ಬೆಂಗಳೂರು:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಘನಘೋರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ವಿದ್ಯಾರ್ಥಿನಿಯೊಬ್ಬಳು ಬಲಿಯಾಗಿದ್ದಾಳೆ. ಬೆಂಗಳೂರಿನ ಬೂದಿಗೆರೆ ಕ್ರಾಸ್ ಬಳಿ ಈ ಒಂದು ಅಪಘಾತ ಸಂಭವಿಸಿದ್ದು, ದ್ವಿತೀಯ ವರ್ಷದ ಬಿಕಾಂ ಪದವಿ ಓದುತ್ತಿದ್ದ ಧನುಶ್ರೀ (22) ವಿದ್ಯಾರ್ಥಿನಿ ದುರ್ಮರಣ ಹೊಂದಿದ್ದಾಳೆ. ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ವಿದ್ಯಾರ್ಥಿನಿ ಧನುಶ್ರೀ ರಸ್ತೆಯಲ್ಲಿ ಗುಂಡಿ ಇರುವುದರಿಂದ ಅದನ್ನು ತಪ್ಪಿಸಲು ಹೋಗಿ ವಿದ್ಯಾರ್ಥಿಗೆ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಟಿಪ್ಪರ್ ಹರಿದಿದೆ. ಸದ್ಯ ಘಟನಾ ಸ್ಥಳಕ್ಕೆ ಕೆಆರ್ ಪುರಂ ಸಂಚಾರಿ ಠಾಣೆ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಕುರಿತು ನಿನ್ನೆ ತಾನೇ ಸಿಎಂ ಸಿದ್ದರಾಮಯ್ಯ ಬೆಂಗಳೂರು ಸಿಟಿ ರೌಂಡ್ ಮಾಡಿ ಅಧಿಕಾರಿಗಳಿಗೆ ಒಂದು ತಿಂಗಳಲ್ಲಿ ರಸ್ತೆ ಗುಂಡಿ ಮುಚ್ಚುವಂತೆ ಕಡಕ್ ಸೂಚನೆ ನೀಡಿದ್ದಾರೆ.ಇದರ ಬೆನ್ನಲ್ಲೆ, ರಸ್ತೆ ಗುಂಡಿ ತಪ್ಪಿಸಲು ಹೋಗಿ ಟಿಪ್ಪರ್ ಡಿಕ್ಕಿಯಾಗಿ ವಿದ್ಯಾರ್ಥಿನಿ ಬಲಿಯಾಗಿರುವುದು ದುರಾದೃಷ್ಟಕರ.
ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದ ಮೂವರು ಯುವಕರು ಸಾವನ್ನಪ್ಪಿರುವಂತಹ ಭೀಕರ ಘಟನೆಯೊಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಎಡೇಗೌಡನಹಳ್ಳಿ ಬಳಿ ಶನಿವಾರ ರಾತ್ರಿ ನಡೆದಿದೆ. ಒಂದೇ ಬೈಕ್ ನಲ್ಲಿ ಮೂವರು ಯುವಕರು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು. ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವಾಗ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಇರ್ಫಾನ್ (25), ತರುಣ್ (26) ಹಾಗೂ ರೇವಂತ್ (27) ಎಂದು ಗುರುತಿಸಲಾಗಿದೆ. ಹಳ್ಳಿಮೈಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮೃತರು ಹೊಳೆನರಸೀಪುರ ಪಟ್ಟಣದ ಹೇಮಾವತಿ ಬಡಾವಣೆಯ ನಿವಾಸಿಗಳು ಎನ್ನಲಾಗುತ್ತಿದೆ. ಕೆಎಸ್ಆರ್ಟಿಸಿ ಬಸ್ ಹಾಸನದಿಂದ ಮೈಸೂರು ಕಡೆಗೆ ಹೊರಟಿತ್ತು. ಮೈಸೂರು ಕಡೆಯಿಂದ ಒಂದೇ ದ್ವಿಚಕ್ರ ವಾಹನದಲ್ಲಿ ಮೂವರು ಯುವಕರು ಬರುತ್ತಿದ್ದರು. ಈ ವೇಳೆ ಭೀಕರ ಅಪಘಾತ ಸಂಭವಿಸಿದೆ. ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ, ನಗರದ ಹೀರಾಪುರ ಮತ್ತು ಹಾಗರಗಾ-ವೆಂಕಟಬೇನೂರ ರಸ್ತೆಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಹಾಗರಗಾ ರಸ್ತೆಯ ಫೈಜಲ್ ರೆಹಮಾನ್ ತಂದೆ ಮೊಹಮ್ಮದ್ ಸುಲ್ತಾನ್ (15) ಟ್ಯೂಷನ್‍ಗೆ ಬೈಕ್ ಮೇಲೆ ಹೀರಾಪುರ ಕಡೆಗೆ ಹೋಗುತ್ತಿದ್ದಾಗ ತಲೆಯ ಮೇಲಿನ ಟೋಪಿ ಕೆಳಗೆ ಬಿದ್ದಿದ್ದು, ಅದನ್ನು ತೆಗೆದುಕೊಳ್ಳಲು ಹೋದಾಗ ರಿಂಗ್ ರೋಡ್ ಕಡೆಯಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಫೈಜಲ್ ರೆಹಮಾನ್‍ನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದೆ.








