ಬೆಂಗಳೂರು:
ಸಿಟಿ ರವಿ ಅವರನ್ನು ಬಂಧನಕ್ಕೊಳಪಡಿಸಿರದಿದ್ದಿದ್ದರೆ ಮತ್ತಷ್ಟಪ ದೊಡ್ಡ ಸಮಸ್ಯೆಯಾಗುತ್ತಿತ್ತು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಕೋರ್ಟ್ನಲ್ಲಿರುವುದರಿಂದ ಯಾವ ವಿಚಾರಗಳನ್ನು ಅದರ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ಯಾವುದೇ ಪ್ರಶ್ನೆಗೂ ಉತ್ತರಿಸುವುದಿಲ್ಲ. ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ನಡೆದುಕೊಂಡಿದ್ದೇವೆ ಎಂಬ ವಾದ ಇರುತ್ತದೆ. ಪ್ರಕರಣ ಕೋರ್ಟ್ನಲ್ಲಿರುವುದರಿಂದ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಅವರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಬೇರೆಬೇರೆ ರೀತಿಯಲ್ಲಿ ಮಾಹಿತಿ ಕೇಳುವ ಸಂದರ್ಭದಲ್ಲಿ, ಇವರನ್ನು ಕೇಳದೆ ಜಡ್ಜ್ಮೆಂಟ್ ಆಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅದರ ಬಗ್ಗೆ ಟೀಕೆ ಮಾಡಲು ಆಗಲ್ಲ. ಸಭಾಪತಿಗಳು ದಾಖಲೆಗಳಿಲ್ಲ ಎಂದು ಹೇಳಿರುವುದು ನನಗೆ ಗೊತ್ತಿಲ್ಲ. ಕೆಲವರು ಸದನ ಮುಗಿದ ಬಳಿಕ ಘಟನೆ ನಡೆಯಿತು ಎಂದು ಹೇಳುತ್ತಿದ್ದಾರೆ. ಆದ್ದರಿಂದ ಸಭಾಪತಿಗಳಿಗೆ ಇದರಲ್ಲಿ ಏನು ಹೇಳುವುದಕ್ಕೆ ಆಗಲ್ಲ ಎಂದು ಕೆಲವರು ವಿಶ್ಲೇಷಣೆ ಮಾಡುತ್ತಾರೆ. ಇನ್ನು ಕೆಲವರು ಸದನ ನಡೀತಾ ಇತ್ತು ಎಂದು ವಿಶ್ಲೇಷಣೆ ಮಾಡಿದ್ದಾರೆ. ಅದನ್ನೆಲ್ಲ ಈಗ ನಾನು ಮಾತನಾಡಲು ಹೋಗಲ್ಲ ಎಂದು ತಿಳಿಸಿದರು.
ಗೃಹ ಇಲಾಖೆ ಓವರ್ ಟೇಕ್ ಮಾಡಿ ಈ ಬೆಳವಣಿಗೆ ಆಯ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ರೀತಿ ಮಾಡಲು ಆಗುತ್ತಾ? ನಮ್ಮ ಮೇಲೆ ಮುಖ್ಯಮಂತ್ರಿಗಳು ಇದ್ದಾರೆ. ಮುಖ್ಯಮಂತ್ರಿ ಬಿಟ್ಟರೆ ಬೇರೆ ಯಾರು ಇಲ್ಲ. ಗೃಹ ಸಚಿವರ ಮೇಲೆ ಮಂತ್ರಿಗಳ ಮೇಲೆ ಮುಖ್ಯಂಮಂತ್ರಿ ಇದ್ದಾರೆ. ಅಷ್ಟು ಬಿಟ್ರೆ ಬೇರೇನೂ ಕಾಣಿಸುತ್ತಿಲ್ಲ. ನನಗೆ ಬೇಕಾದಷ್ಟು ಸ್ವಾತಂತ್ರ್ಯ ಇದೆ ಎಂದರು.
ನಾಲ್ಕು ಜಿಲ್ಲೆಗಳಲ್ಲಿ ಇಡೀ ರಾತ್ರಿ ಸುತ್ತಿಸಿದ ಆರೋಪ ವಿಚಾರವಾಗಿ ಮಾತನಾಡಿ, ‘ಅದರ ಮಾಹಿತಿ ಇಲ್ಲ. ಅದನ್ನೇ ಪೊಲೀಸರಿಂದ ಮಾಹಿತಿ ಕೇಳುತ್ತಿದ್ದೇನೆ. ಮಾಹಿತಿ ಬಂದ ಬಳಿಕ ತಿಳಿಸುತ್ತೇನೆ ಎಂದರು.
ಸುವರ್ಣಸೌಧದಲ್ಲಿ ಹಲ್ಲೆ ಮಾಡಲು ಮುಂದಾದ 24 ಜನರನ್ನು ಅಂದೇ ಬಂಧನ ಮಾಡಲಾಯಿತು. ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಮುನ್ನೆಚ್ಚರಿಕೆ ನೀಡಲಾಗಿತ್ತು. ಹೀಗಾಗಿ ಸಿಟಿ ರವಿ ಅವರನ್ನು ಬಂಧಿಸಲಾಗಿದ್ದು. ಇಲ್ಲದಿದ್ದರೆ ಮತ್ತಷ್ಟು ದೊಡ್ಡ ಸಮಸ್ಯೆ ಆಗುತ್ತಿತ್ತು ಎಂದು ತಿಳಿಸಿದರು.
ಕೊಲೆಗೆ ಯತ್ನ ನಡೆದಿದೆ ಆರೋಪ ಕುರಿತು ಮಾತನಾಡಿ, ನಾನೂ ಅವರ ಹೇಳಿಕೆ ಗಮನಿಸಿದ್ದೇನೆ. ಮಾಧ್ಯಮದಲ್ಲೂ ಕೊಲೆ ಬೆದರಿಕೆ ಬಗ್ಗೆ ಹೇಳಿದ್ದಾರೆ. ಎಫ್ಐಆರ್ ಆಗದಿರುವ ಬಗ್ಗೆ ವಿಚಾರ ಮಾಡೋಣ ಎಂದರು.