ಬೆಂಗಳೂರು:
ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಅಮಾನತುಗೊಂಡಿರುವ ಜೆಡಿಎಸ್ ಮುಖಂಡ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ಅಲ್ಲಿಯೇ ಬಂಧಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಬುಧವಾರ ಹೇಳಿದ್ದಾರೆ.
ಮೇ 31 ರಂದು ತನ್ನ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ(ಎಸ್‌ಐಟಿ) ಮುಂದೆ ಹಾಜರಾಗುವುದಾಗಿ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ ಎರಡು ದಿನಗಳ ನಂತರ ಪರಮೇಶ್ವರ ಅವರು ಈ ಹೇಳಿಕೆ ನೀಡಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇ 30 ರಂದು ಮ್ಯೂನಿಚ್‌ನಿಂದ ಬೆಂಗಳೂರಿಗೆ ಹಿಂತಿರುಗಲು ವಿಮಾನ ಟಿಕೆಟ್ ಕಾಯ್ದಿರಿಸಿದ್ದಾರೆ ಮತ್ತು ಮೇ 31ರಂದು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ನಿರೀಕ್ಷೆಯಿದೆ.
ಈ ಕುರಿತು ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ ಅವರು, ಪ್ರಜ್ವಲ್ ವಿರುದ್ಧ ವಾರೆಂಟ್ ಜಾರಿಯಾಗಿರುವುದರಿಂದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಎಸ್‌ಐಟಿ ಕಾಯುತ್ತಿದೆ. ಆತನನ್ನು ಬಂಧಿಸಿ ಹೇಳಿಕೆ ಪಡೆಯಲಿದ್ದಾರೆ(ಎಸ್‌ಐಟಿ) ಎಂದರು.
ಪ್ರಜ್ವಲ್ ರೇವಣ್ಣ ಲ್ಯಾಂಡ್ ಆದ ತಕ್ಷಣ ವಿಮಾನ ನಿಲ್ದಾಣದಲ್ಲಿಯೇ ಬಂಧಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ, “ವಿಮಾನ ನಿಲ್ದಾಣದಲ್ಲಿಯೇ ಅವರನ್ನು ಬಂಧಿಸಬೇಕಾಗಿದೆ. ಏಕೆಂದರೆ ಅವರ ವಿರುದ್ಧ ವಾರಂಟ್ ಹೊರಡಿಸಲಾಗಿದೆ. ಆದ್ದರಿಂದ ಅವರನ್ನು ಬಂಧಿಸಬೇಕಾಗುತ್ತದೆ” ಎಂದರು.
ಅಶ್ಲೀಲ ವಿಡಿಯೋ ಬಹಿರಂಗವಾದ ಬಳಿಕ ವಿದೇಶಕ್ಕೆ ಪಲಾಯನ ಮಾಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇತ್ತೀಚೆಗಷ್ಟೇ ವಿಡಿಯೋ ಬಿಡುಗಡೆ ಮಾಡಿ, ಮೇ 31ರಂದು ಭಾರತಕ್ಕೆ ವಾಪಸ್ಸಾಗುವುದಾಗಿ ಹೇಳಿದ್ದರು. ರೇವಣ್ಣ ಜರ್ಮಿನಿಯಿಂದ ಬೆಂಗಳೂರಿಗೆ ಬರಲು ಲುಫ್ತಾನ್ಸಾ ಏರ್ಲೈನ್ಸ್ನಲ್ಲಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದಾರೆ.