ಎಚ್​​​ಎಂಟಿಗೆ ಅರಣ್ಯ ಭೂಮಿ ಅಕ್ರಮ ಪರಭಾರೆ : ಹಿರಿಯ ಅಧಿಕಾರಿಗಳಿಗೂ ಸಚಿವ ಈಶ್ವರ ಖಂಡ್ರೆ ನೋಟಿಸ್

ಬೆಂಗಳೂರು

   ಎಚ್​ಎಂಟಿಗೆ ಅರಣ್ಯ ಭೂಮಿ ಅಕ್ರಮ ಪರಭಾರೆ ಆರೋಪ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೊಟೀಸ್ ನೀಡಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿದ ಅಧಿಕಾರಿಗಳಿಗೆ ಕಾರಣ ಕೇಳಿ (ಶೋಕಾಸ್) ನೊಟೀಸ್ ನೀಡಲು ಸೂಚನೆ ನೀಡಿದ್ದಾರೆ.

   ಪೀಣ್ಯ- ಜಾಲಹಳ್ಳಿ ಪ್ಲಾಂಟೇಷನ್​​ನಲ್ಲಿ ಎಚ್ಎಂಟಿ ಪ್ರದೇಶದ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಈ ಸಂಬಂಧ ಖಂಡ್ರೆ ಸೂಚನೆ ನೀಡಿದ್ದಾರೆ.

   ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 17ರಡಿಯಲ್ಲಿ ಮೀಸಲು ಅರಣ್ಯ ಎಂದು ಅಧಿಸೂಚನೆಯಾದ ಬಳಿಕ ಆ ಅರಣ್ಯವನ್ನು ‘ಯಾವತ್ತೂ ಅರಣ್ಯವಲ್ಲ’ ಎಂದು ಘೋಷಿಸಬೇಕಾದರೆ ವಿಧಾನಮಂಡಲದ ಉಭಯ ಸದನಗಳಲ್ಲಿ ನಿರ್ಣಯ ಆಗಬೇಕು. ಕರ್ನಾಟಕ ಸರ್ಕಾರದ ಕಾರ್ಯ ಕಲಾಪಗಳ ನಿರ್ವಹಣಾ ನಿಯಮಾವಳಿ 1977ರ ಪ್ರಥಮ ಪರಿಶಿಷ್ಟದಲ್ಲಿ ಕೂಡ ಯಾವುದೇ ಇತರ ಸರ್ಕಾರಿ ಇಲಾಖೆಗೆ ಸರ್ಕಾರಿ ಭೂಮಿ ವರ್ಗಾವಣೆ ಮಾಡಬೇಕಾದ ಸಂದರ್ಭದಲ್ಲಿ ಅದರ ಮೌಲ್ಯ 5ಕೋಟಿ ರೂ.ಗಿಂತ ಹೆಚ್ಚಾಗಿದ್ದಲ್ಲಿ, ಸಚಿವ ಸಂಪುಟದ ಪೂರ್ವಾನುಮತಿ ಪಡೆಯಬೇಕು.

   ಆದರೆ ಕೆಲವು ಅಧಿಕಾರಿಗಳು ಸಚಿವರ ಗಮನಕ್ಕೂ ತಾರದೆ, ಸಚಿವ ಸಂಪುಟದ ಅನುಮತಿಯೂ ಇಲ್ಲದೆ ತಮ್ಮ ಮಟ್ಟದಲ್ಲೇ ಸರ್ಕಾರದ ಆದೇಶ ಮಾಡಿ ಸುಪ್ರೀಂಕೋರ್ಟ್​​​ಗೆ ಅರ್ಜಿ ಸಲ್ಲಿಸಿರುತ್ತಾರೆ. ಇದು ಶಂಕಾಸ್ಪದ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆಯಲ್ಲಿ ಉಲ್ಲೇಖಿಸಿದ್ದಾರೆ.

   ಎಚ್ಎಂಟಿ ಅರಣ್ಯ ಭೂಮಿಯನ್ನು ಸರ್ಕಾರಿ ಮತ್ತು ಖಾಸಗಿಯವರಿಗೆ ಪರಭಾರೆ ಮಾಡಲು ನಿರಾಕ್ಷೇಪಣಾ ಪತ್ರವನ್ನೂ ನೀಡಿದೆ. ಇದರಿಂದಾಗಿ ಎಚ್ಎಂಟಿ ಈವರೆಗೆ 165 ಎಕರೆ ಜಮೀನನ್ನು, 313 ಕೋಟಿ ರೂ.ಗೆ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಿರುತ್ತದೆ. ಎಚ್ಎಂಟಿ ಪ್ರದೇಶದ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಅಧಿಕಾರಿಗಳು ತರಾತುರಿಯಿಂದ ವರ್ತಿಸಿದ್ದರು. ತರಾತುರಿಯಲ್ಲಿ ಸರ್ಕಾರಿ ಆದೇಶ ಮಾಡಿಸಿ, ಸುಪ್ರೀಂಕೋರ್ಟ್​​ಗೆ ಮಧ್ಯಂತರ ಅರ್ಜಿ (ಐ.ಎ.)ಸಲ್ಲಿಸಿರುವುದೂ ಅನುಮಾನಕ್ಕೆ ಕಾರಣವಾಗಿದೆ ಎಂದು ಉಲ್ಲೇಖಿಸಲಾಗಿದೆ. 

   ಸದ್ಯ ಎಲ್ಲ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಖಂಡ್ರೆ ಸೂಚನೆ ನೀಡಿದ್ದಾರೆ. 7 ದಿನಗಳ ಒಳಗಾಗಿ ಉತ್ತರ ಪಡೆದು, ಮುಂದಿನ ಕ್ರಮ ಜರುಗಿಸಲು ಖಂಡ್ರೆ ಸೂಚನೆ ನೀಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap