ಪ್ರತಿಭಟನೆ ಮಾಡುವುದು ಅವರ ಅಧಿಕಾರ : ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದಲ್ಲ

ಬೆಂಗಳೂರು: 

     ಮುಂಗಾರು ಮಳೆ ವೈಫಲ್ಯದಿಂದ ನಮ್ಮ ರೈತರ ಬೆಳೆಗಳಿಗೆ, ಕುಡಿಯಲು ನೀರಿಲ್ಲದಿರುವಾಗ ತಮಿಳು ನಾಡಿಗೆ ಕರ್ನಾಟಕ ಸರ್ಕಾರ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಮಂಡ್ಯ ಜಿಲ್ಲೆಯಲ್ಲಿ ಬಂದ್ ತೀವ್ರವಾಗಿದೆ. ಕಾವೇರಿದ ಕಿಚ್ಚು ಉಂಟಾಗಿದೆ ಮದ್ದೂರು ಭಾಗದಲ್ಲಿ ಪ್ರತಿಭಟನಾಕಾರರ ಹೋರಾಟ ತೀವ್ರವಾಗಿದೆ. 

    ಬೆಂಗಳೂರು-ಮೈಸೂರು ಭಾಗದಲ್ಲಿ ರಸ್ತೆ ತಡೆ ನಡೆಸಿ, ಮಾನವ ಸರಪಳಿ ನಿರ್ಮಿಸಿ ಹೋರಾಟ ಮಾಡುತ್ತಿದ್ದಾರೆ. ರಸ್ತೆ ಮೇಲೆ ಮಲಗಿ ಸಂಚಾರಕ್ಕೆ ತಡೆಯನ್ನುಂಟುಮಾಡುತ್ತಿದ್ದಾರೆ. ಪ್ರತಿಭಟನೆಯಲ್ಲಿ ರೈತ ಸಂಘಟನೆಗಳು, ಜನಪರ, ಮಹಿಳಾ ಸಂಘಟನೆಗಳು, ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ. 

     ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಕರುನಾಡಲ್ಲಿ ಕಿಚ್ಚು ಹಬ್ಬಿಸಿದೆ. ಮಂಡ್ಯ ಬಂದ್ ಆಗಿದ್ದು ಬೆಂಗಳೂರಿನಲ್ಲಿ ಸಾಲು ಸಾಲು ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ರೈತರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಕೂಡ ಬಂದ್ ಆಗಿದೆ.

    ಹೊನ್ನಲಗೆರೆಯಲ್ಲಿ ಬೆಳಗ್ಗೆಯಿಂದಲೇ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಹೊನ್ನಲಗೆರೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಯಿಂದ ಪ್ರತಿಭಟನೆ ನಡೆಯುತ್ತಿದೆ.  ಬೆಂಗಳೂರಿನಲ್ಲೂ ಕಾವೇರಿ ಹೋರಾಟ ತೀವ್ರಗೊಳ್ಳುತ್ತಿದೆ. ಬೆಂಗಳೂರು ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಹೈಅಲರ್ಟ್​ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡುವಂತೆ ಬೆಂಗಳೂರು ಪೊಲೀಸ್​​ ಕಮಿಷನರ್ ಬಿ.ದಯಾನಂದ್ ಆಯಾ ವಲಯ ಹೆಚ್ಚುವರಿ ಆಯುಕ್ತರು, ಡಿಸಿಪಿಗಳಿಗೆ ಸೂಚನೆ ಕೊಟ್ಟಿದ್ದಾರೆ.

    ತಮಿಳುನಾಡು ಕಡೆ ಹೊರಡುವ ಬಸ್​ಗಳು, ಬಸ್​ಸ್ಟಾಪ್​ಗಳ ಬಳಿ, ತಮಿಳಿಗರು ವಾಸಿಸುವ ಕಡೆ ಮತ್ತು 2016 ರಲ್ಲಿ ಕಾವೇರಿ ಗಲಾಟೆ ನಡೆದ ಏರಿಯಾಗಳಲ್ಲಿ ತೀವ್ರ ನಿಗಾವಹಿಸುವಂತೆ ಸೂಚಿಸಲಾಗಿದೆ. ನಗರದ ಪಶ್ಚಿಮ ಹಾಗೂ ಉತ್ತರ ವಿಭಾಗದಲ್ಲಿ, ಮೈಸೂರು ರಸ್ತೆ ಸುತ್ತಮುತ್ತಲಿನ ಏರಿಯಾಗಳು, ಹೊಸೂರು ರಸ್ತೆ ಅಕ್ಕಪಕ್ಕದ ಏರಿಯಾಗಳು, ಆರ್ ಆರ್ ನಗರ, ಬ್ಯಾಟರಾಯನಪುರ, ಸ್ಯಾಟಲೈಟ್ ಆಸುಪಾಸು, ಮಾರ್ಕೆಟ್ ಸೇರಿ ಪ್ರಮುಖ ಏರಿಯಾಗಳಲ್ಲಿ ಮುನ್ನೆಚ್ಚರಿಕೆ ಸಲುವಾಗಿ ವ್ಯಾಪಕ ಗಸ್ತು ವಹಿಸುವಂತೆ ಹೇಳಿದ್ದಾರೆ.

    ರಾಜ್ಯದ ಹಿತ ಕಾಪಾಡುವುದಕ್ಕಾಗಿ ಪ್ರತಿಭಟನೆ ಮಾಡುವುದು ಅವರ ಹಕ್ಕು. ಆದರೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಹೋರಾಟ ಮಾಡಬೇಕೆಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap