ್ಲಿದೆ.
- ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನವಾಗಿದ್ದು ಈ ವರ್ಷದ ಅತ್ಯಂತ ಆಘಾತಕಾರಿ ವಿಚಾರಗಳಲ್ಲಿ ಒಂದಾಗಿದೆ. ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಆರೋಪದಲ್ಲಿ ರೇಣುಕಾಸ್ವಾಮಿಯ ಬೆಂಗಳೂರಿಗೆ ಕರೆಸಿ ಕೊಲೆ ಮಾಡಿರುವ ಆರೋಪ ಮೇಲಿದೆ. ಸದ್ಯ ಜಾಮೀನಿನ ಮೇಲೆ ದರ್ಶನ್ ಹೊರಗಿದ್ದಾರೆ.
- ತಿರುಪತಿ ದೇವಸ್ಥಾನದ ನೈವೇದ್ಯದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಚಂದ್ರುಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
- ಶಿವಕುಮಾರ್ ಅವರ ಹೆಸರಿನಲ್ಲೇ ಶಿವ ಇದ್ದಾನೆ. ನನ್ನ ಹೆಸರು ಮಲ್ಲಿಕಾರ್ಜುನ ಎಂದರೂ ಶಿವ ಎಂದೇ ಅರ್ಥ. ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಮಲ್ಲಿಕಾರ್ಜುನ ಎಂಬ ಜ್ಯೋತಿರ್ಲಿಂಗವೂ ಇದೆ. ಶಿವನು ರಾಮ (ಬಿಜೆಪಿ)ನ ಸಮಾನವಾಗಿ ಸ್ಪರ್ಧೆ ಮಾಡಬಹುದು ಎನ್ನುವ ಮೂಲಕ ರಾಮ ಹಾಗೂ ಶಿವನ ನಡುವೆ ಸಂಬಂಧ ಸೃಷ್ಟಿಸಿ ಮಲ್ಲಿಕಾರ್ಜುನ ಖರ್ಗೆ ವಿವಾದಕ್ಕೆ ಕಾರಣರಾಗಿದ್ದರು.
- ಪುಷ್ಪಾ 2 ಸಿನಿಮಾ ಬಿಡುಗಡೆಯಾದಾಗ ನಟ ಅಲ್ಲು ಅರ್ಜುನ್ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಘಟನೆ ಸಂಬಂಧ ಪೊಲೀಸರು ಅಲ್ಲು ಅರ್ಜುನ್ ಮನೆಗೆ ಬಂದು ಅವರನ್ನು ಬಂಧಿಸಿದ್ದರು.
- ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರಿಗೆ ಸಿಐಎಸ್‌ಎಫ್ ಕಾನ್‌ಸ್ಟೇಬಲ್ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದರು. ಈ ವಿಷಯ ಸಾಕಷ್ಚು ಸದ್ದು ಮಾಡಿತ್ತು.
- ವಕ್ಫ್ ವಿರುದ್ಧ ಹೋರಾಟಕ್ಕೆ ಕರೆ ಕೊಡುವ ಭರದಲ್ಲಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ ಎಂದು ಸಂದೇಶ ಸಾರಿದ ಬಸವಣ್ಣನ ಸಾವಿನ ವಿಚಾರವನ್ನೇ ರಾಜಕೀಯ ಕೆಸರೆರೆಚಾಟಕ್ಕೆ ಎಳೆತಂದಿದ್ದರು. ನವೆಂಬರ್ 25 ರಂದು ಮಾತನಾಡಿದ್ದ ಅವರು, ಬಸವಣ್ಣನವರ ಹಾಗೆ ನದಿಗೆ ಹಾರಿ ಸಾಯಬೇಕಾಗುತ್ತದೆ ಎಂದು ಹೇಳಿದ್ದರು.
- ಲೇಡಿ ಸೂಪರ್‌ಸ್ಟಾರ್ ನಯನತಾರಾ ಹಾಗೂ ನಟ ಧನುಷ್ ನಡುವಿನ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ನಯನತಾರಾ: ಬಿಯಾಂಡ್ ದ ಫೇರಿ ಟೇಲ್ ಎಂಬ ಸಾಕ್ಷ್ಯಚಿತ್ರದಲ್ಲಿ 2015 ರ ನಾನುಮ್ ರೌಡಿ ಧಾನ್ ಚಿತ್ರದ 3 ಸೆಕೆಂಡುಗಳ ವಿಡಿಯೋ ಬಳಸಿಕೊಂಡಿದ್ದಕ್ಕೆ ನಟ ಧನುಷ್ ಕೋರ್ಟ್ ಮೆಟ್ಟಿಲೇರಿದ್ದರು.
