ಬೆಂಗಳೂರು :
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ತಂಡ ಬೆಂಗಳೂರಿನ ಹೊರವಲಯದಲ್ಲಿ ಸೆಟ್ ಹಾಕಿತ್ತು. ಸೆಟ್ ಹಾಕಲು ಸಾಕಷ್ಟು ಮರಗಳನ್ನು ಕಡಿಯಲಾಗಿದೆ ಎಂಬ ಆರೋಪ ಬಂದಿದೆ. HMTಗೆ ಸಂಬಂಧಿಸಿದ ಜಾಗದಲ್ಲಿ ಸೆಟ್ ಹಾಕಲಾಗಿತ್ತು ಎನ್ನಲಾಗಿತ್ತು. ಇದಕ್ಕೆ ಸಂಬಂಧಿಸಿ ಎಚ್ಎಂಟಿ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಅವರು ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಈ ಜಾಗಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಯಶ್ ನಟನೆಯ ‘ಟಾಕ್ಸಿಕ್’ ತಂಡದವರು ಎಚ್ಎಂಟಿ ಜಾಗದಲ್ಲಿ ಸೆಟ್ ಹಾಕಿದ್ದರು ಎಂದು ಹೇಳಲಾಗಿತ್ತು. ಆದರೆ, ಇದು ತಮ್ಮ ಜಾಗ ಅಲ್ಲ ಎಂದು ಎಚ್ಎಂಟಿ ಹೇಳಿದೆ. ‘ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಶೂಟಿಂಗ್ಗಾಗಿ ಮರ ಕಡಿಯಲಾಗಿದೆ ಎಂದು ಹೇಳಲಾದ ಜಾಗವು ಕೆನರಾ ಬ್ಯಾಂಕ್ ಒಡೆತನದಲ್ಲಿದೆ’ ಎಂದು ಎಚ್ಎಂಟಿ ಹೇಳಿದೆ.
‘ಯಾವುದೇ ಸಿನಿಮಾ ತಂಡದವರಿಗೆ ಕೆನರಾ ಬ್ಯಾಂಕ್ ಆಸ್ತಿಯನ್ನು ಬಳಕೆ ಕೊಟ್ಟರೆ ಅದಕ್ಕೂ ಎಚ್ಎಂಟಿಗೂ ಸಂಬಂಧ ಇಲ್ಲ. ಈ ಪ್ರದೇಶದಲ್ಲಿರುವ ಎಚ್ಎಂಟಿ ಮಾಲೀಕತ್ವದ ಭೂಮಿಯಲ್ಲಿ ಯಾವುದೇ ಮರಗಳನ್ನು ಕತ್ತರಿಸಲಾಗಿಲ್ಲ’ ಎಂದಿದ್ದಾರೆ ಅವರು.
ಈ ಮೊದಲು ಮಾತನಾಡಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ‘ಹೆಚ್ಎಂಟಿ ತನ್ನ ವಶದಲ್ಲಿದ್ದ ಜಮೀನನ್ನು ಮಾರಾಟ ಮಾಡಿದೆ. ಮರ, ಗಿಡ ಎಲ್ಲಾ ಕಡಿದು ಸಿನಿಮಾ ಚಿತ್ರೀಕರಣಕ್ಕೆ ಬಾಡಿಗೆ ಕೊಟ್ಟು, ದುಡ್ಡು ಮಾಡ್ತಿದ್ದಾರೆ. ಎಲ್ಲಾ ರೀತಿಯ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಅವರಿಗೆ ಯಾವುದೇ ಅಧಿಕಾರ ಇಲ್ಲ’ ಎಂದು ಈಶ್ವರ ಖಂಡ್ರೆ ಅವರು ಹೇಳಿದ್ದರು. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ದೊಡ್ಡ ಬಜೆಟ್ನಲ್ಲಿ ರೆಡಿ ಆಗುತ್ತಿದೆ. ಈಗಾಗಲೇ ಈ ಭಾಗದಲ್ಲಿ ಒಂದು ತಿಂಗಳ ಶೂಟಿಂಗ್ ನಡೆದಿದೆ. ಈ ಸಿನಿಮಾನ 2025ರ ಏಪ್ರಿಲ್ನಲ್ಲಿ ರಿಲೀಸ್ ಮಾಡಲು ಸಾಧ್ಯವಿಲ್ಲ ಎಂದು ಯಶ್ ಅವರು ಇತ್ತೀಚಿಗಿನ ಸಂದರ್ಶನದಲ್ಲಿ ಹೇಳಿದ್ದರು.