- ನ. 26 ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದು ಒಕ್ಕಲಿಗ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು.
- ಚನ್ನಪಟ್ಟಣ ಉಪಚುನಾವಣೆ ಅಖಾಡದಲ್ಲಿ ಪ್ರಚಾರ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಯನ್ನು ಕರಿಯ ಎಂದು ಕರೆಯುವ ಮೂಲಕ ವಿವಾದವನ್ನು ಮೈಮೇಲೆ ಎದುಕೊಂಡಿದ್ದರು. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಪರ ಪ್ರಚಾರದ ವೇಳೆ ಜಮೀರ್, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದ್ದರು.
- ವಿಧಾನಪರಿಷತ್‌ನಲ್ಲಿ ಸಿಟಿ ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಆಗ ಸಿಟಿ ರವಿ, ಅಶ್ಲೀಲ ಪದ ಬಳಸಿ ಹೆಬ್ಬಾಳ್ಕರ್ ಅವರನ್ನ ನಿಂದಿಸಿದ್ದಾರೆ ಅನ್ನೋ ಆರೋಪ ಕೇಳಿಬಂತು. ಸಿಟಿ ರವಿ ಅವರನ್ನು ಬಂಧಿಸಲಾಗಿತ್ತು. ರವಿ ಅವರನ್ನು ಲಕ್ಷ್ಮಿ ಹೆಬ್ಬಾಳ್ಕರ್ ಕೊಲೆಗೆಡುಕ ಎಂದು ನಿಂದಿಸಿದ್ದರು.
- ನಟಿ ಕಂ ಮಾಡೆಲ್ ಪೂನಂ ಪಾಂಡೆ ನಿಧನರಾಗಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು, ಈ ವಿಷಯವನ್ನು ಅವರ ಮ್ಯಾನೇಜರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದಾದ ನಂತರ ನಟಿ ತಾನು ಬದುಕಿರುವುದಾಗಿ ತಿಳಿಸಿದ್ದರು.
- ರಾಜ್ಯ ಸಭೆ ಚುನಾವಣೆ ಗೆದ್ದ ಖುಷಿಯ ನಡುವೆ ಕಾಂಗ್ರೆಸ್ ನ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಸುತ್ತ ವಿವಾದ ಸುತ್ತುಹಾಕಿಕೊಂಡಿತ್ತು. ನಾಸೀರ್ ಬೆಂಬಲಿಗರು ಗೆಲುವಿನ ಸಂಭ್ರಮಾಚರಣೆ ವೇಳೆ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು.
- ಬೆಂಗಳೂರಿನ ಗೋರಿಪಾಳ್ಯ ಪಾಕಿಸ್ತಾನದಲ್ಲಿ ಇದೆಯಾ ಎಂಬ ಹೈಕೋರ್ಟ್ ನ್ಯಾಯಾಧೀಶರಿಗೆ ಸುಪ್ರಿಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಈ ವಿಚಾರ ಕೂಡ ಸಾಕಷ್ಟು ವಿವಾದನ್ನುಂಟು ಮಾಡಿತ್ತು. ಹೈಕೋರ್ಟ್ ನ್ಯಾಯಾಧೀಶ ವಿ ಶ್ರೀಶಾನಂದ ಅವರು ಗೋರಿಪಾಳ್ಯವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ್ದರು.
- ನ್ಯಾಯಮೂರ್ತಿ ಕೆ ಹೇಮಾ ಅವರ ವರದಿಯು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಚಿತ್ರರಂಗದಲ್ಲಿ ಯುವ ನಟಿಯರಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂಬುದನ್ನು ವರದಿಯಲ್ಲಿ ಹೇಳಲಾಗಿತ್ತು.
- ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂಬುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿದೆ. ಅಂಬೇಡ್ಕರ್ ಹೆಸರು ಜಪ ಮಾಡುವ ಬದಲಿಗೆ ದೇವರ ಹೆಸರನ್ನು ಜಪಿಸಿದ್ದರೆ ಏಳೇಳು ಜನ್ಮದಲ್ಲೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತುʼ ಎಂದು ಹೇಳಿದ್ದರು. ಈ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿತ್ತು.